ವಾಂತಿಯ ಶಾಂತಿಯಿಂದ ದೇಹಮನ ಶಾಂತಿ

ha
Published on
d
 ಅನೇಕ ಜನರಿಗೆ ದೂರ ಪ್ರಯಾಣದ ಸಂದರ್ಭದಲ್ಲಿ ವಾಂತಿಯಾಗುವುದಿದೆ. ಕೆಲವರಿಗೆ ವಾಹನ ಹತ್ತಿದರೇ ವಾಂತಿ ಆರಂಭವಾಗಿ ಬಿಡುತ್ತದೆ. ಮನಸ್ಸಿಗೆ ಅಹಿತಕರವಾದ ವಾತಾವರಣ, ಸನ್ನಿವೇಶಗಳಿದ್ದಲ್ಲಿ ಹೀಗಾಗುತ್ತದೆ ಎಂದಿರುವ ಆಯುರ್ವೆದವು ಇದನ್ನು ಅಸಾತ್ಮ್ಯಜ ಛರ್ದಿ ಎಂದಿದೆ. ಐದು ವಿಧಗಳಲ್ಲಿ ವಾಂತಿಯನ್ನು ವಿಭಜಿಸಿ ವಿವರಿಸಿರುವ ಆಯುರ್ವೆದವು ಪ್ರತಿಯೊಂದಕ್ಕೂ ಹಲವಾರು ಕಾರಣಗಳನ್ನು ನೀಡಿದೆ. ವಾತಜ ವಾಂತಿ : ಮಿತಿಮೀರಿದ ವ್ಯಾಯಾಮ, ತೀಕ್ಷ್ಣ ಔಷಧಿಗಳ ಸೇವನೆ, ಚಿಂತೆ, ರೋಗದ ಭಯ, ಉಪವಾಸಗಳಿಂದ ಅತಿಕ್ಷೀಣವಾದ ದೇಹವನ್ನು ಹೊಂದಿರುವ ವ್ಯಕ್ತಿಯಲ್ಲಿ ವಾತಜ ವಾಂತಿಯು ಉಂಟಾಗುತ್ತದೆ. ಹೃದಯ ಹಾಗೂ ಪಕ್ಕೆಗಳಲ್ಲಿ ಪೀಡನೆ, ಬಾಯಿ ಒಣಗುವುದು, ತಲೆನೋವು, ಹೊಕ್ಕಳಿನ ಸುತ್ತಲೂ ನೋವು, ಕೆಮ್ಮು, ಒಡೆದ ಸ್ವರ, ಚರ್ಮ ಚುಚ್ಚಿದ ಅನುಭವವಾಗುತ್ತದೆ. ದೊಡ್ಡದಾದ ತೇಗಿನ ಶಬ್ದದೊಂದಿಗೆ ನೊರೆಯಿಂದ ಕೂಡಿ ಚದುರಿದಂತೆ ವಾಂತಿಯಾಗುತ್ತದೆ.

ವಾಂತಿಯ ದ್ರವ್ಯವು ತೆಳುವಾಗಿದ್ದು ಕಡುಬಣ್ಣ ಹೊಂದಿ ಸ್ವಲ್ಪವೇ ಪ್ರಮಾಣದಲ್ಲಿ ಹಾಗೂ ಪ್ರಬಲವಾದ ವೇಗದೊಂದಿಗೆ ಕಷ್ಟಕರವಾಗಿ ಹೊರಬರುವುದರಿಂದ ದುಃಖವನ್ನುಂಟು ಮಾಡುತ್ತದೆ. ದಾಳಿಂಬೆಹಣ್ಣಿನ ರಸ, ಹುರುಳಿ ಕಷಾಯ, ಶುಂಠಿ ಪಾನಕ, ಕೊತ್ತಂಬರಿ ಬೀಜದ ಕಷಾಯಗಳು ಹಿತಕಾರಿಯಾಗಿವೆ.

ಪಿತ್ತಜ ವಾಂತಿ: ಅಜೀರ್ಣವನ್ನು ಉಂಟುಮಾಡುವ ಆಹಾರ, ಖಾರ, ಹುಳಿ, ಹೊಟ್ಟೆಯಲ್ಲಿ ಉರಿ ಹೆಚ್ಚಿಸುವ, ತುಂಬಬಿಸಿಯಾದ ಅನ್ನಪಾನಾದಿಗಳ ಅತಿಸೇವನೆಯಿಂದ ಜಠರದಲ್ಲಿ ಪಿತ್ತವು ವೃದ್ಧಿಗೊಂಡು ಪಿತ್ತಜ ವಾಂತಿಯಾಗುತ್ತದೆ. ಮೂರ್ಛೆ ಹೋಗುವುದು, ಬಾಯಾರಿಕೆ, ಬಾಯಿ ಒಣಗುವುದು, ತಲೆಉರಿ, ನಾಲಿಗೆಯ ಮೇಲ್ಭಾಗದ ಅಂಗಳುವಿನಲ್ಲಿ ಉರಿ, ಕಣ್ಣು ಉರಿ, ತಲೆ ತಿರುಗುವುದು, ಕಣ್ಣುಕತ್ತಲು ಬರುವುದು ಕಾಣಿಸಿಕೊಳ್ಳುತ್ತದೆ. ವಾಂತಿಗೊಂಡ ದ್ರವ್ಯವು ಹಸಿರು, ಹಳದಿ ಅಥವಾ ಹೊಗೆಯ ಬಣ್ಣ, ಕಹಿಯಾಗಿದು ಉರಿ ಉಂಟುಮಾಡುತ್ತದೆ. ದ್ರಾಕ್ಷಿಹಣ್ಣು, ಕಬ್ಬಿನಹಾಲು, ಎಳನೀರು, ದಾಳಿಂಬೆರಸ, ಖರ್ಜೂರ ಹಾಗೂ ಜೇನುತುಪ್ಪಗಳು ಮುದ ನೀಡುತ್ತವೆ.

ಕಫಜ ವಾಂತಿ : ಹೆಚ್ಚಿನ ಪ್ರಮಾಣದಲ್ಲಿ ಜಿಡ್ಡು ಪದಾರ್ಥ ಸೇವನೆ, ಜೀರ್ಣಕ್ಕೆ ತುಂಬಾ ಕಷ್ಟಕರವಾದ ಆಹಾರಗಳು, ಚೆನ್ನಾಗಿ ಬೇಯಿಸದ ಆಹಾರ, ಹೊಟ್ಟೆಯಲ್ಲಿ ಉರಿಯುಂಟು ಮಾಡುವ ಆಹಾರ, ಅತಿಯಾದ ನಿದ್ರೆ ಇತ್ಯಾದಿಗಳಿಂದ ಉಲ್ಬಣಗೊಂಡ ಕಫದಿಂದಾಗುವುದು ಕಫಜ ವಾಂತಿ. ಇದರಿಂದಾಗಿ ತೂಕಡಿಕೆ, ಬಾಯಿಯಲ್ಲಿ ಸಿಹಿರಸದ ಅನುಭವ, ಅತಿಯಾದ ಲಾಲಾಸ್ರಾವ, ಜಡತ್ವ, ನಿದ್ರೆ, ಬಾಯಿರುಚಿ ಇಲ್ಲದಿರುವುದು, ದೇಹವು ಭಾರವಾದ ಭಾವನೆಯುಂಟಾಗುತ್ತದೆ. ರೋಮಗಳು ನಿಗುರಿ ಅಲ್ಪವೇದನೆಯೊಂದಿಗೆ ವಾಂತಿಯಾಗುತ್ತದೆ. ವಾಂತಿದ್ರವ್ಯವು ಬಿಳಿಬಣ್ಣದ ಜಿಡ್ಡು, ಘನಅಂಶಗಳಿಂದ ಕೂಡಿರುತ್ತದೆ. ಹಳೆಯ ಅಕ್ಕಿ, ಬಾರ್ಲಿ ಹಾಗೂ ಗೋಧಿ, ಮಜ್ಜಿಗೆ, ನಿಂಬೆಹಣ್ಣಿನ ರಸ, ಬೇಲದಹಣ್ಣು, ಹಿಪ್ಪಲಿಗಳು ಪ್ರಯೋಜನಕಾರಿಯಾಗಿವೆ.

ಸನ್ನಿಪಾತಜ ವಾಂತಿ: ಜೀರ್ಣದ ತೊಂದರೆ ಇದ್ದಾಗಲೂ ಎಲ್ಲಾ ಆಹಾರ ಸೇವನೆ, ಋತುಮಾಸಗಳಲ್ಲಿ ಅಸಹಜ ಬದಲಾವಣೆಗಳು ಕಂಡುಬಂದಾಗ ಅದಕ್ಕೆ ತಕ್ಕುದಾಗಿ ಆಹಾರವನ್ನು ಯೋಜಿಸದೆ ಇರುವುದರಿಂದ ಸನ್ನಿಪಾತಜ ವಾಂತಿಯಾಗುತ್ತದೆ. ನೋವು, ಅಜೀರ್ಣ, ಉರಿ, ಬಾಯಾರಿಕೆ, ಉಸಿರಾಟದ ತೊಂದರೆ, ತೀವ್ರವಾಗಿ ಎಚ್ಚರ ತಪ್ಪುವುದು ಉಂಟಾಗುತ್ತದೆ. ವಾಂತಿದ್ರವ್ಯವು ಉಪ್ಪು, ಹುಳಿಯಾಗಿದ್ದು ರಕ್ತಯುಕ್ತವಾಗಿದ್ದು ನೀಲಬಣ್ಣ ಹೊಂದಿರುತ್ತದೆ.

ಆಗಂತುಜ ವಾಂತಿ : ಇದರಲ್ಲಿ ಐದು ವಿಧಗಳಿವೆ. ಬೀಭತ್ಸಜ ವಾಂತಿ: ಕೆಟ್ಟ ವಾಸನೆಯಿಂದ ಕೂಡಿದ, ಆಘ್ರಾಣಿಸಲು ಅಸಹ್ಯ ಭಾವನೆ ಉಂಟುಮಾಡುವವುಗಳಿಂದ ವಾಂತಿಯಾಗುತ್ತದೆ. ಹಣ್ಣುಗಳ ಸೇವನೆ, ಲೋಕಪ್ರಸಿದ್ಧರ ಕಥೆ ಶ್ರವಣ, ಮನಸ್ಸನ್ನು ಉತ್ಸಾಹಿಸುವ ನಡೆನುಡಿ ಸುಲಭ ಪರಿಹಾರಗಳಲ್ಲಿ ಸೇರಿವೆ.

ದ್ವೌ ಹೃದಜ ವಾಂತಿ: ಆರಂಭದ ಮೂರು ತಿಂಗಳಲ್ಲಿ ಗರ್ಭಿಣಿಯರಿಗೆ ಆಗುವ ಬೆಳಗಿನ ವಾಂತಿ. ಹಿತಾಹಾರವೇ ಇದನ್ನು ಸರಿಗೊಳಿಸುವುದು.

ಆಮಜ ವಾಂತಿ: ಸರಿಯಾಗಿ ಬೇಯಿಸಿ ಸಿದ್ಧಗೊಳಿಸದ ಹಾಗೂ ವಿಷಮಯ ಆಹಾರ ಸೇವನೆಯಿಂದಾಗುವ ವಾಂತಿ. ಶುದ್ಧ ಆಹಾರ, ನೀರಿಗೆ ಆದ್ಯತೆ ನೀಡಲೇಬೇಕು.

ಅಸಾತ್ಮ್ಯಜ ವಾಂತಿ: ಶರೀರಕ್ಕೆ ಒಗ್ಗದ ವಿರುದ್ಧಾಹರ ಸೇವನೆ. ಕ್ರಿಮಿಜ ವಾಂತಿ : ಹೊಟ್ಟೆಯ ಜಂತು ಹುಳಗಳು ಹಾಗೂ ಅನೇಕ ರೋಗಕಾರಕ ಸೂಕ್ಷ್ಮಾಣು ಜೀವಿಗಳು ತಂದೊಡ್ಡುವ ವಾಂತಿ.

ಪರಿಹಾರ, ಉಪಚಾರ : ವಿಭಿನ್ನ ತೀವ್ರ ವಾಂತಿಗಳಿಗೆ ವಮನ, ವಿರೇಚನ, ಲಂಘನವೂ ಸೇರಿದಂತೆ ಅನೇಕ ಔಷಧೋಪಚಾರಗಳನ್ನು ಹೇಳಲಾಗಿದೆ. ರೋಗಕಾರಣಗಳನ್ನು ತ್ಯಜಿಸುವುದು ವಾಂತಿಯನ್ನು ತಡೆಯುವ ಮೊದಲ ಹೆಜ್ಜೆ. ಹಳೆಯ ಅಕ್ಕಿ, ಗೋಧಿ, ಬಾರ್ಲಿ, ಹೆಸರು, ಹಸುವಿನ ಹಾಲು, ತುಪ್ಪ, ಎಳನೀರು, ದ್ರಾಕ್ಷಿ, ದಾಳಿಂಬೆ, ಕಿತ್ತಳೆ, ಲಿಂಬೆಹಣ್ಣು, ಹಣ್ಣಾಗಿರುವ ಮಾವು, ನೆಲ್ಲಿಕಾಯಿ, ಜೀರಿಗೆ, ಏಲಕ್ಕಿ, ಲವಂಗ, ಶುಂಠಿ, ಜೇನುತುಪ್ಪ ಇವೆಲ್ಲವೂ ಹಿತಕರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net