ಖರ್ಗೆಯವರಿಗೆ ಮೋಸವಾಗಿದೆ, ಮೋಸ ಎದುರಿಸಬೇಕಾದ ಸಂದರ್ಭ ಬಂದಿದೆ; ಜಿ.ಪರಮೇಶ್ವರ ವ್ಯಾಖ್ಯಾನ

parameshwar
Published on

ಬೆಂಗಳೂರು: ಸಮುದಾಯದ ಬಸವಲಿಂಗಪ್ಪ, ರಂಗನಾಥ್, ಬಿ.ರಾಚಯ್ಯ, ಮಂಜುನಾಥ್, ಬಿ.ಎನ್.ನರಸಿಂಹಮೂರ್ತಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೋಸ ಆಗಿದೆ. ಈ ಮೋಸವನ್ನು ಎದುರಿಸಬೇಕಾದ ಸಂದರ್ಭ ಬಂದಿದೆ. ಸಮುದಾಯದ ಸಹೋದರರು ಒಗ್ಗೂಡಬೇಕು ಎಂದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.

ಹುಟ್ಟುಹಬ್ಬದ ಪ್ರಯುಕ್ತ ಸದಾಶಿವನಗರದ ನಾಗಸೇನ ಬುದ್ಧ ವಿಹಾರಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ ಬಳಿಕ ಅಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾಪುರುಷ ಅಂಬೇಡ್ಕರ್ ಅವರ ಋಣ ತೀರಿಸುವ ಅವಕಾಶ ಕೂಡಿ ಬಂದಿದ್ದು, ಎಲ್ಲರು ಒಗ್ಗೂಡಬೇಕು ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹುಟ್ಟದೇ ಹೋಗಿದ್ದರೆ ನಾವೆಲ್ಲ ಗುಲಾಮಗಿರಿಯಲ್ಲಿ ಇರಬೇಕಾಗಿತ್ತು. ಮಹಾಪುರುಷನ ಋಣ ತೀರಿಸುವ ಕೆಲಸ ಆಗಬೇಕಿದೆ ಎಂದ ಅವರು ಪರಮೇಶ್ವರ ಹುಟ್ಟುಹಬ್ಬ ನೆಪ ಮಾತ್ರ. ಅಂಬೇಡ್ಕರ್ ಅವರ ಋಣ ತೀರಿಸುವುದು ಮುಖ್ಯ ಕೆಲಸವಾಗಬೇಕು. ಮುಂದಿನ ದಿನಗಳಲ್ಲಿ ಕರೆಯನ್ನು ಕೊಟ್ಟಾಗ, ಹೋರಾಟಕ್ಕೆ ಕರೆದಾಗ ಎಲ್ಲರು ತಯಾರಾಗಿರಬೇಕು ಎಂದು ಹೇಳಿದರು.

ವಿಧಾನಸಭಾ ಚುನಾವಣೆ ವೇಳೆ ಸಮುದಾಯದ ಸಮಾವೇಶ ನಡೆಯಿತು, ಜನ ಒಟ್ಟಾಗಿದ್ದರಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಸಹಾಯವಾಯಿತು. ಅಂತಹದ್ದೆ ಸಮಾವೇಶವನ್ನು ಒನಕೆ ಓಬವ್ವ ಅವರ ಹೆಸರಿನಲ್ಲಿ ನವೆಂಬರ್ ನಡೆಸಲು ತೀರ್ಮಾನಿಸಲಾಗಿದೆ. ಆಕೆ ತೋರಿದ ಧೈರ್ಯ, ಛಲವನ್ನು ನಾವು ಮುಂದಿನ ದಿನದಲ್ಲಿ ತೋರಿಸಬೇಕಿದೆ. ದಾವಣಗೆರೆ, ಚಿತ್ರದುರ್ಗದಲ್ಲಿ ಆಯೋಜಿಸುವುದೋ ಅನ್ನುವುದನ್ನು ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇವೆ. ಶೌರ್ಯದಿಂದ ಮುಂದಿನ ಹಾದಿಯನ್ನು ಸಾಗಿಸಬೇಕು ಎಂದರು.

ಸಮಾಜದಲ್ಲಿ ಮೇಲು- ಕೀಳು, ಬಡವ- ಬಲ್ಲಿದ, ನೋವುಗಳಿರಬಾರದು. ಇಂತಹ ಸಮಾಜದ ನಿರ್ಮಾಣದ ಕನಸನ್ನು ಅಂಬೇಡ್ಕರ್ ಕಂಡಿದ್ದರು. ಬೇರೆ ಯಾವ ದಾರಿಯು ಅಂಬೇಡ್ಕರ್ ಅವರಿಗೆ ಕಾಣಿಸಲಿಲ್ಲ. ಅಂತಹ ಸಂದರ್ಭದಲ್ಲಿ ಬುದ್ಧನ ತತ್ವಗಳ ಮೊರೆ ಹೋದರು. ನಾವೆಲ್ಲ ಪ್ರತಿಯೊಂದು ದಿವಸ ಅಂಬೇಡ್ಕರ್ ಅವರನ್ನು ನೆನಸಬೇಕಿದೆ ಎಂದು ಹೇಳಿದರು.

ಬೆಂಗಳೂರಿನ ಸದಾಶಿವ ನಗರದಲ್ಲಿರುವ ಗೃಹಕಚೇರಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಡಾ.ಆನಂದಕುಮಾರ್ ಅಭಿಮಾನಿ ಬಳಗದಿಂದ ಪರಮೇಶ್ವರ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಆನಂದ ಕುಮಾರ್, ಪರಮೇಶ್ವರ ಅವರಿಗೆ ರಾಜಕೀಯದಲ್ಲಿ ಮತ್ತಷ್ಟು ಉನ್ನತ ಸ್ಥಾನಮಾನಗಳು ದೊರೆಯಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net