ಕಳವು ಚಿನ್ನ ಜಪ್ತಿಗೆ ಹೋದ ಪೊಲೀಸರಿಗೇ ಘೇರಾವ್

Gold Theft
Published on

ಹೊಸೂರಿನ ಅತ್ತಿಮುಗಂ ಗ್ರಾಮಕ್ಕೆ ಹೋಗಿದ್ದ ರಾಮಮೂರ್ತಿನಗರ ಪೊಲೀಸರು

ಹೊಸೂರು: ಕಳವು ಮಾಡಿದ್ದ ಚಿನ್ನಾಭರಣ ಜಪ್ತಿ ಮಾಡಲು ತಮಿಳುನಾಡಿನ ಹೊಸೂರಿನ ಗ್ರಾಮಕ್ಕೆ ಹೋದ ಬೆಂಗಳೂರಿನ ರಾಮಮೂರ್ತಿನಗರ ಪೊಲೀಸರನ್ನೇ ಸ್ಥಳೀಯರು, ಅಲ್ಲಿನ ಠಾಣೆಗೆ ಮೆಟ್ಟಿಲೇರಿಸಿರುವ ಪ್ರಕರಣ ಶನಿವಾರ ರಾತ್ರಿ ನಡೆದಿದೆ.

ಕಳ್ಳತನ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿಯೊಬ್ಬ ಕದ್ದ ಚಿನ್ನಾಭರಣವನ್ನು ಹೊಸೂರು ಬಳಿ ಇರುವ ಅತ್ತಿಮುಗಂ ಗ್ರಾಮದಲ್ಲಿ ಗಿರವಿ ಇಟ್ಟಿರುವುದಾಗಿ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ರಾಮಮೂರ್ತಿನಗರ ಠಾಣೆಯ ಪಿಎಸ್​ಐ ಶ್ರೀಧರ್ ಹಾಗೂ ಮತ್ತಿತರ ಸಿಬ್ಬಂದಿ ಶನಿವಾರ ರಾತ್ರಿ ಅತ್ತಿಮುಗಂನಲ್ಲಿರುವ ಗಿರವಿ ಅಂಗಡಿಗೆ ಹೋಗಿದ್ದರು. ಅಂಗಡಿ ಮಾಲೀಕ ದಿಲೀಪ್ ಎಂಬಾತನನ್ನು ಪ್ರಶ್ನಿಸಿ ತಮ್ಮ ವಾಹನದಲ್ಲಿ ಕೂರಿಸಿಕೊಳ್ಳಲು ಯತ್ನಿಸಿದ್ದರು. ದಿಲೀಪ್ ಕೂಗಿಕೊಂಡಾಗ ಜನರ ಸೇರಿದ್ದರು.

ಸ್ಥಳೀಯ ಊರಿನ ಮುಖಂಡರು ಮಧ್ಯಪ್ರವೇಶಿಸಿ ಸಮಾಧಾನಪಡಿಸಿದ್ದರು. ಇದೇ ವೇಳೆ ಸುತ್ತಮುತ್ತಲ ಗ್ರಾಮಗಳ ಗಿರಿವಿ ಅಂಗಡಿಯ ಮಾಲೀಕರೂ ಸ್ಥಳಕ್ಕೆ ಆಗಮಿಸಿ, ಪೊಲೀಸರ ಜತೆ ವಾಗ್ವಾದಕ್ಕಿಳಿದಿದ್ದರು. ಕೊನೆಗೆ ಸ್ಥಳೀಯರೆಲ್ಲ ಸೂಳಗಿರಿ ಪೊಲೀಸ್ ಠಾಣೆಗೆ ಹೋಗಿ ಬೆಂಗಳೂರು ಪೊಲೀಸರು ವಿರುದ್ಧ ದೂರು ಕೊಟ್ಟಿದ್ದರು.

ಕರ್ನಾಟಕ ಪೊಲೀಸರು ರಾತ್ರಿ ವೇಳೆ ಬಂದು, ನಮ್ಮ ಮೇಲೆ ಕೇಸ್ ಇದೆ ಎಂದು ಹೇಳುತ್ತಾರೆ. ಕಾನೂನು ರೀತಿ ಅನುಮತಿ ಇಲ್ಲದೆ ಖಾಸಗಿ ವಾಹನಗಳಲ್ಲಿ ಬಂದು, ಕಳ್ಳತನದ ಚಿನ್ನಾಭರಣ ಖರೀದಿಸಿದ್ದೀರಿ ಎಂದು ಆರೋಪಿಸಿ ಕಾರಿನಲ್ಲಿ ಕರೆದೊಯ್ಯುತ್ತಾರೆ. ಕೆಲ ವರ್ಷಗಳಿಂದ ಈ ರೀತಿ ನಡೆಯುತ್ತಿದೆ. ಕೆಲವು ಸಲ ಹಣ ಪಡೆದು ಮಾರ್ಗ ಮಧ್ಯೆ ಬಿಟ್ಟು ಹೋಗಿರುವ ಪ್ರಸಂಗಗಳು ನಡೆದಿವೆ. ಅಸಲಿ ಪೊಲೀಸರ ಹೆಸರಿನಲ್ಲಿ ದುಷ್ಕರ್ವಿುಗಳು ಕೂಡ ಕೃತ್ಯ ಎಸಗುತ್ತಿದ್ದಾರೆ ಎಂದು ಜ್ಯುವೆಲ್ಲರಿ ಮಳಿಗೆಗಳ ಮಾಲೀಕರು ಸೂಳಗಿರಿ ಠಾಣೆಗೆ ದೂರು ಕೊಟ್ಟಿದ್ದರು.

ಸೂಳಗಿರಿ ಠಾಣೆಯ ಸಿಐ ಮುತ್ತುಕೃಷ್ಣನ್ ಹಾಗೂ ಎಸ್​ಐ ಪಾಂಜಾಲಿ ಅವರು ಇನ್ನು ಮುಂದೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ರಾಮಮೂರ್ತಿನಗರ ಠಾಣೆ ಎಸ್​ಐ ಮತ್ತಿತರ ಸಿಬ್ಬಂದಿಗೆ ಸೂಚಿಸಿದರು. ನ್ಯಾಯಾಲಯದಿಂದ ಸಮನ್ಸ್ ಪಡೆದು, ಸ್ಥಳೀಯ ಪೊಲೀಸರಿಗೂ ತಿಳಿಸಿ. ನಿಮ್ಮ ತನಿಖೆಗೆ ನೆರವು ನೀಡಲಾಗುವುದು ಎಂದು ಹೇಳಿ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net