

ಬೆಂಗಳೂರು: ಯಲಹಂಕದ ಕೋಗಿಲು ಮುಖ್ಯ ರಸ್ತೆಯಲ್ಲಿ ಕಾರು ಡಿಕ್ಕಿ ಹೊಡೆದು ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಮಂಜುನಾಥ್ (33) ಎಂಬುವರು ಮೃತಪಟ್ಟಿದ್ದಾರೆ.
ಅಟ್ಟೂರು ನಿವಾಸಿಯಾದ ಮಂಜುನಾಥ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಸೆ.೨೨ರಂದು ರಾತ್ರಿ ಕೋಗಿಲು ಮುಖ್ಯ ರಸ್ತೆಯ ಹೋಟೆಲ್ನಲ್ಲಿ ಊಟ ಮುಗಿಸಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಕಾರು ಚಾಲಕ ನಿರ್ಲಕ್ಷ್ಯದಿಂದ ಅತಿ ವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಬಂದು ಮಂಜುನಾಥ್ ಅವರ ಬೈಕ್‌ಗೆ ವಾಹನ ಗುದ್ದಿದ್ದ. ಡಿಕ್ಕಿಯ ತೀವ್ರತೆಗೆ ಮಂಜುನಾಥ್ ಕೆಲ ಮೀಟರ್‌ಗಳಷ್ಟು ದೂರ ಹೋಗಿ ಬಿದ್ದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಯಲಹಂಕ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಘಟನೆ ನಂತರ ಕಾರು ನಿಲ್ಲಿಸದೆ ಪರಾರಿಯಾಗಿದ್ದ ಚಾಲಕ ಸ್ವರೂಪ್‌ನನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಜಕ್ಕೂರು ನಿವಾಸಿಯಾದ ಸ್ವರೂಪ್, ಸಿವಿಲ್ ಇಂಜಿನಿಯರ್ ಆಗಿದ್ದು, ಆರೋಪಿಯ ಕಾರು ಮಂಜುನಾಥ್ ಬೈಕ್‌ಗೆ ಗುದ್ದಿದ ನಂತರ ರಸ್ತೆ ಬದಿಯಲ್ಲಿ ನಿಂತಿದ್ದ ಬೈಕ್‌ಗಳಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ನಾಲ್ಕು ಬೈಕ್‌ಗಳು ನಜ್ಜುಗುಜ್ಜಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.