

ಡಾ. ಆನಂದ್ ಋಗ್ವೇದಿ, (ಲೇಖಕರು ಸಾಹಿತಿ)
ದೇವ ಬೊಂಬೆ
ಪೂಜೆ ಆಟ
ಭಕ್ತಿ ಸೋಜಿಗ
-ಪುತಿನ
ಈ ಸಾಲುಗಳು ನನ್ನ ಮನವನ್ನು ಮುತ್ತಿ ಪದೇಪದೆ ಕಾಡಿದ್ದು ಮೇಲುಕೋಟೆಗೆ ಹೋದಾಗ!
ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್ ಎಂದರೆ ಬಹಳಷ್ಟು ಜನರಿಗೆ ಗೊತ್ತಾಗದಿರಬಹುದು, ಆದರೆ ಮೇಲುಕೋಟೆ ಎಂದ ಕೂಡಲೇ ಬಹುತೇಕ ಜನರಿಗೆ ನೆನಪಾಗುವ ಚೆಲುವ ನಾರಾಯಣ ದೇವಾಲಯದ ಹಾಗೇ ಸಾಹಿತ್ಯಪ್ರಿಯರಿಗೆ ನೆನಪಾಗುವುದು ಪುತಿನ ಹೆಸರೇ. ಅವರ ಪೂರ್ಣ ಹೆಸರು ಗೊತ್ತಾಗದೇ ಹೋದರೂ ಅವರ ಸಾಹಿತ್ಯ ಓದದವರು ಕಡಿಮೆ. ಅದರಲ್ಲೂ ಅವರ ಕವಿತೆ. ಬರಹದ ಮೊದಲು ಉಲ್ಲೇಖಿಸಿದ ಕವಿತೆಯ ಸಾಲುಗಳ ಹಾಗೇ ಅವರ ಸಾಲುಸಾಲು ಬರಹಗಳು- ಓದಿದ ಕೂಡಲೇ ಮನವರಿಸಿ ಹೃದ್ಗತವಾಗುವ ಪರಿಯೂ ವಿಶೇಷ.
ಕನ್ನಡದ ಮುಖ್ಯ ಕವಿ ಪುತಿನ ಅವರ ಕವಿತೆಗಳಲ್ಲಿ ವಿಶೇಷವಾಗಿ ಕಾಣುವ ಭಕ್ತಿ, ಜೀವನಪ್ರೀತಿ ಮತ್ತು ಬಲವಾದ ನಂಬುಗೆಯ ಮಾನವೀಯತೆ ಬೆರಗು ಮೂಡಿಸುವಂತಹದು. ಹಾಗಾಗಿಯೇ ಅವರ ಕವಿತೆಗಳಲ್ಲಿ ಬರುವ ಪುಟ್ಟ ಬಾಲೆ, ರಂಗವಲ್ಲಿ ಮತ್ತು ಬೆಳಗಿನ ಜಾವ ಬೆಟ್ಟ ಹತ್ತಿ ಬರುವ ಮುದುಕಿಯ ಚಿತ್ರಗಳು ಕೇವಲ ಪ್ರತಿಮೆಗಳಲ್ಲ, ಅವು ಪರಿಪೂರ್ಣ ರೂಪಕಗಳೂ ಹೌದು. ಹಾಗಾಗಿಯೇ ದೇವ ಬೊಂಬೆ... ಎಂದಾಗಿನ ಬೆರಗು ‘ಮೇಲೊಂದು ಹಕ್ಕಿ ಹಾರುತಿಹುದು. ಕೆಳಗದರ ನೆರಳು ಓಡುತಿಹುದು’ ಎಂದಾಗ ಬೆಡಗೂ ಮೂಡುತ್ತದೆ. ಅವರ ಕಾವ್ಯದ ಸರಳತೆ ಮತ್ತು ಗಹನತೆಯಿಂದ ಆಪ್ತವಾದಂತೇ, ಅವರ ಕತೆ ಹಾಗೂ ಗೀತನಾಟಕಗಳ ಮೂಲಕ ಚಿರಪರಿಚಿತರೂ ಆದವರು.
ಕತೆಯಲ್ಲಿ ಪುತಿನರವರದು ಪ್ರಬಂಧಾತ್ಮಕ ಮಾದರಿ. ತುಂಬ ಸರಳ ಎನ್ನಿಸುವ ಅವರ ಕತೆಗಳಲ್ಲಿ ಮೇಲುನೋಟಕ್ಕೆ ಗೋಚರಿಸದ ಧರ್ಮಜಿಜ್ಞಾಸೆ ಕಂಡುಬರುವುದು ಅವರ ವೈಚಾರಿಕತೆಯೂ ಹೌದು. ಹಾಗೆಯೇ ಅಪ್ಪಟ ವೈಚಾರಿಕ ಬರಹ ಅನ್ನಿಸುವುದು ಅವರ ಗೀತನಾಟಕ ‘ಅಹಲ್ಯೆ’ ಮತ್ತು ‘ಗೋಕುಲ ನಿರ್ಗಮನ’. ಬಹು ಪ್ರಸಿದ್ಧವಾದ ಈ ನಾಟಕಗಳಲ್ಲಿ ಪುತಿನ ಅವರ ಪ್ರತಿಭೆ ಕೋರೈಸಿದೆ ಎಂಬುದು ನನ್ನ ನಂಬುಗೆ ನಿಲುವು. ಈ ನಂಬಿಕೆಗೆ ಮೂಲಕಾರಣ ಅವರ ಸಂಗೀತದ ತಜ್ಞತೆ. ಗೀತನಾಟಕದ ಪ್ರತಿಯೊಂದು ಹಂತದಲ್ಲಿಯೂ ಅದರ ಭಾವಕ್ಕೆ ತಕ್ಕಂತೆ ರಾಗ, ತಾಳಗಳನ್ನು ಉಲ್ಲೇಖಿಸಿರುವ ಅವರ ಪ್ರತಿಭೆ ಮತ್ತು ಪಾರಂಗತತೆ ವಿಶೇಷವಾದುದು.
‘ಗೋಕುಲ ನಿರ್ಗಮನ’ ಮುಖ್ಯವಾಗಿ ಕೃಷ್ಣನು ತಾನು ಬೆಳೆದ ಗೋಕುಲದಿಂದ ಮಥುರೆಗೆ ಹೊರಟಾಗಿನ ವ್ಯಾಕುಲ ಸನ್ನಿವೇಶದ ಕತೆ. ಆವರೆಗೆ ಅಬೋಧ ಬಾಲಕನಾಗಿ ಗೋಕುಲದ ಕಣ್ಮಣಿಯಾಗಿ ಬೆಳೆದ ಕೃಷ್ಣ ತನ್ನ ನಿಜಸ್ವರೂಪವನ್ನು ತೋರಿಸಲು ಸಾಧ್ಯವಾಗಿದ್ದು ಮಥುರೆಯ ಭೇಟಿ ಮತ್ತು ಬಂಡಿಹಬ್ಬದ ನೆಪ. ಅದು ಕೃಷ್ಣನ ನಿಜಸ್ವರೂಪ ಮತ್ತು ಆತನ ನಂತರದ ಬದುಕಿನ ಮುಖ್ಯ ಸಂಗತಿಗಳನ್ನು ನಿರ್ವಚಿಸುವ ಸಂಕ್ರಮಣ ಬಿಂದು. ಆವರೆಗೆ ಗೋಕುಲದಲ್ಲಿ ಕಳೆದ ಬಾಲ್ಯ, ಕಿಶೋರದಲ್ಲಿ ನಿಭಾಯಿಸಲೇ ಬೇಕಾದ ಹೆಗಲ ಜವಾಬುದಾರಿ, ಬಾಲ್ಯದ ಮುಗ್ಧ ಪ್ರಪಂಚವನ್ನು ಬಿಟ್ಟು ಹೋಗಲೇಬೇಕಾದ ವ್ಯಾಕುಲ... ಎಲ್ಲ ಕೇವಲ ಕೃಷ್ಣನ ಬದುಕಿನ ಸಂಗತಿಗಳಲ್ಲ. ಅವು ಮಾನುಷರೆಲ್ಲರ ಅನಿವಾರ್ಯ ಸ್ಥಿತಿ. ರಮ್ಯತೆಯಿಂದ ಜವಾಬ್ದಾರಿ ಕಡೆಗೆ ಹೊರಳುವಾಗ ಉಂಟಾಗುವ ಸಹಜ ಮತ್ತು ಅನಿವಾರ್ಯ ವ್ಯಾಕುಲ. ಎಂದೇ ‘ಗೋಕುಲ ನಿರ್ಗಮನ’ ಕೇವಲ ಕೃಷ್ಣ ಕತೆಯಾಗದೇ ನಮ್ಮೆಲ್ಲರ ಗತಿ ಎಂಬುದನ್ನು ಮನವರಿಸಲು ನಾಟಕ ರೂಪದಲ್ಲಿ ಬರೆದ ಪುತಿನ ಅವರು ಮಹಾನ್ ವಾಸ್ತವವಾದಿಯೂ ಅನ್ನಿಸುತ್ತಾರೆ.
ಬದುಕಿನ ಅಂತಹ ವಾಸ್ತವವೇ ಪ್ರೇಮ, ಕಾಮ ಮತ್ತು ಸಂಯೋಗ. ಮಡಿವಂತಿಕೆಯ ದೃಷ್ಟಿಯಿಂದ ನೋಡಿದರೆ ಕೇವಲ ಹಾದರ ಅನ್ನಿಸುವ ಈ ಸಂಗತಿಗಳನ್ನು ಅಹಲ್ಯೆ ಮತ್ತು ಇಂದ್ರನ ಕತೆಯ ಮೂಲಕ ನಿರೂಪಿಸಿದ ರೀತಿ ನಿಜಕ್ಕೂ ವಿಸ್ಮಯ. ಹೆಣ್ಣೊಬ್ಬಳ ಮನದ ತಳಮಳ, ಇಂಗಿತ ಮತ್ತು ಸಂದಿಗ್ಧವನ್ನು ಇಷ್ಟು ನವಿರಾಗಿ ಮತ್ತು ಖಚಿತವಾಗಿ ಮಂಡಿಸಿದವರು ವಿರಳ. ಜನ್ನ ಕವಿಯ ‘ಅಮೃತಮತಿ’ಯಂತೆ ಸ್ತ್ರೀಸಂಕೇತವಾಗುವಂತೆ ಅಹಲ್ಯೆಯನ್ನು ಚಿತ್ರಿಸಿದ ಪುತಿನ ಅವರು ನಿಜಕ್ಕೂ ಮುಂಗಾಣ್ಕೆಯ ಕವಿ. ನೋಡಲು ತೀರಾ ಸಂಪ್ರದಾಯಸ್ಥರಂತೆ ಕಾಣುತ್ತಿದ್ದ ಕವಿ ತಮ್ಮ ಕಾಲಕ್ಕಿಂತ ತುಂಬ ಮುಂದೆ ಇದ್ದರು! ಹಾಗಾಗಿಯೇ ಹೆಣ್ಣ ಪ್ರೇಮ ಕಾಮಗಳ ತುಯ್ತವನ್ನು ಅವರು ಸಹಜವಾಗಿ ಪರಿಭಾವಿಸಿದ್ದರು. ಬಂದವನು ತನ್ನ ಗಂಡ ಗೌತಮ ಅಲ್ಲವೆಂದು ಗೊತ್ತಾದ ಮೇಲೂ ಅಹಲ್ಯೆ ಇಂದ್ರನಿಗೆ ಒಲಿದಳು ಎಂಬುದು, ಅದು ಪಾಪವಲ್ಲದ ಅತ್ಯಂತ ಸಹಜ ಮಾನುಷ ನಡೆ ಎಂಬುದು ಕವಿ ಪುತಿನರವರ ಪ್ರಾಜ್ಞ ನಿಲುವು. ಇದು ಎಲ್ಲ ಕಾಲಕ್ಕೂ ಸ್ವಾಗತಾರ್ಹ ಮತ್ತು ಶ್ಲಾಘನೀಯ ನಿಲುವು. ಅಂತಹ ಕಾಲಾತೀತ ಸತ್ಯಗಳನ್ನು ಸರಳವಾಗಿ ಸಾಹಿತ್ಯವಾಗಿಸಿದ ಅವರ ಬಗ್ಗೆ ಎಷ್ಟು ಬರೆದರೂ ಸಾಲದು!