

ನವದೆಹಲಿ: ತೈವಾನ್ ರಾಷ್ಟ್ರೀಯ ದಿನಕ್ಕೆ ಬಿಜೆಪಿಯ ದೆಹಲಿ ನಾಯಕ ತೇಜಿಂದರ್ ಪಾಲ್ ಸಿಂಗ್ ಶುಭ ಕೋರಿ ಹಾಕಿದ್ದ ಪೋಸ್ಟರ್ ಕೆಲವೇ ಗಂಟೆಗಳಲ್ಲಿ ತೆರವುಗೊಂಡಿದೆ. ಈ ಶುಭಾಶಯದ ಪೋಸ್ಟರನ್ನು ನವದೆಹಲಿ ಮುನಿಸಿಪಲ್ ಕೌನ್ಸಿಲ್ (ಎನ್ಡಿಎಂಸಿ) ತೆರವುಗೊಳಿಸಿದೆ.
ತೇಜಿಂದರ್ ಪಾಲ್ ಸಿಂಗ್ ದೆಹಲಿಯಲ್ಲಿರುವ ಚೀನಾದ ರಾಯಭಾರ ಕಚೇರಿಗೆ ಸನಿಹದಲ್ಲೇ 'ತೈವಾನ್ ಹ್ಯಾಪಿ ನ್ಯಾಷನಲ್ ಡೇ ಅಕ್ಟೋಬರ್ 10' ಎಂಬ ಪೋಸ್ಟರ್ ಶುಕ್ರವಾರ ರಾತ್ರಿ ಹಾಕಿಸಿದ್ದರು. ಮಾತ್ರವಲ್ಲ ಅದರ ಫೋಟೋ ಕೂಡ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಶನಿವಾರ ರಾಷ್ಟ್ರೀಯ ದಿನವನ್ನು ಆಚರಿಸುವುದಾಗಿ ತೈವಾನ್ ಸರ್ಕಾರ ಬುಧವಾರ ಭಾರತದ ಹಲವಾರು ಮಾಧ್ಯಮಗಳಿಗೆ ಜಾಹೀರಾತು ನೀಡಿತ್ತು. ಈ ಹಿನ್ನೆಲೆಯಲ್ಲಿ ತೈವಾನ್ಅನ್ನು ದೇಶ ಅಥವಾ ರಿಪಬ್ಲಿಕ್ ಆಫ್ ಚೈನಾ ಎಂದು ಉಲ್ಲೇಖಿಸಬಾರದು ಹಾಗೂ ದೆಹಲಿಯ 'ಒನ್ ಚೈನಾ' ನೀತಿಯನ್ನು ಉಲ್ಲಂಘಿಸಬಾರದು ಎಂದು ಚೀನಾ ಕೂಡ ನಂತರ ಭಾರತಕ್ಕೆ ಮನವಿ ಮಾಡಿಕೊಂಡಿತ್ತು. ತೈವಾನ್ಗೆ ಶುಭಕೋರಿದ್ದ ಪೋಸ್ಟರ್ ಈ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)