ಕೃಷ್ಣಮೃಗವು ವಿಹರಿಸುವೆಡೆಯೇ ಪವಿತ್ರವಾದುದು

1-67f954104361d
Published on
ಭಾರತೀಯಸಾಹಿತ್ಯದಲ್ಲಿ ಮೊದಲಿನಿಂದಲೂ ಸಿಂಹಕ್ಕೇ ಮೃಗರಾಜನೆಂಬ ಪಟ್ಟ. ರಾಣಾಪ್ರತಾಪ ಸಿಂಗ್, ಭಗತ್ ಸಿಂಗ್ -ಮುಂತಾದವರ ಹೆಸರಿಗೂ ಶೋಭೆಕೊಡಬಲ್ಲ, ಠೀವಿಯ ನಡೆಯ ನಿರ್ಭಯಪ್ರಾಣಿಯೇ ಈ ಕಂಠೀರವ. ಆದರೂ ಭಾರತದ ರಾಷ್ಟ್ರಿಯಪ್ರಾಣಿಯೆಂದು ಘೊಷಿಸಿದುದು ವ್ಯಾಘ್ರವನ್ನೇ.

ಎಲ್ಲಾ ರಾಜ್ಯಗಳಲ್ಲೂ ಅದರ ಅಸ್ತಿತ್ವ, ವಿಶಿಷ್ಟಬಲ-ಪರಾಕ್ರಮಗಳು, ಮುಂತಾದುವನ್ನಾಧರಿಸಿ ಅದಕ್ಕೀ ಪದವಿಯು ದಕ್ಕಿತು- 1973ರಲ್ಲಿ. ಇನ್ನು ಆನೆಯೋ? ಸಸ್ಯಾಹಾರಿಯಾದರೂ ಬೃಹದಾಕಾರದ ಪ್ರಾಣಿ. ಬಲಶಾಲಿಯಾದರೂ ಪಳಗಿಸಬಹುದಾದದ್ದು. ಅರಸರಿಗೆ ಅಚ್ಚುಮೆಚ್ಚಾಗಿದ್ದು, ಮೆರವಣಿಗೆ-ಉತ್ಸವಗಳಿಗೆ ಮೆರುಗು ತರುವುದೆಂಬ ಕಾರಣಕ್ಕೆ, ರಾಷ್ಟ್ರಿಯ ಸಾಂಸ್ಕೃತಿಕಪ್ರಾಣಿಯೆಂಬ ಬಿರುದನ್ನು ಪಡೆಯಿತು - 2010ರಲ್ಲಿ. ಸರ್ವವಂದ್ಯವಾದ ಗೋವಿಗೆ ಸಹ ಇವಕ್ಕೆ ಸರಿಸಮವೆನಿಸುವ ಸ್ಥಾನಗಳು ಸಲ್ಲಲಿಲ್ಲ!

ಭಾರತದೇಶದ ಪ್ರಾಜ್ಞರು ಪೃಥಿವಿಯಲ್ಲಿರುವ ಮಾನವರೆಲ್ಲರಿಗೂ ಮಾರ್ಗದರ್ಶಕರಾಗಬಲ್ಲರು ಎಂದು ಮನುಸ್ಮೃಯು ಭಾರತದ ವಿಶ್ವಗುರುತ್ವವನ್ನು ಸಾರಿದೆಯಷ್ಟೆ. ಆ ಸಂದರ್ಭದಲ್ಲಿಯೇ ಬ್ರಹ್ಮಾವರ್ತ, ಬ್ರರ್ಹ¾ದೇಶ, ಆರ್ಯಾವರ್ತಗಳನ್ನು ಕುರಿತು ಅದು ಹೇಳುತ್ತದೆ. ಹಾಗೆ ಹೇಳುವಾಗ ಯಾವುದು ಶ್ರೇಷ್ಠದೇಶ, ಯಾವುದಲ್ಲವೆಂಬ ವಿಂಗಡಣೆಯನ್ನದು ಮಾಡುತ್ತದೆ. ಯಾಜ್ಞವಲ್ಕ್ಯಸ್ಮೃತಿಯು ಸಹ, ಪವಿತ್ರವೆನಿಸುವ ದೇಶವನ್ನು ಆರಂಭದಲ್ಲೇ ಗುರುತಿಸಿ, ಅಲ್ಲಿ ಆಚರಿಸಿ ಸಾಧಿಸಬೇಕಾದುದನ್ನು ಹೇಳಹೊರಡುತ್ತದೆ.

ಈ ಎರಡು ಸ್ಮೃತಿಗಳೂ ಈ ಪುಣ್ಯ ಭೂಮಿಗೆ ಕೊಡುವ ಒಂದು ವಿಶಿಷ್ಟಲಕ್ಷಣವಿದೆ. ಯಾವ ದೇಶದಲ್ಲಿ ‘ಸ್ವಭಾವತಃ’ ಕೃಷ್ಣಮೃಗದ ವಾಸವಿರುತ್ತದೋ (ಯಸ್ಮಿನ್ ದೇಶೇ ಮೃಗಃ ಕೃಷ್ಣಃ), ವಿಹಾರವಿರುತ್ತದೋ, ಅದುವೇ ಶ್ರೇಷ್ಠಭೂಮಿ ಎಂದು. ಯಾಜ್ಞವಲ್ಕ್ಯಸ್ಮೃಗೆ ಕರ್ಣಾಟಕದ ವಿಜ್ಞಾನೇಶ್ವರನು ಬರೆದಿರುವ ‘ಮಿತಾಕ್ಷರಾ’ ವ್ಯಾಖ್ಯೆಯೂ ಕೃಷ್ಣಸಾರಮೃಗವು ‘ಸ್ವಚ್ಛಂದ’ ವಾಗಿ ಎಲ್ಲಿ ಸಂಚರಿಸುತ್ತದೆಯೋ ಅದು ಎನ್ನುತ್ತದೆ.

ಸ್ವಭಾವತಃ ವಾಸಮಾಡುವುದೆಂದರೇನೆಂದು ವಿವರಿಸುತ್ತಾ, ಮನುಸ್ಮೃವ್ಯಾಖ್ಯಾನಕಾರರಾದ ಮೇಧಾತಿಥಿ-ಕುಲ್ಲೂಕಭಟ್ಟರು, ‘ದೇಶಾಂತರದಿಂದ ಏನೋ ಉಪಾಯಮಾಡಿಯೋ, ಮತ್ತಾವುದೋ ಉದ್ದೇಶಕ್ಕೆಂದೋ ತರಲಾದ ಮೃಗವಾಗಿರಬಾರದು ಅದು’, ಎನ್ನುತ್ತಾರೆ. ಹೀಗೆ ಅನ್ವಯಮುಖವಾಗಿ ಹೇಳಿದ್ದನ್ನು ವ್ಯತಿರೇಕಮುಖವಾಗಿಯೂ ದೃಢಪಡಿಸಿ ಹೇಳಿದೆ. ಅನ್ವಯಮುಖವಾಗಿ ಎಂದರೆ, ‘ಇದು ಹೀಗಿದ್ದರೆ ಅದು ಹಾಗಾಗುತ್ತದೆ’ ಎಂಬ ಲೆಕ್ಕ. ವ್ಯತಿರೇಕಮುಖವಾಗಿ ಎಂದರೆ, ‘ಇದು ಹೀಗಿಲ್ಲದಿದ್ದರೆ ಅದು ಹಾಗಾಗದು’ ಎಂಬ ಲೆಕ್ಕ.

ಈ ಲೆಕ್ಕದ ಮೇರೆಗೆ, ಕೃಷ್ಣಸಾರಮೃಗದ ಸಹಜವಾದ ಇರುವಿಕೆ, ಸ್ವಚ್ಛಂದವಾದ ಸಂಚಾರಗಳು ಇದ್ದಲ್ಲಿ ಅದು ಶ್ರೇಷ್ಠವಾದ ದೇಶ, ಹಾಗಿಲ್ಲದಿದ್ದಲ್ಲಿ ಅದು ಮ್ಲೇಚ್ಛದೇಶ - ಎಂದಿದೆ. ಶ್ರೇಷ್ಠವಾದ ದೇಶವೆಂಬುದನ್ನು ಸೂಚಿಸಲು ಅದು ‘ಯಜ್ಞಿಯದೇಶ’ ಎಂದೂ ಈ ಸ್ಮೃಗಳು ಹೇಳಿವೆ. ಆದರೆ ಇಲ್ಲಿ ಬರಬಹುದಾದ ಪ್ರಶ್ನೆಯೆಂದರೆ, ಮೇಲೆ ಹೇಳಿದ ಬಗೆಬಗೆಯ ಹೆಗ್ಗಳಿಕೆಗಳುಳ್ಳ ಗೋ- ಗಜ- ಸಿಂಹ- ವ್ಯಾಘ್ರಗಳನ್ನು ಬಿಟ್ಟು ಕೃಷ್ಣಸಾರಮೃಗಕ್ಕೆ ಕೊಟ್ಟಿರುವ ಈ ವಿಶಿಷ್ಟಸ್ಥಾನಕ್ಕೆ ಕಾರಣವೇನೆಂಬುದು. ಈ ಪ್ರಶ್ನೆಯನ್ನು ತಾವೇ ಎತ್ತಿ ಇದಕ್ಕೊಂದು ಸಮರ್ಪಕವಾದ ಉತ್ತರವನ್ನು ಶ್ರೀರಂಗಮಹಾಗುರುಗಳು ಬಹಳ ಹಿಂದೆಯೇ ಕೊಟ್ಟಿರುವರು. ಅವರ ಮಾತಿನ ಕೆಲಮುಖ್ಯಾಂಶಗಳು ಹೀಗಿವೆ.

‘ಕೃಷ್ಣಸಾರಮೃಗವು ಯಜ್ಞಿಯವಾದ ಮೃಗ. ಎಷ್ಟೆಂದರೆ, ಈ ಮೃಗದ ಪ್ರತಿಯೊಂದು ಭಾಗವೂ ಯಜ್ಞದಲ್ಲಿ ಉಪಯೋಗಕ್ಕೆ ಬರತಕ್ಕದ್ದಾಗಿದೆ. ಇದರ ಚರ್ಮವೂ ಶೃಂಗಗಳೂ ಯಜ್ಞೀಯ ಸಾಮಗ್ರಿಗಳು. ಅಲ್ಲದೆ, ಇದರ ಚಲನ-ವಲನಗಳು ಮಾನವನ ಪ್ರಜ್ಞಾಕೇಂದ್ರದ ಕೆಲವು ಗ್ರಂಥಿಗಳ ಮೇಲೆ ಕೆಲಸ ಮಾಡುತ್ತವೆ. ಋಷಿಗಳಿಗೆ ಬೇಕಾದ ನೀವಾರ-ದರ್ಭೆಗಳು ಇರುವ ಪ್ರದೇಶಗಳಲ್ಲಿ ಇವು ವಾಸಿಸುವುವು.

ಎಲ್ಲಿ ಕ್ರೂರಪ್ರಾಣಿಗಳಿರುವುವೋ ಅಲ್ಲಿ ಕೃಷ್ಣಸಾರಗಳಿರ(ಲಾರ)ವು. ಬದಲಾಗಿ, ಎಲ್ಲಿ ದರ್ಭಸಮೃದ್ಧಿಯಿರು ವುದೋ ಅಲ್ಲಿಯೇ ಕೃಷ್ಣಸಾರಗಳಿರುವುದೂ. ಎಲ್ಲಿ ಹಿಂಸ್ರಪ್ರಾಣಿ ಗಳಿರುವವೋ, ಹಾಗೂ ದರ್ಭೆಯು ಪುಷ್ಕಳವಾಗಿ ದೊರೆಯು ವುದೋ, ಅಲ್ಲಿಯೇ ತಪೋವನಗಳು ಏಳುವುದು. ಎಲ್ಲಿ ತಪೋವನ ಗಳಿರುವುವೋ ಅಲ್ಲಿಯೇ ಯಜ್ಞಯಾಗಾದಿಗಳು ನೆರವೇರುವುವು. ಎಲ್ಲಿ ತಪೋ-ಯಜ್ಞಗಳು ಸಂಪನ್ನವಾಗುವುವೋ ಅಲ್ಲಿ ಧರ್ಮವು ಸುಪ್ರತಿಷ್ಠಿತವಾಗುವುದು. ಋಷಿಗಳು ನಡೆಸುತ್ತಿದ್ದ ಯಜ್ಞಗಳು ಧರ್ಮಸಾರವಾದ ಲೋಕಕಲ್ಯಾಣಾರ್ಥವಾಗಿಯೇ ಇರುತ್ತಿದ್ದವು. ಎಲ್ಲಿ ಧರ್ಮವು ನೆಲೆಗೊಂಡಿರುವುದೋ ಅಲ್ಲೇ ಪ್ರಜೆಗಳು ಪರಸ್ಪರ-ಹಿತಚಿಂತಕರಾಗಿದ್ದು ನೆಮ್ಮದಿಯನ್ನು ಕಾಣುವುದು.’

ಈ ಕಾರಣಕ್ಕಾಗಿಯೇ, ‘ತಪಸ್ವಿಗಳ ಯಜ್ಞ-ತಪಸ್ಸುಗಳು ನಿರ್ವಿಘ್ನವಾಗಿ ನಡೆಯುತ್ತಿವೆ ತಾನೆ?’ ಎಂಬ ಕಾಳಜಿಯನ್ನು ರಾಜರು ವಹಿಸುತ್ತಿದ್ದುದು. ಹಾಗೂ, ಪ್ರಜೆಗಳ ಸುಖವನ್ನು ಲೆಕ್ಕಿಸದೆ ತಮ್ಮ ಅಧಿಕಾರ-ಐಶ್ವರ್ಯಗಳಲ್ಲಿ ಮೆರೆಯುತ್ತಾ ಲೋಕಕಂಟಕರಾಗಿದ್ದ ರಾಕ್ಷಸರಾದರೂ ಯಜ್ಞಕಾರ್ಯಗಳಿಗೇ ಧ್ವಂಸವನ್ನು ಉಂಟುಮಾಡುತ್ತಿದ್ದುದು. ಹೀಗಾಗಿ, ದೇಶದ ಸಲ್ಲಕ್ಷಣವನ್ನು ಮನು-ಯಾಜ್ಞವಲ್ಕ್ಯರು ಕೊಟ್ಟಿರುವುದು ಅತ್ಯಂತ ಸಾರ್ಥಕವಾಗಿದೆ. ಸ್ವಾರ್ಥ-ರಹಿತರಾಗಿ ಲೋಕಹಿತಕ್ಕಾಗಿಯೇ ಶ್ರಮಿಸುತ್ತಿದ್ದ ಋಷಿಗಳ ಮಾರ್ಗದರ್ಶನದಲ್ಲಿದ್ದ ನಾಡು ವಿಶ್ವಗುರುವಾದದ್ದರಲ್ಲಿ ಆಶ್ಚರ್ಯವಾದರೂ ಏನು? ಮತ್ತದೇ ಸ್ಥಾನವು ಮರುಕಳಿಸಲಾ(ಬಾ)ರದೇನು? (ಲೇಖಕರು ಆಧ್ಯಾತ್ಮಚಿಂತಕರು ಮತ್ತು ಪ್ರವಚನಕಾರರು ಅಷ್ಟಾಂಗಯೋಗ ವಿಜ್ಞಾನಮಂದಿರಂ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net