ಜೆಡಿಎಸ್ ತೆಕ್ಕೆಯಲ್ಲೇ ಉಳಿದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ

RemasterDirector_1a5c03258
ಪಿರಿಯಾಪಟ್ಟಣ ಪುರಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಸಿಂಗ್ ಮತ್ತು ಸುವರ್ಣಾ ರವಿ ಅವರನ್ನು ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದಿಸಿದರು. ಕೆ.ಮಹದೇವ್, ಪಿ.ಎಂ.ಪ್ರಸನ್ನ, ಮಂಜುನಾಥ್ ಸಿಂಗ್, ಕೆ.ಮಹೇಶ್, ನಾಗರತ್ನಾ, ಎಸ್.ರಾಮು, ಸಿ.ಎನ್.ರವಿ ಇತರರು ಇದ್ದರು.
Published on

ಪಿರಿಯಾಪಟ್ಟಣ: ಪಿರಿಯಾಪಟ್ಟಣ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಯನ್ನು ಜೆಡಿಎಸ್ ಮತ್ತೊಮ್ಮೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಪುರಸಭೆ ಅಧ್ಯಕ್ಷರಾಗಿ ಪ್ರಕಾಶ್ ಸಿಂಗ್, ಉಪಾಧ್ಯಕ್ಷರಾಗಿ ಸುವರ್ಣಾ ರವಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪುರಸಭೆಯಲ್ಲಿ ಜೆಡಿಎಸ್ ತನ್ನ ಹಿಡಿತವನ್ನು ಮುಂದುವರಿಸಿದೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಕುರಿತಂತೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ಸಿಂಗ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸುವರ್ಣಾ ರವಿ ಮಾತ್ರ ನಾಮಪತ್ರ ಸಲ್ಲಿಸಿದ್ದು ಬೇರೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಸೀಲ್ದಾರ್ ನಿಸರ್ಗಪ್ರಿಯಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು. ಒಟ್ಟು 23 ಸದಸ್ಯರನ್ನು ಹೊಂದಿರುವ ಪುರಸಭೆಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 19 ಜನ ಸದಸ್ಯರು ಹಾಜರಿದ್ದರೆ 4 ಸದಸ್ಯರು ಗೈರು ಹಾಜರಾಗಿದ್ದರು.

ಫಲಿತಾಂಶ ಘೋಷಣೆಯ ನಂತರ ಪುರಸಭೆ ಕಚೇರಿ ಮುಂದೆ ನೆರೆದಿದ್ದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಮಾಜಿ ಶಾಸಕ ಕೆ.ಮಹದೇವ್ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿನ ಮೀಸಲಾತಿ ವರ್ಗೀಕರಣ ವಿಚಾರದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಿ ಚುನಾಯಿತ ಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದೆ. ಇದು ಚುನಾಯಿತ ಪ್ರತಿನಿಧಿಗಳ ಅಧಿಕಾರಕ್ಕೆ ಧಕ್ಕೆ ತರುವಂತ ಸಂಗತಿಯಾಗಿದೆ. ಇಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಎಲ್ಲ ಸದಸ್ಯರೂ ಒಗ್ಗಟ್ಟಿನಿಂದ ಒಮ್ಮತದ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸದ ವಿಷಯವಾಗಿದೆ ಎಂದರು.

ಎಲ್ಲ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಮತದಾರರು ನಮ್ಮ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ, ಪುರಸಭೆ ಮಾಜಿ ಅಧ್ಯಕ್ಷರಾದ ಮಂಜುನಾಥ್ ಸಿಂಗ್, ಕೆ.ಮಹೇಶ್, ನಾಗರತ್ನಾ, ಸದಸ್ಯರಾದ ಪಿ.ಸಿ.ಕೃಷ್ಣ, ಪಿ.ಎನ್.ವಿನೋದ್, ಪ್ರಕಾಶ್, ರವಿ, ಎಚ್.ಕೆ.ಮಂಜುನಾಥ್, ಶ್ಯಾಮ್, ಭಾರತಿ, ಆಶಾ, ಪುಷ್ಪಾ, ರೇವತಿ, ನಿರಂಜನ್, ಶ್ವೇತಾಕುಮಾರ್, ಅಬ್ದುಲ್ ಹರ್ಷದ್, ನೂರ್ ಜಾನ್, ಪುರಸಭೆ ಮುಖ್ಯಾಧಿಕಾರಿ ಕೆ.ಯು.ಮುತ್ತಪ್ಪ, ಮುಖಂಡರಾದ ಎಸ್.ರಾಮು, ವಿದ್ಯಾಶಂಕರ್, ಸಿ.ಎನ್.ರವಿ, ಪ್ರೀತಿ ಅರಸ್, ಸುನಿತಾ ಮಂಜುನಾಥ್, ತಿಮ್ಮನಾಯಕ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net