ಪೊಲೀಸರಿಗೆ ಸವಲತ್ತು ಒದಗಿಸುವುದು ಆದ್ಯ ಕರ್ತವ್ಯ

kgl (3)
ಕಾರ್ಗಲ್‌ನಲ್ಲಿ ನೂತನ ಪೊಲೀಸ್ ವಸತಿಗೃಹಗಳ ಕೀಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಹಸ್ತಾಂತರಿಸಿದರು. ಅನಿಲ್‌ಕುಮಾರ್ ಭೂಮರೆಡ್ಡಿ, ಗೋಪಾಲಕೃಷ್ಣ ನಾಯಕ್, ಮಹಾಬಲೇಶ್ವರ್ ನಾಯಕ್, ಹೊಳೆಬಸಪ್ಪ ಹೊಳಿ, ಎಂ.ರಾಜು ಇತರರಿದ್ದರು.
Published on

ಕಾರ್ಗಲ್: ನಾಗರಿಕ ಸಮಾಜದ ಶಾಂತಿ ಮತ್ತು ಸ್ವಾಸ್ಥೃ ಕಾಪಾಡುತ್ತಿರುವ ಪೊಲೀಸ್ ಇಲಾಖೆಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯ. ಇಲಾಖೆಗೆ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಪಟ್ಟಣದ ನೂತನ ಪೊಲೀಸ್ ವಸತಿ ಗೃಹಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದಾ ಬೇರೆಯವರ ಸಮಸ್ಯೆಗಳನ್ನು ಆಲಿಸುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮಸ್ಯೆಗಳನ್ನು ನಾವು ಸಹ ಆಲಿಸಬೇಕು. ಕೆಲಸದಿಂದ ದಣಿದು ಬಂದಾಗ ವಿಶ್ರಾಂತಿಗೆ ನೆಮ್ಮದಿಯ ವಾತಾವರಣ ಇರಬೇಕು ಎಂದರು.

ಎರಡು ವರ್ಷಗಳ ಹಿಂದೆ ಆರಂಭವಾದ 12 ಮನೆಗಳ ಸಂಕೀರ್ಣವನ್ನು 3.83 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಕಾಂಕ್ರೀಟ್ ವಾಲ್‌ಗೆ ಉದ್ದೇಶಿಸಿದ್ದಕ್ಕಿಂತ ಸ್ವಲ್ಪ ಜಾಸ್ತಿ ವೆಚ್ಚವಾಗಿದೆ. ಆದರೆ ಯಾವುದಕ್ಕೂ ಕಡಿಮೆ ಮಾಡಿಲ್ಲ. ಕಾರ್ಗಲ್ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಪೊಲೀಸ್ ಠಾಣೆ ಕಾಮಗಾರಿಯೂ ಮುಕ್ತಾಯದ ಹಂತದಲ್ಲಿದೆ ಎಂದು ತಿಳಿಸಿದರು.

ಸಾಗರದಲ್ಲಿ ಹಾಲಿ ಇರುವ ನಗರ ಠಾಣೆ ಜಾಗ ಹೆದ್ದಾರಿಗೆ ತೊಡಕಾಗಿದೆ. ಹಾಗಾಗಿ ತಾತ್ಕಾಲಿಕವಾಗಿ ಠಾಣೆಯನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು. ನೂತನ ಪೊಲೀಸ್ ಠಾಣೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು. ಇದಕ್ಕೆ ಗೃಹ ಸಚಿವರು ಸಮ್ಮತಿಸಿದ್ದಾರೆ ಎಂದರು.

ಮಳೆಗಾಲದಲ್ಲಿ ಸಾಗರ ಜೈಲಿನ ಕಾಂಪೌಂಡ್ ಬಿದ್ದುದರಿಂದ ಜೈಲನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ದುರಸ್ತಿ ಕಾರ್ಯವನ್ನು 1.80 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಶೀಘ್ರವೇ ಸಾಗರದ ಜೈಲನ್ನು ಮರು ಆರಂಭಿಸಲಾಗುವುದು. ಕಾರ್ಗಲ್ ಠಾಣೆಯ ಹಳೆಯ ಜೀಪು ತೀರಾ ಹದಗೆಟ್ಟಿದ್ದರಿಂದ ಇತ್ತೀಚಿಗೆ ಹೊಸ ಜೀಪು ನೀಡಲಾಗಿದೆ. ಜತೆಗೆ ರಿಪ್ಪನ್‌ಪೇಟೆ ಮತ್ತು ಆನಂದಪುರಕ್ಕೂ ಹೊಸ ಜೀಪು ನೀಡಲಾಗಿತ್ತು ಎಂದರು.

ಎಎಸ್ಪಿ ಅನಿಲ್‌ಕುಮಾರ್ ಭೂಮರೆಡ್ಡಿ, ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್, ಗ್ರಾಮಾಂತರ ಸಿಪಿಐ ಮಹಾಬಲೇಶ್ವರ್ ನಾಯಕ್, ಕಾರ್ಗಲ್ ಪಿಎಸ್‌ಐ ಹೊಳೆಬಸಪ್ಪ ಹೊಳಿ, ಪಪಂ ಅಧ್ಯಕ್ಷ ಎಂ.ರಾಜು, ಸದಸ್ಯರಾದ ಪಿ.ಮಂಜುನಾಥ್, ಕೆ.ಸಿ.ಹರೀಶ್, ಸತೀಶ್ ಮಹಾಲೆ, ಕೆಡಿಪಿ ಸದಸ್ಯೆ ಪ್ರಭಾವತಿ ಚಂದ್ರಕಾಂತ್, ಕಾಂಗ್ರೆಸ್ ಘಟಕದ ಅಧ್ಯಕ್ಷ ವಿ.ಸಂತೋಷ್‌ಕುಮಾರ್, ಆಶ್ರಯ ಸಮಿತಿ ಸದಸ್ಯರಾದ ಎಚ್.ಎಸ್.ಸಾದಿಕ್, ಎಸ್.ಎಲ್.ರಾಜ್‌ಕುಮಾರ್, ಪ್ರಮುಖರಾದ ಟಿ.ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net