

ಮಡಿಕೇರಿ: ಅನಾರೋಗ್ಯದಿಂದ ಬಳಲುತ್ತಿರುವ ವಿರಾಜಪೇಟೆ ತಾಲೂಕು ವ್ಯಾಪ್ತಿಯ ಬಿ.ಶೆಟ್ಟಿಗೇರಿಯ ಕುಟುಂಬಕ್ಕೆ ಮುಂಬೈ ಉದ್ಯಮಿ ಅಕ್ಕಳತಂಡ ಮೊಯ್ದು (ಮೊಯ್ದು ಕೂರ್ಗ್) ಆರ್ಥಿಕ ನೆರವು ನೀಡಿದ್ದಾರೆ.
ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ ಪತಿ-ಪತ್ನಿ ಸಮಸ್ಯೆ ಬಗ್ಗೆ ಮಾಧ್ಯಮ ಸ್ಪಂದನದ ಗಮನವನ್ನು ಪತ್ರಕರ್ತ ಅಣ್ಣೀರ ಹರೀಶ್ ಮಾದಪ್ಪ ಸೆಳೆದಿದ್ದರು. ಕೆ.ಕೆ.ಯಶೋದಾ-ಸಣ್ಣಪ್ಪ ದಂಪತಿ ಸಂಕಷ್ಟಕ್ಕೆ ಸಿಲುಕಿರುವವರು. ಅನಾರೋಗ್ಯದಿಂದ ಇವರ ಮಗಳು ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು.
ಮೈಸೂರಿನ ಖಾಸಗಿ ಆಸ್ಪತ್ರೆ ವೈದ್ಯರ ಮಾರ್ಗದರ್ಶನದಡಿ ಗೋಣಿಕೊಪ್ಪ ಖಾಸಗಿ ಮೆಡಿಕಲ್ ಶಾಪ್‌ನಲ್ಲಿ ಮಾಸಿಕ 2,000 ರೂ.ಗೆ ಔಷಧ ಖರೀದಿಸುತ್ತಿದ್ದರು. ವಿರಾಜಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಯತಿರಾಜ್ ಅವರೊಂದಿಗೆ ಮಾಧ್ಯಮ ಸ್ಪಂದನದ ಅಜ್ಜಮಾಡ ರಮೇಶ್ ಕುಟ್ಟಪ್ಪ ಗಮನ ಸೆಳೆದ ಬಳಿಕ ಕುಟ್ಟಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿದರು.
2,000 ರೂ.ಗೆ ಖರೀದಿಸುತ್ತಿದ್ದ ಔಷಧ ಜನತಾ ಔಷಧ ಮಳಿಗೆಯಲ್ಲಿ 500 ರೂಪಾಯಿಗೆ ಸಿಗುತ್ತಿರುವುದನ್ನು ಪತಿ- ಪತ್ನಿಗೆ ಮನವರಿಕೆ ಮಾಡಿಕೊಟ್ಟರು. ತಾಲೂಕು ಆರೋಗ್ಯ ರಕ್ಷಾ ಸಮಿತಿ ಮೂಲಕ ಅಗತ್ಯ ಔಷಧ ಖರೀದಿಸಿ ನೀಡುವ ಭರವಸೆ ನೀಡಿದರು.
ಅಗತ್ಯ ಔಷಧ ಖರೀದಿಗೆ ಅಜ್ಜಮಾಡ ರಮೇಶ್ ಕುಟ್ಟಪ್ಪ ಮನವಿ ಮೇಲೆ ಅಕ್ಕಳತಂಡ ಮೊಯ್ದು 15 ಸಾವಿರ ರೂ. ಯಶೊದಾ ಅವರ ಖಾತೆಗೆ ಜಮಾ ಮಾಡಿದ್ದಾರೆ.