

ಕುಶಾಲನಗರ: ಪಟ್ಟಣದ ನಿವಾಸಿಯೊಬ್ಬರು ಪ್ರಧಾನಿ ಕಚೇರಿಯ ಮೂಲಕ ತಮಗೆ ಅಗತ್ಯವಾದ ಔಷಧ ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಜಿ.ಕೆ. ಗೋವಿಂದರಾಜ್ ಎಂಬುವರು ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದು, ಹೋಮಿಯೋಪಥಿ ಔಷಧ ತೆಗೆದುಕೊಳ್ಳುತ್ತಿದ್ದರು. 10 ದಿನಗಳ ಹಿಂದೆ ಔಷಧ ಖಾಲಿಯಾಗಿತ್ತು. ವಿತರಕರು ಅಂಚೆ ಮೂಲಕ ಔಷಧ ಕಳುಹಿಸುವ ಪ್ರಯತ್ನ ಮಾಡಿ ವಿಫಲರಾಗಿದ್ದರು.
ಕಡೆಗೆ, ಗೋವಿಂದರಾಜ್ ಅವರ ಮಗ ಸುಖೇಶ್‌ರಾಜ್ ಪ್ರಧಾನಿ ಕಚೇರಿಗೆ ಟ್ವೀಟ್ ಮಾಡಿ ಔಷಧಕ್ಕಾಗಿ ವಿನಂತಿಸಿದರು. ಇದಾದ 5 ದಿನಗಳಲ್ಲಿ ದಾವಣಗೆರೆಯಿಂದ ಸ್ಪೀಡ್‌ಪೋಸ್ಟ್ ಮೂಲಕ ಬುಧವಾರ ಔಷಧ ತಲುಪಿದೆ.
ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ರಾಜ್ಯ ಅಂಚೆ ಇಲಾಖೆ ಮುಖ್ಯಸ್ಥೆ ಸರಸ್ವತಿ ದೂರವಾಣಿ ಕರೆ ಮಾಡಿ, ಆದಷ್ಟು ಬೇಗ ಔಷಧ ತಲುಪಿಸುವ ವ್ಯವಸ್ಥೆ ಮಾಡಲಾಗುವುದೆಂದು ಭರವಸೆ ನೀಡಿದ್ದರು ಎಂದು ಸುಖೇಶ್ ತಿಳಿಸಿದರು.