ಅರೆಬೆಂದ ಶವದ ಹಿಂದಿನ ರಹಸ್ಯ ಭೇದಿಸಿದ ಪೊಲೀಸರು

Crime
Published on

ಹಾಸನ: ಅರಸೀಕೆರೆ ತಾಲೂಕಿನ ಅರೆಕೆರೆ ಗ್ರಾಮದ ಬಳಿ ಕಳೆದ ಜನವರಿಯಲ್ಲಿ ಪತ್ತೆಯಾಗಿದ್ದ ಅರೆಬೆಂದ ಶವದ ಹಿಂದಿನ ರಹಸ್ಯ ಭೇದಿಸಿರುವ ಬೇಲೂರು ವೃತ್ತದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಲಕ್ಯ ಗ್ರಾಮದ ಶ್ರೀಕಾಂತ್ (26), ಮೋಹನ್ (29), ಚೇತನ್(29) ಬಂಧಿತರು. ಇವರಿಂದ ಹತ್ಯೆಗೀಡಾದ ಅಪರಿಚಿತ ಭಿಕ್ಷುಕನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿನ್ನೆಲೆ: ಜನವರಿ 6ರಂದು ಬಾಣಾವರ-ಜಾವಗಲ್ ರಸ್ತೆಯ ಅರೆಕೆರೆ ಕೆರೆಕೋಡಿ ಹಳ್ಳದ ಸೇತುವೆ ಬಳಿ ಕುತ್ತಿಗೆಗೆ ಟೈರ್‌ಗಳನ್ನು ಹಾಕಿ ಸುಟ್ಟ ಸ್ಥಿತಿಯಲ್ಲಿ ಗೋಣಿಚೀಲದಲ್ಲಿದ್ದ ಸುಮಾರು 25-30 ವರ್ಷ ವಯಸ್ಸಿನ ಗಂಡಸಿನ ಶವ ಪತ್ತೆಯಾಗಿತ್ತು. ಬಾಣಾವರ ಠಾಣೆ ಪೊಲೀಸರು ಶವವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು. 9 ಸತಿಂಗಳು ಕಳೆದರೂ ಮೃತನ ಗುರುತು ಪತ್ತೆಯಾಗದ್ದರಿಂದ ಪ್ರಕರಣದ ತನಿಖೆ ಮುಂದುವರಿದಿರಲಿಲ್ಲ. ಇದನ್ನೂ ಓದಿ: ಇವತ್ತು 500 ಕಿಲೋ, ನಾಳೆ 600 ಕಿಲೋ… ಭಾರ ಹೊರುವುದರಲ್ಲಿ ಆನೆಗೆ ಆನೆಯೇ ಸಾಟಿ!

ಇತ್ತೀಚೆಗೆ ಬೇಲೂರು ಸಿಪಿಐ ಎಸ್.ಸಿದ್ದರಾಮೇಶ್ವರ ಅವರಿಗೆ ಲಕ್ಯ ಗ್ರಾಮದ ಸ್ಥಳೀಯ ವ್ಯಕ್ತಿಯೊಬ್ಬರಿಂದ ಕಳೆದ ಜನವರಿಯಲ್ಲಿ ಮೂವರು ಯುವಕರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ ಕಾರಿನಲ್ಲಿ ಎಳೆದೊಯ್ದಿದ್ದ ಬಗ್ಗೆ ಮಾಹಿತಿ ದೊರಕಿತ್ತು. ಅದನ್ನಾಧರಿಸಿ ಮಂಗಳವಾರ ಚಿಕ್ಕಮಗಳೂರು ಜಿಲ್ಲೆ ಲಕ್ಯ ಗ್ರಾಮಕ್ಕೆ ತೆರಳಿದ ಸಿಪಿಐ ಸಿದ್ದರಾಮೇಶ್ವರ ಅವರ ತಂಡ ಶ್ರೀಕಾಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಕುಡಿದ ಮತ್ತಿನಲ್ಲಿ ಭಿಕ್ಷುಕನ ಮೇಲೆ ಸೇಡು: ಜನವರಿ 6ರಂದು ಶ್ರೀಕಾಂತ್‌ನ ಅಣ್ಣನ ಮಗನ ನಾಮಕರಣ ಸಮಾರಂಭ ಏರ್ಪಾಡಾಗಿತ್ತು. ಆ ಕಾರ್ಯಕ್ರಮ ಮುಗಿಸಿದ ನಂತರ ಮದ್ಯದ ಪಾರ್ಟಿ ನಡೆಸಿದ್ದ ಮೂವರೂ ಆರೋಪಿಗಳು ಎಸ್ಟೀಮ್ ಕಾರಿನಲ್ಲಿ ರಾತ್ರಿ ಸುತ್ತಾಟಕ್ಕೆ ಹೊರಟಿದ್ದರು. ಅದರಂತೆ ಲಕ್ಯ ಬಸ್ ತಂಗುದಾಣಕ್ಕೆ ಬಂದ ಅವರು ಕುಡಿದ ಅಮಲಿನಲ್ಲಿ ಅಲ್ಲಿ ಮಲಗಿದ್ದ ಅಪರಿಚಿತ ಭಿಕ್ಷುಕನನ್ನು ಕೆಣಕಿ ಆತನ ಮೇಲೆ ಹಲ್ಲೆ ನಡೆಸಿದ್ದರು. ಇದನ್ನೂ ಓದಿ: ದಲಿತ ವೃದ್ಧನಿಗೆ ಮೂತ್ರ ಕುಡಿಯಲು ಬಲವಂತ ಮಾಡಿದರು, ಒಪ್ಪದಾಗ ಹಿಗ್ಗಾಮುಗ್ಗಾ ಥಳಿಸಿದರು

ಅದಕ್ಕೆ ಪ್ರತಿಯಾಗಿ ಭಿಕ್ಷುಕ, ಶ್ರೀಕಾಂತ್‌ನ ಕೈಗೆ ಹಲ್ಲಿನಿಂದ ಕಚ್ಚಿ ಅಲ್ಲಿಂದ ಓಡಿ ಹೋದ. ಆತನ ಕೃತ್ಯದಿಂದ ಸಿಟ್ಟಿಗೆದ್ದ ಆರೋಪಿಗಳು ಸೇಡು ತೀರಿಸಿಕೊಳ್ಳಲು ಆತನ ಬೆನ್ನಟ್ಟಿ ಹೋಗಿ ಹಿಡಿದು ದೊಣ್ಣೆಯಿಂದ ಹೊಡೆದು ಆತನನ್ನು ಹತ್ಯೆ ಮಾಡಿದ್ದರು. ನಂತರ ಪ್ರಕರಣದಲ್ಲಿ ಸಿಕ್ಕಿಬೀಳಬಾರದು ಎಂದು ಸಾಕ್ಷೃನಾಶ ಮಾಡುವ ಉದ್ದೇಶದಿಂದ ಶವವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಅರೆಕೆರೆಗೆ ತಂದು ಸುಟ್ಟು ಹಾಕಿದ್ದರು.

ಪ್ರಕರಣದಲ್ಲಿ ಮೃತನ ಗುರುತು ಪತ್ತೆಯಾಗದಿದ್ದರಿಂದ ತಾವೂ ಮಾಡಿದ ಅಪರಾಧವೂ ಯಾರಿಗೂ ಗೊತ್ತಾಗಲಿಲ್ಲ ಎಂದು ಆರೋಪಿಗಳು ನಿರಾಳವಾಗಿ ಓಡಾಡಿಕೊಂಡಿದ್ದರು. ಆದರೆ ಪೊಲೀಸ್ ಮಾಹಿತಿದಾರರೊಬ್ಬರು ನೀಡಿದ ಸುಳಿವಿನಿಂದ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಅರಸೀಕೆರೆ ಡಿವೈಎಸ್‌ಪಿ ಎಲ್.ನಾಗೇಶ್, ಸಿಪಿಐ ಸಿದ್ದರಾಮೇಶ್ವರ, ಪಿಎಸ್‌ಐ ಅಜಯ್ ಅವರ ತಂಡದ ಕಾರ್ಯ ಶ್ಲಾಘನೀಯವಾಗಿದೆ. ಮೊಬೈಲ್ ಕರೆ ವಿವರ, ಸಿಸಿಟಿವಿ ದೃಶ್ಯಾವಳಿಯಂತಹ ಯಾವುದೇ ತಾಂತ್ರಿಕ ಅಂಶಗಳ ಸಹಾಯವಿಲ್ಲದೆ ಪ್ರಕರಣವನ್ನು ಭೇದಿಸಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net