

ಚಿಕ್ಕಮಗಳೂರು: ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಯಾವುದೇ ಪಕ್ಷಗಳ ಶಾಸಕರಿದ್ದರೂ ಅವರು ಜಮೀನ್ದಾರರು ಹಾಗೂ ಬಂಡವಾಳಶಾಹಿಗಳ ಪರವಾಗಿಯೇ ಕೆಲಸ ಮಾಡುತ್ತಾರೆ. ಯಾರೊಬ್ಬರೂ ಕಾಫಿ ತೋಟಗಳ ಕಾರ್ಮಿಕರ ಕುರಿತು ಮಾತನಾಡುತ್ತಿಲ್ಲ ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ರುದ್ರಯ್ಯ ದೂರಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಮಲೆನಾಡು ಕಾಫಿ ತೋಟ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾರ್ಮಿಕರೇ ಕಾಫಿ ತೋಟಗಳ ಶಕ್ತಿ. ಆದರೆ ಅವರ ಪರವಾಗಿ ಯಾರು ಧ್ವನಿ ಎತ್ತದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಮಿಕರ ಪಾಲಿಗೆ ಕಾರ್ಮಿಕ ಇಲಾಖೆ, ಜಿಲ್ಲಾಡಳಿತ ಸತ್ತು ಹೋಗಿದೆ. ಇನ್ನು ಕೆಲ ಸಂಘಟನೆಗಳಂತೂ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವವರು ಭಯೋತ್ಪಾದಕರು ಎಂದು ಬಿಂಬಿಸುವ ಕೆಲಸ ಮಾಡುತ್ತಿವೆ. ಕಾಫಿ ತೋಟಗಳಲ್ಲಿ ಕಾರ್ಮಿಕರನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ನಡೆಸಿಕೊಳ್ಳಲಾಗುತ್ತಿದೆ. ಕೆಲಸ ಮಾಡುವಾಗ ಮರಗಳ ರೆಂಬೆ ಬಿದ್ದು ಸಾಕಷ್ಟು ಮಂದಿ ಅಂಗವಿಕಲರಾಗಿದ್ದಾರೆ. ಆದರೆ ಅವರಿಗೆ ಪರಿಹಾರ ನೀಡುವ ಕೆಲಸ ಆಗುತ್ತಿಲ್ಲ. ಕಾಫಿ ಕೃಷಿಯಲ್ಲ ಅದೊಂದು ಕೈಗಾರಿಕೆ. ಹೀಗಾಗಿ ಕಾರ್ಮಿಕರಿಗೆ ರಕ್ಷಣೆ ನೀಡುವುದು ತೋಟಗಳ ಮಾಲೀಕರ ಕರ್ತವ್ಯ ಎಂದರು.
ಬೆಳೆಗಾರರು ಮತ್ತು ಕಾರ್ಮಿಕರು ಕಾಫಿ ಬೆಳೆಯ ಎರಡು ಕಣ್ಣುಗಳು. ಆದರೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ ಎನ್ನುವಂತಾಗಿದೆ. ಈ ಮೂಲಕ ಕಾಫಿ ತೋಟಗಳ ಕಾರ್ಮಿಕರನ್ನು ಕತ್ತಲಲ್ಲಿ ಇರಿಸುವ ಕೆಲಸ ನಡೆದಿದೆ ಎಂದು ಹೇಳಿದರು.
ಟಿಯುಸಿಐ ಅಧ್ಯಕ್ಷ ಮಾನಸಯ್ಯ ಮಾತನಾಡಿ, ಬೆಂಗಳೂರಿನಲ್ಲಿ ವಿಶ್ವ ಕಾಫಿ ದಿನಾಚರಣೆ ಆಚರಿಸುತ್ತಿರುವುದು ಬಂಡವಾಳಶಾಹಿಗಳು, ಪ್ರತಿಷ್ಠಿತ ಕಂಪನಿಗಳು. ಇದಕ್ಕೆ ಬ್ಯಾಂಕ್‌ಗಳು ಹಣಕಾಸು ನೆರವು ನೀಡುತ್ತಿವೆ. 82 ದೇಶಗಳಿಂದ ಸಾವಿರಾರು ಜನ ಕಾಫಿ ಬಗ್ಗೆ ಮಾತನಾಡಲು ಇಲ್ಲಿಗೆ ಬರುತ್ತಿದ್ದಾರೆ. ಆದರೆ ಸಮಾವೇಶದಲ್ಲಿ ಒಬ್ಬನೇ ಒಬ್ಬ ತೋಟದ ಕಾರ್ಮಿಕರಿಲ್ಲ. ಅಲ್ಲಿರುವವರೆಲ್ಲರೂ ವ್ಯಾಪಾರಿಗಳು, ವಹಿವಾಟುದಾರರು ಹಾಗೂ ಬೆಳೆಗಾರರು ಎಂದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಮಾವೇಶವನ್ನು ವಿರೋಧಿಸಿ ಚಿಕ್ಕಮಗಳೂರಿನಲ್ಲಿ ಮಲೆನಾಡು ಕಾಫಿ ಕಾರ್ಮಿಕರ ಸಮಾವೇಶ ನಡೆಸುತ್ತಿದ್ದೇವೆ. ಬೆಂಗಳೂರು ಸಮಾವೇಶದಲ್ಲಿ ಲಾಭದ ಬಗ್ಗೆ ಚರ್ಚೆಯಾಗುತ್ತದೆ. ಆದರೆ ನಮ್ಮ ಈ ಸಮಾವೇಶದಲ್ಲಿ ಕಾರ್ಮಿಕರ ಸಮಸ್ಯೆ ಪರಿಹರಿಸುವ ಸಂಬಂಧ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ಮಲೆನಾಡು ಕಾಫಿ ಕಾರ್ಮಿಕರ ಸಮಾವೇಶವನ್ನು ಕಾರ್ಮಿಕರೇ ಉದ್ಘಾಟಿಸಿದರು. ಟಿಯುಸಿಐ ಕಾರ್ಯದರ್ಶಿ ಚಿನ್ನಪ್ಪ ಕೊಟ್ರೇಶಿ, ಪ್ರಮುಖರಾದ ಬಿ.ಗೋಪಾಲ, ಶ್ರೀನಿವಾಸ ಕಂದಗಾಲ, ಸಣ್ಣಪ್ಪ ಕೊಡಗು, ಸುರೇಶ್ ಶಿವಮೊಗ್ಗ, ವೀಣಾ ಹಾಸನ, ಜಯಮ್ಮ ಮೂಡಿಗೆರೆ ಇತರರಿದ್ದರು.