

ಭಾರತದಲ್ಲಿ ಟೊಮ್ಯಾಟೋ ಬೆಲೆಗಳು ಗಗನಕ್ಕೇರಿದ್ದರೆ, ಜುಲೈ 20ರಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ಅಕ್ಕಿ ರಫ್ತು ನಿಷೇಧವನ್ನು ಹೇರುತ್ತಿದ್ದಂತೆಯೇ ಅಮೆರಿಕ ದೇಶದಲ್ಲಿ ಅಕ್ಕಿಯ ಬೆಲೆ ಚಂದ್ರಯಾನಕ್ಕೆ ಹೊರಟ ರಾಕೆಟ್ನಂತೆ ಒಮ್ಮೆಲೇ ಗಗನಕ್ಕೇರಿದೆ.
ಭಾರತದ ಮೋದಿ ಸರ್ಕಾರವು ಜುಲೈ 20ರಂದು ಬಾಸುಮತಿ ಅಕ್ಕಿಯನ್ನು ಬಿಟ್ಟು ಬೇರೆ ಎಲ್ಲಾ ತಳಿಯ ಅಕ್ಕಿಗಳಿಗೆ ರಫ್ತು ನಿಷೇಧವನ್ನು ಪ್ರಕಟಿಸಿತು. ಇದಕ್ಕೆ ಮುಖ್ಯ ಕಾರಣವೆಂದರೆ ಭಾರತದಲ್ಲಿ ಅತಿವೃಷ್ಟಿ, ಪ್ರವಾಹ ಮತ್ತು ಪ್ರಕೃತಿ ವೈಪರಿತ್ಯಗಳಿಂದಾಗಿ ಈ ವರ್ಷ ಭತ್ತದ ಉತ್ಪಾದನೆ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಅಕ್ಕಿಯ ಅಭಾವ ಮತ್ತು ಬೆಲೆ ಏರಿಕೆ ಆಗುವ ನೀರಿಕ್ಷೆಯಿದೆ. ಇದಕ್ಕೆ ಮುಂಜಾಗ್ರತ ಕ್ರಮವಾಗಿ ಭಾರತ ಸರ್ಕಾರವು ತಾತ್ಕಾಲಿಕ ರಫ್ತು ನಿಷೇಧದಂತಹ ಕಠಿಣ ನಿರ್ಧಾರವನ್ನು ತೆಗೆದುಕೊಂಡಿತು. ಜಾಗತಿಕ ಮಟ್ಟದಲ್ಲಿ ಭಾರತ ದೇಶದಿಂದಲೇ 40% ಅಕ್ಕಿ ರಫ್ತು ಆಗುತ್ತದೆ. ಇದರ ಜೊತೆಗೆ ಸತತವಾಗಿ ನಡೆಯುತ್ತಿರುವ ಯೂಕ್ರೇನ್ ಮತ್ತು ರಷ್ಯಾ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಎಲ್ಲ ಆಹಾರ ಧಾನ್ಯಗಳ ಬೆಲೆಗಳು ಹೆಚ್ಚಾಗುತ್ತಲಿವೆ. ಇಂತಹ ದುಸ್ಥಿತಿಯಲ್ಲಿ ಭಾರತ ತೆಗೆದುಕೊಂಡಿರುವ ಅಕ್ಕಿ ರಫ್ತು ನಿಷೇಧ ನಿರ್ಣಯವು ಅಮೆರಿಕ, ಯುರೋಪ್ ಸೇರಿದಂತೆ ಅನೇಕ ದೇಶಗಳಲ್ಲಿ ತೀವ್ರ ಪರಿಣಾಮವನ್ನು ದಿಢೀರನೇ ಉಂಟು ಮಾಡಿದೆ.
ಅನಿವಾಸಿ ದಕ್ಷಿಣ ಭಾರತದವರಿಗೆ ದೋಸೆ, ಇಡ್ಲಿ, ಪಡ್ಡು, ಬಿಸಿಬೇಳೆಬಾತ್, ಚಿತ್ರಾನ್ನ ಅಂದ್ರೆ ಪಂಚಪ್ರಾಣ. ಪ್ರತಿ ದಿನ ಅನ್ನವನ್ನು ಊಟ ಮಾಡದಿದ್ದರೆ ಸಮಾಧಾನ ಆಗುವುದಿಲ್ಲ. ಅನ್ನದ ಮೇಲೆ ಇಷ್ಟೊಂದು ಅವಲಂಬಿತವಾಗಿರುವ ದಕ್ಷಿಣ ಭಾರತದ ಜನರಿಗೆ ಸೋನಾ ಮಸೂರಿ ರೈಸ್ನ ರಫ್ತು ನಿಷೇಧವು ದೊಡ್ಡ ಸಮಸ್ಯೆಯನ್ನು ತಂದಿಟ್ಟಿದೆ.
ಸೋನಾ ಮಸೂರಿ ಅಕ್ಕಿಯು ಖಾಲಿಯಾಗುತ್ತಿದೆ ಮತ್ತು ಎಲ್ಲಿಯೂ ಸಿಗುತ್ತಿಲ್ಲ ಎಂಬ ಸುಳ್ಳು ಸುದ್ದಿಗಳು ಅಮೆರಿಕದಲ್ಲಿರುವ ಭಾರತೀಯರ ವಾಟ್ಸಾಪ್ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ ಎಲ್ಲರಲ್ಲೂ ಗಾಬರಿ ಹುಟ್ಟಿಸಿದೆ. ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದಲ್ಲಿ ಭಾರತೀಯರು ಮುಗಿಬಿದ್ದು ಒಬ್ಬೊಬ್ಬರು ಹತ್ತರಿಂದ ಹದಿನೈದು ಸೋನಾ ಮಸೂರಿ ಚೀಲಗಳನ್ನು ಖರೀದಿಸಿದ್ದಾರೆ. ಈ ವಿಡಿಯೋಗಳು ವೈರಲ್ ಆದ ಕೂಡಲೇ ಎಚ್ಚೆತ್ತ ಭಾರತೀಯ ಅಂಗಡಿಯವರು, "ಒಬ್ಬ ಗ್ರಾಹಕನಿಗೆ ಒಂದು ಚೀಲ ಸೋನಾ ಮುಸರಿ ರೈಸ್" ಎಂಬ ಕಂಡೀಶನ್ ಹಾಕಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಆದರೆ ಕೆಲವು ಸ್ವಾರ್ಥಿ ಮತ್ತು ದುರಾಸೆಯ ಭಾರತೀಯರು ಬೆಳಗಿನಿಂದ ಸಂಜೆಯ ತನಕ ಊರಲ್ಲಿರುವ ಎಲ್ಲ ಇಂಡಿಯನ್ ಸ್ಟೋರ್ಗೆ ಹೋಗಿ ಗಂಟೆಗಟ್ಟಲೆ ಸಾಲು ನಿಂತು ಸೋನಾ ಮಸೂರಿ ಬ್ಯಾಗ್ ತಂದು ಮನೆಯಲ್ಲಿ ಶೇಖರಿಸಿ ಇಟ್ಟಿದ್ದಾರೆ. ಅನಿವಾಸಿ ಭಾರತೀಯರು ಎಷ್ಟು ವಿದ್ಯಾಭಾಸ ಮಾಡಿದರೇನು? ಎಷ್ಟು ಡಿಗ್ರಿಗಳನ್ನು ಪಡೆದರೇನು? ಮನುಷ್ಯನ ಮೂಲ ಸ್ವಾರ್ಥ ಸ್ವಭಾವ ಹೋಗುವುದೇ? ಭಾರತ ಸರ್ಕಾರವು ಈ ರಫ್ತು ನಿಷೇಧ ತಾತ್ಕಾಲಿಕ ಎಂದು ಹೇಳಿದರೂ ಸಹ ಜನ ಸಾಮಾನ್ಯರು ಪ್ಯಾನಿಕ್ ಆಗಿ, ಪ್ರಳಯವಾದಂತೆ ವಿನಾಕಾರಣ ಹುಚ್ಚರಂತೆ ವರ್ತಿಸುತ್ತಿದ್ದಾರೆ. ಈ ಪರಿಸ್ಥಿತಿಯ ಲಾಭವನ್ನು ಪಡೆದು ಕೆಲ ಇಂಡಿಯನ್ ಸ್ಟೋರ್ ಮಾಲೀಕರು ಸೋನಾ ಮಸೂರಿ ರೈಸ್ ಬ್ಯಾಗುಗಳನ್ನು 200% ರಿಂದ 300% ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ.
ಟೆಕ್ಸಸ್ ರಾಜ್ಯದಲ್ಲಿ ಆದಷ್ಟು ಸೋನಾ ಮಸೂರಿ ರೈಸ್ನ ಪರದಾಟ ನ್ಯೂಯಾರ್ಕ್ ಸಿಟಿ ಮತ್ತು ರಾಜ್ಯದಲ್ಲಿ ಕಂಡು ಬರಲಿಲ್ಲ. ಇಲ್ಲಿಯ ಭಾರತೀಯರು ಒಂದು ಅಥವಾ ಎರಡು ಸೋನಾ ಮಸೂರಿ ಬ್ಯಾಗ್ಗಳನ್ನು ಮಾತ್ರ ಖರೀದಿಸಿ ತಮ್ಮ ಪರಿಪಕ್ವತೆ ತೋರಿಸಿದ್ದಾರೆ. ಜೊತೆಗೆ ಇಲ್ಲಿಯ ಇಂಡಿಯನ್ ಸ್ಟೋರ್ಗಳ ಮಾಲೀಕರು ಜನರಿಗೆ, "ಪ್ಯಾನಿಕ್ ಆಗಬೇಡಿ ಮತ್ತು ನಮ್ಮ ಗೋಡಾನಿನಲ್ಲಿ ಸಾಕಷ್ಟು ಅಕ್ಕಿಯ ಸಂಗ್ರಹವಿದೆ" ಎಂದು ಧೈರ್ಯ ಹೇಳುತ್ತಾ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪಕ್ಕದ ನ್ಯೂಜರ್ಸಿಯಲ್ಲಿ ಸೋನಾ ಮಸೂರಿ ರೈಸ್ನ ಅಭಾವ ಸ್ವಲ್ಪ ಜಾಸ್ತಿ ಕಂಡು ಬಂದಿದೆ.
ಸೋನಾ ಮಸೂರಿ ರೈಸ್ ತೀವ್ರ ಕೊರತೆಯಿದ್ದರೂ ಸಹಿತ, ಸ್ವಲ್ಪ ಸಮಾಧಾನದ ವಿಷಯವೇನೆಂದರೆ ಬಾಸುಮತಿ ರೈಸ್ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿದೆ. ಹಾಗಾಗಿ ಅಮೆರಿಕದಲ್ಲಿರುವ ಭಾರತೀಯರು ದೋಸೆ, ಇಡ್ಲಿ ಬದಲಿಗೆ ಬಾಸುಮತಿ ರೈಸ್ ಉಪಯೋಗಿಸಿ ತಯಾರಿಸುವ ಬಿರಿಯಾನಿಗೆ ಶಿಫ್ಟ್ ಆಗುತ್ತಿದ್ದಾರೆ. ಮುಂದಿನ ತಿಂಗಳುಗಳಲ್ಲಿ ಭಾರತದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತವನ್ನು ಬೆಳೆದು ಮೋದಿ ಸರ್ಕಾರವು ಅಕ್ಕಿ ರಫ್ತು ನಿಷೇಧವನ್ನು ಹಿಂತೆಗೆದುಕೊಳ್ಳುವಂತಾಗಲಿ ಎಂದು ಆಶಿಸೋಣ.