

ಪರಮಾತ್ಮನು ಸೃಷ್ಟಿ, ಸ್ಥಿತಿ, ಲಯ, ತಿರೋಧಾನ, ಅನುಗ್ರಹವೆಂಬ ಪಂಚಕಾರ್ಯಗಳನ್ನು ಸಹಜವಾಗಿ ನಡೆಸುತ್ತ ಜಗತ್ತೆಂಬ ರಂಗಸ್ಥಳದಲ್ಲಿ ಆಡುತ್ತಿರುವನು. ಎಲ್ಲ ನಾಮರೂಪ ವಸ್ತುಗಳಿಗೂ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನೂ ಆದುದರಿಂದ ಪರಮಾತ್ಮನಿಗೆ ಘನಲಿಂಗವೆಂಬ ಹೆಸರು ಬಂದಿದೆ. ಆ ಘನಲಿಂಗವು ಸರ್ವವಸ್ತುಗಳಿಗೂ ಆಶ್ರಯನಾಗಿ ಅಣು-ರೇಣು-ತೃಣಕಾಷ್ಟಗಳಲ್ಲಿ ತುಂಬಿ ತುಳುಕುತ್ತಿರುವದರಿಂದ, ನಂತರ ಅವನಲ್ಲಿಯೇ ಈ ಸರ್ವಪ್ರಪಂಚವೂ ಅಡಗುತ್ತಿರುವುದರಿಂದ ಅವನಿಗೆ ‘ಸ್ಥಲ’ವೆಂಬ ಹೆಸರು ಬಂದಿದೆ. ಈ ವಿಶಾಲ ಪ್ರಪಂಚವನ್ನು ತನ್ನಲ್ಲಿ ಅಡಗಿಸಿಕೊಳ್ಳುವ ಶಕ್ತಿ ಆ ಪರಮಾತ್ಮನಿಗೆ ಇದೆ. ಆದ್ದರಿಂದ ಅವನು ಲಿಂಗಸ್ವರೂಪನೂ ಹೌದು. ಲಿಂಗಸ್ವರೂಪನೂ ಸ್ಥಲಸ್ವರೂಪನೂ ಆದ ಆ ಪರಮಾತ್ಮನು ಈ ನಾಮರೂಪ ಪ್ರಪಂಚವನ್ನು ಏಕೆ ಧರಿಸಬೇಕು? ಎಲ್ಲವೂ ತಾನೇ ತಾನಾಗಿರುವಾಗ ಈ ನಾಮ-ರೂಪಗಳಿಂದ ಕೂಡಿದ ಪ್ರಪಂಚವನ್ನು ಧರಿಸುವ ಅವಶ್ಯವೇನಿತ್ತು? ಎಂಬ ಪ್ರಶ್ನೆಗೆ ಸಿದ್ಧಾಂತದಲ್ಲಿ ಉತ್ತರ ಹೀಗಿದೆ: ಪ್ರತಿ ಸೃಷ್ಟಿ ಪ್ರಳಯದ ವೇಳೆ ಪರಮಾತ್ಮನಲ್ಲಿ ಎಲ್ಲ ನಾಮ-ರೂಪ
ಪ್ರಪಂಚವೂ ಅಡಗುತ್ತವೆ. ಸಕಲ ಜೀವಿಗಳೂ ಅವನ ಚೇತನಾಂಶವೇ ಆಗಿದ್ದಾರೆ. ಆದ್ದರಿಂದ ಅವರ ಕರ್ಮ ವಾಸನೆಗಳನ್ನು ಕಳಚಿ ಅವರಿಗೆ ವಾಸ್ತವಿಕ ಚೇತನ ವಿಕಾಸವನ್ನು ಮಾಡಿಕೊಡುವುದಕ್ಕಾಗಿ ಅವರನ್ನು ತನ್ನೊಳಗಿಂದ ಭೂಮಿಯ ಮೇಲೆ ಪ್ರಕಟಿಸುವನು. ಜಡವಾದ ಈ ಸೃಷ್ಟಿಯ ವಸ್ತುಗಳಲ್ಲಿ ಚಲಿಸುವ ಶಕ್ತಿ ಎಲ್ಲಿಂದ ಬರಬೇಕು?. ಆದ್ದರಿಂದ ಸಕಲ ಜೀವರಾಶಿಗಳಲ್ಲಿ ಚೇತನರೂಪದಿಂದ ಪ್ರವೇಶಿಸಿದನು. ಅವನ ಸೃಷ್ಟಿಯಲ್ಲಿ ಅವನೇ ಪ್ರವೇಶಿಸಿದ್ದರಿಂದಲೇ ಈ ಸೃಷ್ಟಿಯ ಕ್ರಮ ನಿಯಮಬದ್ಧವಾಗಿ ಸಾಗುತ್ತಿದೆ. ಆಯಾ ಋತು ಮಾನಕ್ಕೆ ಅನುಸರಿಸಿ ಭೋಜ್ಯವಸ್ತುಗಳ ನಿರ್ವಣ, ಅವುಗಳನ್ನು ಉಪಭೋಗ ಮಾಡುವದಕ್ಕೆ ಯೋಗ್ಯವಾದ ಶರೀರಾದಿಗಳ ಸೃಷ್ಟಿ, ಮಿಥ್ಯ ದೇಹದಿಂದ ಸತ್ಯದ ಸಾಧನೆ ಹೇಗೆ ಮಾಡಬೇಕು ಇತ್ಯಾದಿಗಳೆಲ್ಲವನ್ನೂ ಒಂದಕ್ಕೊಂದು ಪೂರಕ-ಸಾಧಕವಾಗುವಂತೆ ಪರಮಾತ್ಮನು ಲೀಲಾರಂಗ ಭೂಮಿಯನ್ನು ನಿರ್ಮಾಣ ಮಾಡಿದನು. ಜಗದಗಲ ಮುಗಿಲಗಲ ಅವನ ಶಕ್ತಿಯ ವಿಸ್ತಾರವನ್ನು ಅಳೆದು ತೂಗಿ ನೋಡಲು ನೆಲದ ಮಾನವರಿಗೆ ಸಾಧ್ಯವೇ? ಅವನ ಮಹಿಮೆಗೆ ಅವನೇ ಸಾದೃಶ್ಯ.