ಉದ್ಯೋಗ ಖಾತ್ರಿ ಯೋಜನೆ ಮುಗಿಸುವ ಹುನ್ನಾರ

31hgr2
ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಅವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷ್ಣೆಗೌಡ ಮಾತನಾಡಿದರು.
Published on

ಹಲಗೂರು: ಗ್ರಾಮೀಣ ಪ್ರದೇಶದ ಬಡ ಜನತೆಯ ಹಿತದೃಷ್ಟಿಯಿಂದ ಜಾರಿಗೆ ಬಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಗಿಸುವ ಹುನ್ನಾರ ನಡೆಸಿದೆ ಎಂದು ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಆರೋಪಿಸಿದರು.

ಕರ್ನಾಟಕ ಕೃಷಿ ಕೂಲಿಕಾರರ ಸಂಘದ ವತಿಯಿಂದ ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಅವರಣದಲ್ಲಿ ಭಾನುವಾರ ಆಯೋಜಿಸಿದ್ದ ಹಲಗೂರು ಹೋಬಳಿ 2ನೇ ವಲಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ನರೇಗಾ ಯೋಜನೆಗಳಿಗೆ 1.12 ಲಕ್ಷ ಕೋಟಿ ರೂ. ಅನುದಾನ ಮಂಜೂರಾಗಿತ್ತು. ಪ್ರಸ್ತುತ ಕೂಲಿಕಾರರ ಹಿತದೃಷ್ಟಿಯಿಂದ 2.35 ಲಕ್ಷ ಕೋಟಿ ರೂ. ಅನುದಾನ ಅಗತ್ಯವಿತ್ತು. ಆದರೆ ಪ್ರಸ್ತುತ ಸಾಲಿನಲ್ಲಿ ಕೇವಲ 86 ಸಾವಿರ ಕೋಟಿ ರೂ.ಗೆ ಇಳಿಸುವ ಮೂಲಕ ಬಡ ಕೂಲಿಕಾರರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಬಿಜೆಪಿ ಧರ್ಮದ ಹೆಸರಿನಲ್ಲಿ ಉಳ್ಳವರ ಪರವಾಗಿ ಕೆಲಸ ಮಾಡಲಾಗುತ್ತಿದೆಯೇ ಹೊರತು, ರಾಜ್ಯದ ಸಾಮಾನ್ಯ ಜನರ ಅಗತ್ಯತೆಗಳ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ. ಖ್ಯಾತ ಬರಹಗಾರ್ತಿ ಭಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸಬಾರದು ಎಂದು ನಾಡಹಬ್ಬಕ್ಕೆ ಧರ್ಮ ಬೆರೆಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.

ಕೇರಳ ರಾಜ್ಯದಲ್ಲಿ ಬಡವರಿಗಾಗಿ ಕಲ್ಯಾಣ ಮಂಡಳಿ ರಚನೆ ಮಾಡಿದ್ದು, 27.5 ಲಕ್ಷ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ದುಡಿಮೆಯ ಇಂತಿಷ್ಟು ಹಣ ಉಳಿತಾಯ ಮಾಡುವ ಮೂಲಕ 60 ವರ್ಷದ ನಂತರ ವೃದ್ಧಾಪ್ಯ ವೇತನವನ್ನು ನೀಡಲಾಗುತ್ತಿದೆ. ಕೂಲಿಕಾರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಇಂತಹ ಜನಪರ ಯೋಜನೆ ಜಾರಿಗೆ ತರಲು ಮುಂದಾಗಬೇಕೆಂದು ಆಗ್ರಹಿಸಿದರು.

ಮುಖಂಡರಾದ ಕುಂತೂರು ಗೋಪಾಲ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಪಟ್ಟಣದ ಕಡೆಗೆ ವಲಸೆ ಹೋಗಬಾರದೆಂಬ ಪ್ರಮುಖ ಉದ್ದೇಶದಿಂದ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಯ ಪ್ರತಿಫಲವಾಗಿ ಉದ್ಯೋಗ ಖಾತರಿ ಯೋಜನೆ ಜಾರಿಗೆ ತಿತು.ಮಹತ್ವಾಕಾಂಕ್ಷಿ ಯೋಜನೆ ಸಮರ್ಪಕವಾಗಿ ಜಾರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಹನುಮೇಶ್, ಹಲಗೂರು ಹೋಬಳಿ ಘಟಕದ ಅಧ್ಯಕ್ಷೆ ಕುಂತೂರು ಲಕ್ಷ್ಮೀ, ಕಾರ್ಯದರ್ಶಿ ಗೊಲ್ಲರಹಳ್ಳಿ ಲಕ್ಷ್ಮೀ, ಕರಡಹಳ್ಳಿ ಶಿವಲಿಂಗಮ್ಮ, ರಾಜಮ್ಮ, ವಸಂತ, ರತ್ನಮ್ಮ, ತುಳಸಮ್ಮ, ಮಹದೇವಮ್ಮ, ಮಹೇಶ, ಗೌರಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net