ರಾಜ್ಯದಲ್ಲಿ ಪ್ರಾಣಿ ಕಾಟದ ಸಂಕಟ

cheeta
Published on

ರಾಜ್ಯದಲ್ಲಿ ವನ್ಯಮೃಗ-ಮಾನವ ಸಂಘರ್ಷ ಹೊಸತೆನಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುವ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಅದರಲ್ಲೂ ಲಾಕ್​ಡೌನ್ ಜಾರಿಗೊಂಡ ಬಳಿಕ ಪ್ರಮುಖ ಹೆದ್ದಾರಿಗಳು ಹಾಗೂ ಅರಣ್ಯ ಪ್ರದೇಶಗಳಲ್ಲಿ ಹಾದುಹೋಗುವ ರಸ್ತೆಗಳಲ್ಲಿ ವಾಹನಗಳ ಓಡಾಟ ವಿರಳಗೊಂಡಿದ್ದರಿಂದ ಪ್ರಾಣಿಗಳು ಸ್ವಚ್ಛಂದವಾಗಿ ಹಳ್ಳಿಗಳ ಅಂಚಿನಲ್ಲೇ ವಿಹರಿಸುತ್ತಿವೆ. ಜತೆಗೆ ಜೀವಹಾನಿ, ಬೆಳೆನಾಶ ಹಾಗೂ ಸಾಕುಪ್ರಾಣಿಗಳ ಮೇಲಿನ ದಾಳಿಯೂ ಹೆಚ್ಚಾಗಿರುವುದು ಸಂಕಷ್ಟಕ್ಕೀಡುಮಾಡಿದೆ.

ಕರಾವಳಿಯಲ್ಲೂ ಸಂಕಷ್ಟ

ದ.ಕ.ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಕಾಡಾನೆ, ಕಾಡುಕೋಣ, ಕಾಡು ಹಂದಿ ಮೊದಲಾದ ಪ್ರಾಣಿ ಗಳು ಆಹಾರ ಅರಸಿಕೊಂಡು ಬಂದು ಹಾಡಹಗಲೇ ನಾಡಿನಲ್ಲಿ ಕಾಣಸಿಗುತ್ತಿವೆ. ಪಶ್ಚಿಮ ಘಟ್ಟಗಳಲ್ಲಿ ಕಾಡ್ಗಿಚ್ಚು ಉಂಟಾದಾಗ ಭಯಗೊಂಡು ನಾಡಿಗೆ ಬರುತ್ತಿವೆ. ಮಂಗಳೂರಿನಲ್ಲಿ ಮೇ 5ರಂದು ಬೆಳಗ್ಗೆ ಎರಡು ಕಾಡುಕೋಣಗಳು ಬಜ್ಪೆ ಪ್ರದೇಶದಿಂದ ಹಾದಿ ತಪ್ಪಿ ನಗರ ಪ್ರವೇಶಿಸಿದ್ದವು. ಜಿಲ್ಲೆಯ ವಿವಿಧ ಕಡೆ ಚಿರತೆ ಹಾವಳಿ ವ್ಯಾಪಕವಾಗಿತ್ತು. ಉಡುಪಿ ಜಿಲ್ಲೆಯ ಬೆಳ್ಮಣ್, ಕುಂದಾಪುರ ತಾಲೂಕಿನ ಕೋಟ, ಅಂಪಾರು ಹಾಗೂ ಪಡುಬಿದ್ರಿ ಸಮೀಪದ ಕೂರಾಲು ವಿನಲ್ಲಿ ಇತ್ತೀಚೆಗೆ ಚಿರತೆ ಹಾವಳಿ ಅಧಿಕವಾಗಿದೆ. ಆಗಿಂದಾಗ್ಗೆ ಚಿರತೆಗಳು ನಾಡಿಗೆ ಬಂದು ನಾಯಿ, ಕೋಳಿ ಮತ್ತಿತರ ಪ್ರಾಣಿಗಳನ್ನು ಬಲಿ ಪಡೆಯುತ್ತವೆ.

ಕೊಡಗಿನಲ್ಲಿ ಹುಲಿ ಘರ್ಜನೆ

ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದ ಗಡಿಯಲ್ಲಿರುವ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಇದೆ. ಹುಲಿ ಹಾವಳಿ ಕುಟ್ಟ ವ್ಯಾಪ್ತಿಯಲ್ಲಿ

ಹಾಗೂ ಆನೆ ಹಾವಳಿ ಪಾಲಿಬೆಟ್ಟ, ತಿತಿಮತಿ ವ್ಯಾಪ್ತಿಯಲ್ಲಿ ಕಂಡುಬರುತ್ತಿದೆ. ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲೂ ಕಾಡು ಪ್ರಾಣಿಗಳ ಉಪಟಳ ಹೆಚ್ಚಾ ಗಿದೆ. ಇತ್ತೀಚೆಗೆ ಚಿರತೆ ಹಾವಳಿಯೂ ಹೆಚ್ಚಾಗಿದೆ.

ಮಲೆನಾಡಲ್ಲಿ ಮಾಮೂಲು

ಬಯಲು ಸೀಮೆ ಹಾಗೂ ಮಲೆನಾಡು ಪ್ರದೇಶ ಒಳಗೊಂಡ ಚಿಕ್ಕಮಗಳೂರಿನಲ್ಲಿ ವನ್ಯಜೀವಿಗಳು ನಾಡಿನತ್ತ ಮುಖಮಾಡುತ್ತಿವೆ. ಮೂಡಿಗೆರೆ ತಾಲೂಕಿನಲ್ಲಿ ಆನೆ, ಕಾಡುಕೋಣಗಳು ಕಾಫಿ ತೋಟಕ್ಕೆ ದಾಳಿ ಇಡುವುದು ಸಾಮಾನ್ಯವಾಗಿಬಿಟ್ಟಿದೆ. ಗ್ರಾಮಗಳಿಗೂ ಕಾಡುಕೋಣಗಳು ಲಗ್ಗೆ ಇಡುತ್ತಿವೆ. ಚಾರ್ವಡಿ ಘಾಟಿಯಲ್ಲಿ ವಾಹನ ಸಂಚಾರ ಕಡಿಮೆ ಇರುವುದರಿಂದ ವನ್ಯಪ್ರಾಣಿಗಳು ರಸ್ತೆ ಮೇಲೆ ವಿಹರಿಸುತ್ತಿವೆ. ಮೂಡಿಗೆರೆ ತಾಲೂಕಿನಲ್ಲಿ ದನಗಳ ಕಣ್ಮರೆ ಹಾಗೂ ವಿವಿಧೆಡೆ ಹುಲಿ ಹೆಜ್ಜೆ ಕಾಣಿಸಿಕೊಳ್ಳುತ್ತಿರುವುದು ಜನರನ್ನು ಭಯಕ್ಕೀಡುಮಾಡಿದೆ.

ಚಾಮರಾಜನಗರ ಗಡಿಯಲ್ಲಿ ಗಡಗಡ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ದಾಳಿ ಪ್ರಕರಣಗಳು, ಜಾನುವಾರುಗಳನ್ನು ಕೊಲ್ಲುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಒಂದೂವರೆ ತಿಂಗಳ ಕಾಲ ರೈತರ ಜಾನುವಾರುಗಳನ್ನು ಕೊಲ್ಲುತ್ತಿದ್ದ ಹುಲಿಯೊಂದನ್ನು ಇತ್ತೀಚೆಗೆ ಅರಣ್ಯ ಇಲಾಖೆ ಸೆರೆಹಿಡಿದಿದ್ದರೆ ಚೌಡಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ. ಕಳೆದ ವಾರ ಶಾಸಕ ನಿರಂಜನಕುಮಾರ್ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಚಿರತೆಯೊಂದು ಸೆರೆಯಾಗಿತ್ತು. ಓಂಕಾರ್ ವಲಯದಲ್ಲಿ ಆನೆಗಳ ದಾಳಿ ಪ್ರಕರಣಗಳು ಹೆಚ್ಚಾಗಿದ್ದರೆ ಕುಂದಕೆರೆ ವಲಯದ ಅರಣ್ಯದಿಂದ ಹೊರಬಂದ ಹುಲಿ ಸುಮಾರು 17 ಹಸು, ಅಸಂಖ್ಯ ಮೇಕೆಗಳನ್ನು ಕೊಂದುಹಾಕಿತ್ತು.

ಸಕ್ಕರೆ ನಾಡಲ್ಲಿ ಚಿರತೆ ಹಾವಳಿ

ಮಂಡ್ಯ ಜಿಲ್ಲೆಯಲ್ಲಿ ಹಲವು ತಿಂಗಳಿನಿಂದಲೂ ಚಿರತೆ ಹಾವಳಿ ಇದೆ. ಇತ್ತೀಚಿನ ದಿನಗಳಲ್ಲಿ ಅವುಗಳ ಕಾಟ ಹೆಚ್ಚಾಗಿದ್ದು, ಸಾಕುಪ್ರಾಣಿಗಳನ್ನು ಕೊಂದು ಹಾಕುತ್ತಿರುವುದು ಆತಂಕ ಮೂಡಿ ಸಿದೆ. ಮಳವಳ್ಳಿ ತಾಲೂಕಿನಲ್ಲಿ ಚಿರತೆ ಜತೆಗೆ ಆನೆ ಕಾಟವೂ ಹೆಚ್ಚಿದೆ.

ಶಿವಮೊಗ್ಗದಲ್ಲಿ ನಿರಾಳ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಕಡಿಮೆ ಇದೆ. ಸಂಪೂರ್ಣ ಲಾಕ್​ಡೌನ್ ಸಂದರ್ಭದಲ್ಲಿ ಸಾಗರ ತಾಲೂಕಿನಲ್ಲಿ 8-10 ಕಾಡುಕೋಣಗಳು ಕಾಣಿಸಿಕೊಂಡಿದ್ದವು.

ಹಾಸನದಲ್ಲಿ ಸಲಗಗಳಿಂದ ಕಿರಿಕಿರಿ

ಹಾಸನ ಜಿಲ್ಲೆಯ ಆಲೂರು ಹಾಗೂ ಸಕಲೇಶಪುರದ ಗ್ರಾಮಗಳಲ್ಲಿ ಆನೆ ಹಾವಳಿ ಸಾಮಾನ್ಯ ಎನಿಸಿದೆ. ಮಲೆನಾಡು ಭಾಗದಲ್ಲಿ 40 ಆನೆಗಳು ಗುಂಪಾಗಿದ್ದು, ಮೂರು ಆನೆಗಳು ಗುಂಪಿನಿಂದ ಆಗಾಗ್ಗೆ ಚದುರುತ್ತವೆ. ಗುಂಪಿನಲ್ಲಿ ಹೋಗುವಾಗ ಯಾವ ಆನೆಗಳು ಬೆಳೆ ನಾಶ ಅಥವಾ ಊರು ಪ್ರವೇಶಿಸುವ ಸಾಹಸ ಮಾಡುವುದಿಲ್ಲ. ಆದರೆ ಆಹಾರ ಅರಸಿ ಗುಂಪಿನಿಂದ ಬೇರ್ಪಡುವ ಮೂರು ಸಲಗಗಳು ಮಾತ್ರ ವಿಪರೀತ ಕಿರಿಕಿರಿ ಉಂಟು ಮಾಡುತ್ತಿವೆ.

ಉ.ಕ.ದಲ್ಲಿ ಕಾಡುಕೋಣ, ಚಿರತೆ

ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಬೇಸಿಗೆಗೆ ನೀರು ಅರಸಿಕೊಂಡು ಕಾಡುಪ್ರಾಣಿಗಳು ಗ್ರಾಮಗಳಿಗೆ ಬರುತ್ತಿವೆ. ಸಿದ್ದಾಪುರ ತಾಲೂಕಿನ ಮಾವಿನಗುಂಡಿ-ಜೋಗ ರಸ್ತೆಯಲ್ಲಿ ಚಿರತೆಯೊಂದು ಹಗಲಲ್ಲೇ ರಸ್ತೆಯಲ್ಲಿ ಓಡಾಡುತ್ತಿರುವಾಗ ಕಣ್ಣಿಗೆ ಬಿದ್ದಿತ್ತು. ಅದೇ ತಾಲೂಕಿನ ಹಸರಗೋಡ ಗ್ರಾಪಂ ವ್ಯಾಪ್ತಿಯ ತಂಗಾರಮನೆಯಲ್ಲಿ ವಾರದ ಹಿಂದೆ ಕಾಡುಕೋಣ ಕಾಣಿಸಿಕೊಂಡಿತ್ತು.

ತಪ್ಪದ ಕಾಡಾನೆ ಕಾಟ

ಕೋಲಾರ ಜಿಲ್ಲೆಗೆ ನೆರೆ ರಾಜ್ಯಗಳಿಂದ ಆಹಾರ ಮತ್ತು ಸಂತಾನೋತ್ಪತ್ತಿಗಾಗಿ ಬರುವ ಕಾಡಾನೆಗಳು ಗ್ರಾಮಗಳಿಗೆ ನುಗ್ಗಿ ರೈತರ ಪ್ರಾಣಕ್ಕೆ ಕುತ್ತುಂಟು ಮಾಡಿವೆಯಲ್ಲದೆ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶ ಮಾಡಿವೆ. ಈ ವರ್ಷ ಬಂಗಾರಪೇಟೆ ತಾಲೂಕು ಒಂದರಲ್ಲೇ ಮೂವರು ರೈತರು ಆನೆ ದಾಳಿಗೆ ಬಲಿಯಾಗಿದ್ದಾರೆ.

ಚಿರತೆ ಹಾವಳಿಗೆ ಜನ ತತ್ತರ: ರಾಮನಗರ ಜಿಲ್ಲೆಯಲ್ಲಿ ಆನೆ ಜತೆಗೆ ಚಿರತೆ ಹಾವಳಿಯೂ ತೀವ್ರವಾಗಿದ್ದು, ಇತ್ತೀಚೆಗೆ ಚಿರತೆ ದಾಳಿಗೆ ಬಾಲಕ ಮತ್ತು ವೃದ್ಧೆ ಬಲಿಯಾಗಿದ್ದಾರೆ. ವಿವಿಧ ಅರಣ್ಯ ವಲಯಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮನುಷ್ಯರು ತೀವ್ರ ಗಾಯಗೊಂಡಿದ್ದಾರೆ. ಉಳಿದಂತೆ ಪ್ರಾಣಿಗಳ ದಾಳಿಯಿಂದ ನೂರಾರು ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. 2020ರ ಮೇ 9 ರಿಂದ 27ರವರೆಗೆ ಮಾಗಡಿ ತಾಲೂಕು ವ್ಯಾಪ್ತಿಯಲ್ಲಿ 10 ಚಿರತೆ ಹಾಗೂ 2 ಮರಿಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಬುಧವಾರ ರಾಮನಗರದಲ್ಲಿ ಮಹಿಳೆ ಮೇಲೆ ಕರಡಿಯೊಂದು ದಾಳಿ ನಡೆಸಿ ತೀವ್ರ ಗಾಯಗೊಳಿಸಿದೆ. ತುಮಕೂರು, ಗುಬ್ಬಿ ಹಾಗೂ ಕುಣಿಗಲ್ ತಾಲೂಕು ವ್ಯಾಪ್ತಿಯಲ್ಲಿ ಚಿರತೆಗಳ ಓಡಾಟ ಹೆಚ್ಚಾಗಿದ್ದು, ನಾಲ್ಕು ತಿಂಗಳಿಂದೀಚೆಗೆ ನಾಲ್ವರು ಬಲಿಯಾಗಿದ್ದಾರೆ. ತುಮಕೂರು ನಗರಕ್ಕೆ ಹೊಂದಿಕೊಂಡಿರುವ ಹಿರೇಹಳ್ಳಿಯಲ್ಲಿ ಮಾರ್ಚ್ 5 ರಂದು ಕಾಡಾನೆ ದಾಳಿಗೆ ವೃದ್ಧರೊಬ್ಬರು ಮೃತಪಟ್ಟಿದ್ದರು. ಮಾರ್ಚ್ 1 ರಿಂದ ಈವರೆಗೆ ಗ್ರಾಮಗಳಿಗೆ ದಾಳಿ ಇಟ್ಟಿದ್ದ 14 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net