

ಶಿವಮೊಗ್ಗ: ಪ್ರತಿಯೊಬ್ಬ ವ್ಯಕ್ತಿಯ ಭಾವನೆಗಳನ್ನು ಜನಮಾನಸಕ್ಕೆ ತಲುಪಿಸುವ ವೇಮನರ ಜೀವನದ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಕುವೆಂಪು ರಂಗಮಂದಿರ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ರೆಡ್ಡಿ ಸಂಘದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಉದ್ಘಾಟಿಸಿ ಮಾತನಾಡಿ, ವೇಮನರ ಬಗ್ಗೆ ರಾಜ್ಯಾದ್ಯಂತ ಜಾಗೃತಿ ಮೂಡಬೇಕು. ಆ ಮೂಲಕ ವಚನ ಸಾಹಿತ್ಯ, ಕವಿ ಪರಂಪರೆಯನ್ನು ಒಪ್ಪಿ ಮುಂದೆ ತೆಗೆದುಕೊಂಡು ಹೋಗಬೇಕಿದೆ ಎಂದು ತಿಳಿಸಿದರು.
ಮೂಲತಃ ಆಂಧ್ರಪ್ರದೇಶದ ವೇಮನ ಅವರು, ವಚನ ಸಾಹಿತ್ಯವನ್ನು ದೇಶದ ಮೂಲೆ ಮೂಲೆಗೆ ತಲುಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಿರುವಳ್ಳುವರ್ ಮಾದರಿಯಲ್ಲಿ ವೇಮನರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ವೇಮನ ಮಾಡಿದ ಅನೇಕ ಒಳ್ಳೆಯ ಸಂಗತಿಗಳನ್ನು ವಚನಗಳ ಮೂಲಕ ತೋರಿಸಿದ್ದಾರೆ. ರಾಜ್ಯ ಸರ್ಕಾರ ವೇಮನ ಅವರನ್ನು ಬೇರೆ ರಾಜ್ಯದವರು ಎಂಬ ಆಲೋಚನೆ ಮಾಡದೆ ಪ್ರಾಶಸ್ತ್ಯ ನೀಡಬೇಕು. ಭಾಷೆ ಬೇರೆ ಇರಬಹುದು, ಆದರೆ ಭಾವನೆ ಒಂದೇ. ಆ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುತುವರ್ಜಿ ವಹಿಸಿ ವೇಮನ ಕುರಿತು ಕೈಪಿಡಿ ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ರೆಡ್ಡಿ ಸಂಘದ ಅಧ್ಯಕ್ಷ ಭೀಮಾ ರೆಡ್ಡಿ ಮಾತನಾಡಿ, ವೇಮನರು ದೊಡ್ಡ ಭಂಡಾರವಿದ್ದಂತೆ. ತಿರುವಳ್ಳುವರ್, ಸರ್ವಜ್ಞರಂತೆ ವೇಮನರನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರನ್ನು ಅರ್ಥ ಮಾಡಿಕೊಳ್ಳಲು ಅವರ ಹಾದಿಯಲ್ಲೇ ಸಾಗಬೇಕು ಎಂದರು.
ಜಿಲ್ಲಾ ರೆಡ್ಡಿ ಸಂಘದ ಉಪಾಧ್ಯಕ್ಷ ಮೋಹನ್ ರೆಡ್ಡಿ, ಸಂಘದ ಸದಸ್ಯರಾದ ಶ್ರೀನಿವಾಸ ರೆಡ್ಡಿ, ಪಿ.ವಿ.ಕೃಷ್ಣಾರೆಡ್ಡಿ, ಡಾ. ಶ್ರೀನಿವಾಸ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಸಮಾಜದ ಮುಖಂಡರು ಹಾಜರಿದ್ದರು.