ಮದುವೆಯಾಗ್ತೇನೆಂದು ಕಾಡಿಗೆ ಕರೆದೊಯ್ದು ರೇಪ್​! ಪೊಲೀಸ್​ ಠಾಣೆ ಸಿಬ್ಬಂದಿ ವಿರುದ್ಧವೇ ದೂರು ನೀಡಿದ ಯುವತಿ

marriage
Published on

ರಾಂಚಿ: ಮದುವೆಯಾಗುತ್ತೇನೆ ಎಂದು ನಂಬಿಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡ ವ್ಯಕ್ತಿಯೊಬ್ಬ, ಯುವತಿಯನ್ನು ಕಾಡಿಗೆ ಕರೆದುಕೊಂಡು ಹೋಗಿ ರೇಪ್​ ಮಾಡಿ ಅಲ್ಲಿಯೇ ಬಿಟ್ಟು ಬಂದಿರುವ ಘಟನೆ ಜಾರ್ಖಂಡ್​ನ ಮುಸಬಾನಿ ಹತ್ತಿರ ನಡೆದಿದೆ. ಮುಸಬಾನಿ ಪೊಲೀಸ್​ ಠಾಣೆಯ ಸಿಬ್ಬಂದಿ ವಿರುದ್ಧ ಯುವತಿ ಇದೀಗ ದೂರು ದಾಖಲಿಸಿದ್ದಾಳೆ.

ಪೊಲೀಸ್​ ಠಾಣೆಯ ಸಿಬ್ಬಂದಿ ಪ್ರೇಮ್​ ಚಂದ್ ಕೆಲ ತಿಂಗಳ ಹಿಂದೆ ಆ ಯುವತಿಯನ್ನು ಭೇಟಿ ಮಾಡಿದ್ದನಂತೆ. ನಾನು ನಿನ್ನ ಪ್ರೀತಿಸುತ್ತೇನೆ, ನಿನ್ನನ್ನೇ ಮದುವೆಯಾಗುತ್ತೇನೆಂದು ನಂಬಿಸಿದ್ದಾನೆ. ಮೊದಲೇ ಆತ ಪೊಲೀಸ್​ ಠಾಣಾ ಸಿಬ್ಬಂದಿಯಾಗಿದ್ದರಿಂದ ಯುವತಿ ತುಂಬಾ ಸುಲಭವಾಗಿ ನಂಬಿ ಆತನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಮದುವೆಯಾಗುತ್ತೇನೆ ಎಂದು ಹೇಳುತ್ತಲೇ ಆತ ಈವರೆಗೆ ಸಾಕಷ್ಟು ಬಾರಿ ಯುವತಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾನೆ.

ಇತ್ತೀಚೆಗೆ ಒಂದು ದಿನ ಯುವತಿ ಮದುವೆಯಾಗೆಂದು ಹಠ ಹಿಡಿದ ಹಿನ್ನೆಲೆಯಲ್ಲಿ ಮದುವೆಯಾಗುವುದಕ್ಕೆಂದು ದೇವಸ್ಥಾನವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ದೇವಸ್ಥಾನದಲ್ಲಿ ಜನರಿದ್ದಾರೆ ಎನ್ನುವ ಕಾರಣ ಕೊಟ್ಟು, ಕಾಡಿನಲ್ಲಿ ಮದುವೆಯಾಗೋಣವೆಂದು ಅಲ್ಲಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆಕೆ ಒಪ್ಪದಿದ್ದರೂ ಬಲವಂತವಾಗಿ ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ. ಅದಾದ ನಂತರವೂ ಮದುವೆಯಾಗೆಂದು ಹಠ ಹಿಡಿದ ಆಕೆಯನ್ನು ಅಲ್ಲಿಯೇ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಈ ವಿಚಾರವಾಗಿ ಯುವತಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net