ಸಂಪಾದಕೀಯ: ಬಹಿಷ್ಕಾರದ ಶಕ್ತಿ-ಸಾಮರ್ಥ್ಯ

5-6824d7e29a77b
Published on

ಅಜರ್​ಬೈಜಾನ್ ಮತ್ತು ಟರ್ಕಿ ದೇಶಗಳನ್ನು ಸರ್ವರೀತಿಯಲ್ಲೂ ಬಹಿಷ್ಕರಿಸಬೇಕೆಂದು ನಾಲ್ಕೈದು ದಿನಗಳಿಂದ ಭಾರತೀಯರು ನಡೆಸುತ್ತಿದ್ದ ಅಭಿಯಾನ ಈಗ ವೇಗ ಪಡೆದುಕೊಂಡಿದೆ. ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳ ಮೇಲೆ ಭಾರತ ಇತ್ತೀಚೆಗೆ ‘ಆಪರೇಷನ್ ಸಿಂಧೂರ’ ನಡೆಸಿದಾಗ ಈ ರಾಷ್ಟ್ರಗಳು ಪಾಕಿಸ್ತಾನದ ಪರ ನಿಲುವು ತಳೆದಿದ್ದವು.

ಭಾರತದ ಕಾರ್ಯಾಚರಣೆಯನ್ನು ‘ಅಪ್ರಚೋದಿತ ದಾಳಿ, ಪಾಕ್ ಸಾರ್ವಭೌಮತೆಗೆ ಧಕ್ಕೆ, ಅಮಾಯಕರ ನಾಗರಿಕರ ಬಲಿ’ ಎಂದೆಲ್ಲ ಬಣ್ಣಿಸಿದ್ದವು. ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ 26 ಅಮಾಯಕರನ್ನು ಪಾಕ್ ಪ್ರಾಯೋಜಿತ ಭಯೋತ್ಪಾದಕರು ಭೀಕರವಾಗಿ ಹತ್ಯೆಗೈದಿದ್ದು ಈ ಎರಡು ದೇಶಗಳ ಕಣ್ಣಿಗೆ ‘ಪ್ರಚೋದನೆ’ ಎನಿಸಿರಲಿಲ್ಲ. ಆ ಉಗ್ರದಾಳಿಯನ್ನು ಇವು ಖಂಡಿಸಿರಲಿಲ್ಲ. ಅಷ್ಟೇ ಅಲ್ಲ, ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಇವು ಪಾಕಿಸ್ತಾನಕ್ಕೆ ನೆರವು ನೀಡಿದ್ದು ಕೂಡ ಬಹಿರಂಗವಾಯಿತು. ಉದ್ವಿಗ್ನತೆ ಉಲ್ಬಣವಾದಾಗ ಭಾರತದ ಗಡಿ ಪ್ರದೇಶಗಳಿಗೆ ಪಾಕಿಸ್ತಾನವು ಟರ್ಕಿ ನಿರ್ವಿುತ 300-400 ಡ್ರೋನ್​ಗಳನ್ನು ಕಳಿಸಿದ್ದನ್ನು ಭಾರತೀಯ ಸೇನೆಯೇ ಬಯಲು ಮಾಡಿತ್ತು.

ಈಗ ಭಾರತ-ಪಾಕ್ ಗಡಿ ಶಾಂತವಾಗಿದೆ. ಆದರೆ ಭಾರತೀಯರ ಸಿಟ್ಟು ತಣ್ಣಗಾಗಿಲ್ಲ. ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿದ ಟರ್ಕಿ ಮತ್ತು ಅಜರ್​ಬೈಜಾನ್ ಮೇಲೆ ಈ ಸಿಟ್ಟು ತಿರುಗಿದೆ. ಆ ರಾಷ್ಟ್ರಗಳಿಗೆ ಪ್ರವಾಸ ಹೊರಟಿದ್ದ ಭಾರತೀಯರು ತಮ್ಮ ಪ್ರವಾಸವನ್ನು ರದ್ದುಪಡಿಸಿದ್ದಾರೆ. ಈ ಪ್ರವಾಸವನ್ನು ಸಂಘಟಿಸಿದ್ದ ಟ್ರಾವೆಲ್ ಕಂಪನಿಗಳು ಕೂಡ ಈ ಬಹಿಷ್ಕಾರಕ್ಕೆ ಕೈಜೋಡಿಸಿ, ತಾವೇ ಖುದ್ದಾಗಿ ಆ ಎರಡು ರಾಷ್ಟ್ರಗಳ ಬುಕಿಂಗ್ ಸ್ಥಗಿತಗೊಳಿಸಿವೆಯಲ್ಲದೆ ಭಾರತೀಯರ ಭಾವನೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್ ಟರ್ಕಿ, ಬಾಯ್ಕಾಟ್ ಅಜರ್​ಬೈಜಾನ್ ಎಂಬ ಹ್ಯಾಷ್​ಟ್ಯಾಗ್​ಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಇದು ಸಾಲದೆಂಬಂತೆ, ಆ ರಾಷ್ಟ್ರಗಳಲ್ಲಿ ತಯಾರಾದ ವಸ್ತುಗಳನ್ನು ಭಾರತೀಯರ್ಯಾರೂ ಖರೀದಿಸಬಾರದು ಎಂಬ ಅಭಿಯಾನವೂ ಆರಂಭವಾಗಿದೆ. ರಾಜಕಾರಣಿಗಳೂ ಇದಕ್ಕೆ ಮುಕ್ತ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದ ಈ ರಾಷ್ಟ್ರಗಳ ಮೇಲೆ ಆಗುವ ಪರಿಣಾಮ ಅಷ್ಟಿಷ್ಟಲ್ಲ. ಟರ್ಕಿಗೆ ಪ್ರವಾಸ ಕೈಗೊಂಡ ಭಾರತೀಯರ ಸಂಖ್ಯೆ 2014ರಲ್ಲಿ 1.19 ಲಕ್ಷ ಇದ್ದದ್ದು 2024ರಲ್ಲಿ 3.30 ಲಕ್ಷಕ್ಕೆ ಏರಿದೆ. ಪರಿಣಾಮವಾಗಿ ಅದರ ಪ್ರವಾಸೋದ್ಯಮ ಆದಾಯ ಕಳೆದ ವರ್ಷ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ, 61.1 ಶತಕೋಟಿ ಡಾಲರ್​ಗೆ ಏರಿದೆ.

ಅಜರ್​ಬೈಜಾನ್​ಗೆ ಪ್ರವಾಸ ಕೈಗೊಂಡ ಭಾರತೀಯರ ಸಂಖ್ಯೆ 2014ರಲ್ಲಿ ಕೇವಲ 4,853 ಇದ್ದದ್ದು 2023ರಲ್ಲಿ 1.17 ಲಕ್ಷಕ್ಕೆ, 2024ರಲ್ಲಿ 2.43 ಲಕ್ಷಕ್ಕೆ ಏರಿದೆ. ಒಂದು ಅಂದಾಜಿನ ಪ್ರಕಾರ, ಈ ಎಲ್ಲದರಿಂದ ಆ ರಾಷ್ಟ್ರಗಳಿಗೆ ಆಗುವ ನಷ್ಟ ಸುಮಾರು 4 ಸಾವಿರ ಕೋಟಿ ರೂ. ಎಂದು ಹೇಳಲಾಗುತ್ತಿದೆ. ಕೇವಲ ಒಂದು ವರ್ಷದ ಹಿಂದೆ ಮಾಲ್ದೀವ್ಸ್ ನ ಕೆಲವು ಕಿರಿಯ ಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಆಡಿದ ಅವಹೇಳನಕಾರಿ ಮಾತುಗಳು ಆ ರಾಷ್ಟ್ರಕ್ಕೆ ಎಷ್ಟು ‘ದುಬಾರಿ’ಯಾಗಿ ಪರಿಣಿಮಿಸಿತು ಎಂಬ ಉದಾಹರಣೆ ಕಣ್ಣ ಮುಂದೆಯೇ ಇದೆ. ಆಗಲೂ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಕೂಗು ಎಬ್ಬಿಸಿ, ಕೊನೆಗೆ ಅದು ಇಡೀ ದೇಶದಲ್ಲಿ ಒಂದು ಅಭಿಯಾನವಾಗಿ ರೂಪುಗೊಂಡಿತ್ತು. ಕೊನೆಗೆ ತಮ್ಮ ದೇಶಕ್ಕಾದ ನಷ್ಟವನ್ನು ಮನಗಂಡು, ಮಾಲ್ದೀವ್ಸ್​ನ ಹಿರಿಯ ರಾಜಕಾರಣಿಗಳೆಲ್ಲ ಕ್ಷಮೆ ಯಾಚಿಸಿ, ಭಾರತದ ಮುಂದೆ ಮಂಡಿಯೂರಬೇಕಾಯಿತು. ಅಂತಹುದೇ ಪರಿಸ್ಥಿತಿ ಟರ್ಕಿ ಮತ್ತು ಅಜರ್​ಬೈಜಾನ್​ಗೆ ಎದುರಾಗಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net