

ಬೆಂಗಳೂರು: ‘ನಿಷ್ಠಾವಂತ ಸೇವಕನಾಗಿ ಪಕ್ಷದ ವರ್ಚಸ್ಸು ಹೆಚ್ಚಿಸಿ, ಬಲ ತುಂಬುವುದೇ ನನ್ನ ಕೆಲಸ. ನಾನೇನು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ’ ಎಂಬರ್ಥದಲ್ಲಿ ಸಿಡಿಗುಂಡು ಸಿಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದೆಹಲಿ ನಾಯಕರು ಹೇಳಿದರೆ ಈಗಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲೂ ಸಿದ್ಧ ಎಂದಿದ್ದಾರೆ. ಅವರು ಈ ಮಾತು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುವ ಜತೆಗೆ ನಾನಾ ವ್ಯಾಖ್ಯಾನಗಳಿಗೂ ದಾರಿಮಾಡಿದೆ.
ನಾಡು ಕಂಡ ದಿಟ್ಟ, ಕೆಚ್ಚೆದೆಯ ನಾಯಕ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 39ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡಿದ್ದ ಮರುಕ್ಷಣವೇ ಬಿಎಸ್ವೈ ಕೆಚ್ಚೆದೆ ಪ್ರದರ್ಶಿಸಿರುವುದು ಕಾಕತಾಳೀಯವೇನಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಹೊರಬಿತ್ತು ನೋವು: ಆಡಳಿತದ ಚುಕ್ಕಾಣಿ ಹಿಡಿದಾಗಿನಿಂದಲೂ ನಡೆಯುತ್ತಿರುವ ಬೆಳವಣಿಗೆ, ಚಿತಾವಣೆ, ಮುಜುಗರ ತರುವ ಹೇಳಿಕೆಗಳಿಂದ ಬಿಎಸ್ವೈ ಉಂಡ ನೋವು ಇದೀಗ ಬೇಸರ ರೂಪದಲ್ಲಿ ಹೊರಬಿದ್ದಿದೆ. ಕಳೆದ ಬಾರಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಗಿಟ್ಟಿದವು, ಜನಾದೇಶ ದಕ್ಕಿದರೂ ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಅಧಿಕಾರ ತಪ್ಪಿತ್ತು. ಬಳಿಕ ಹೆಣೆದ ರಣತಂತ್ರಕ್ಕೆ ವರಿಷ್ಠರು ಒತ್ತಾಸೆಯಾಗಿ ನಿಂತಿದ್ದರಿಂದ ಬಿಜೆಪಿಗೆ ಮತ್ತೆ ಅಧಿಕಾರ ಒಲಿದು ಬಂತು.
ರಾಜಕೀಯ ಕ್ಷಿಪ್ರಕ್ರಾಂತಿ ಮೂಲಕ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಪತನಕ್ಕೆ ನಾಂದಿ ಹಾಡಿದ ಶಾಸಕರೆಲ್ಲ ಬಿಎಸ್ವೈ ನಾಯಕತ್ವದಲ್ಲಿ ವಿಶ್ವಾಸ ಇರಿಸಿದವರು. ಅವರು ಕೊಟ್ಟ ಮಾತು ಉಳಿಸಿಕೊಳ್ಳಬಲ್ಲರೆಂಬ ಅಚಲ ನಂಬಿಕೆಯಿಂದಲೇ ಇರುವ ಅಧಿಕಾರ ತ್ಯಜಿಸುವ ಸಾಹಸಕ್ಕೆ ಕೈಹಾಕಿದರು. ಉಪ ಚುನಾವಣೆಯಲ್ಲಿ ಗೆದ್ದು ಸ್ವಯಂಲಾಭದ ಜತೆಗೆ ಬಿಜೆಪಿ ಸರ್ಕಾರವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ಪಕ್ಷದ ಸಂಘಟನೆಯ ಒಟ್ಟೂ ಬಲ ಕ್ರೋಡೀಕರಿಸಿ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬೆವರಿಳಿಸಿದರೂ ಏನು ಫಲ ಸಿಕ್ಕಿತೆಂಬುದು ದೆಹಲಿ ವರಿಷ್ಠರಿಗೆ ಗೊತ್ತಿದೆ. ಆದರೆ ದಕ್ಷಿಣ ಭಾರತದಲ್ಲಿ ಮತ್ತೊಮ್ಮೆ ಕರ್ನಾಟಕದ ಮುಖೇನ ಬಿಜೆಪಿಗೆ ಅಧಿಕಾರದ ಬಾಗಿಲು ತೆರೆದಿದ್ದರೂ ಮುಚ್ಚುವ ಪ್ರಯತ್ನ ನಡೆದಿರುವುದು ಬಿಎಸ್ವೈ ಸಿಟ್ಟು ಭೋರ್ಗರೆತಕ್ಕೆ ಕಾರಣ ಎನ್ನುವುದು ಪಕ್ಷದ ಆಂತರಿಕ ವಿಶ್ಲೇಷಣೆ.
ಆತ್ಮಸ್ಥೈರ್ಯದ ಕಸರತ್ತು: ಬಿಎಸ್ವೈ ಮೈಕೊಡವಿಕೊಂಡು ಮೇಲೇಳುವುದಕ್ಕೂ ಮತ್ತೆ ಕೆಲವು ಬಲವಾದ ಕಾರಣಗಳಿವೆ. ನಂಬಿ ಪಕ್ಷಕ್ಕೆ ಬಂದವರಲ್ಲಿ ಆತ್ಮವಿಶ್ವಾಸ ತುಂಬುವುದು, ಅನವರತ ಬೆನ್ನಿಗೆ ನಿಂತ ವೀರಶೈವ-ಲಿಂಗಾಯತ ಸಮುದಾಯ, ಬೆಂಬಲಿಗರನ್ನು ಜತೆಗೆ ಇಟ್ಟುಕೊಳ್ಳುವುದು ಈ ಕಸರತ್ತಿನ ಭಾಗವೆಂದು ವಿಶ್ಲೇಷಿಸಲಾಗುತ್ತಿದೆ. ದೆಹಲಿ ವರಿಷ್ಠರು ಹೇಳಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂಬ ಬಿಎಸ್ವೈ ಹೇಳಿಕೆಯ ಪರಿಣಾಮದ ಆಳ, ಅಗಲ ಬಲ್ಲ ರಾಜ್ಯ ನಾಯಕರು ಹಾನಿ ನಿಯಂತ್ರಣಕ್ಕೆ ಮುಂದಾಗಿದ್ದು, ನಾಯಕತ್ವ ಬದಲಾವಣೆಯಿಲ್ಲ. ಯಾವುದೇ ಗೊಂದಲವಿಲ್ಲವೆಂಬ ಹೇಳಿಕೆ ಪುನರುಚ್ಚರಿಸಿ ಆತಂಕದ ಕಾರ್ವೇಡ ಸರಿಸಲು ಪ್ರಯತ್ನಿಸಿದ್ದಾರೆ.
ಸಿಎಂ ಯಡಿಯೂರಪ್ಪ ಕಾರ್ಯಕರ್ತರಿಗೆ ಆದರ್ಶವಾಗಿ ಹೇಳಿಕೆ ಕೊಟ್ಟಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಸಿಎಂ ಬದಲಾವಣೆಯಂತಹ ಚರ್ಚೆಗಳಿಲ್ಲ. ರಾಷ್ಟ್ರೀಯ ನಾಯಕರ ಮುಂದೆಯೂ ಈ ಪ್ರಸ್ತಾಪವಿಲ್ಲ. ಯಾವುದೇ ಗೊಂದಲ, ಅಪಸ್ವರಗಳಿಲ್ಲ.
| ನಳಿನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷ.
ಕೋವಿಡ್ ಸಮಯದಲ್ಲಿ ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಹೈಕಮಾಂಡ್ನಿಂದಲೂ ಅವರಿಗೆ ಯಾವುದೇ ರೀತಿಯ ಸೂಚನೆ ನೀಡಿಲ್ಲ. ಬಿಎಸ್ವೈ ಸಮರ್ಥರು, ಕ್ರಿಯಾಶೀಲವಾಗಿದ್ದಾರೆ.
| ಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಯಡಿಯೂರಪ್ಪ ಅವರನ್ನು ಸರ್ವಾನುಮತದಿಂದ ಸಿಎಂ ಆಗಿ ಆಯ್ಕೆ ಮಾಡಿದ್ದೇವೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಿದವರ ವಿರುದ್ಧ ಹೇಳಿಕೆ ಕೊಡಲ್ಲ.
| ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಬಿಎಸ್ವೈ ಬಹಿರಂಗವಾಗಿ ಗುಡುಗುವ ಮೂಲಕ ಆಡಳಿತ ಪಕ್ಷದಲ್ಲೊಂದು ಪ್ರತಿಪಕ್ಷ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಮುಖಂಡರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಧಿಕಾರ ವಹಿಸಿಕೊಂಡಾಗ ರಾಜ್ಯದಲ್ಲಿ ಭಾಗಶಃ ಅನಾವೃಷ್ಟಿ. ನಂತರದ ಎರಡು ವರ್ಷ ಪ್ರವಾಹ, ಅತಿವೃಷ್ಟಿಯ ಬಾಧೆ. ಈ ಮಧ್ಯೆ ಕರೊನಾ ಎಂಬ ಮಹಾಪೀಡೆ ಎರಡನೇ ವರ್ಷವೂ ನಾಡಿನ ಜೀವ ಹಿಂಡಿದೆ. ಸಂಕಷ್ಟ ಸಿಲುಕಿದವರ ಕಣ್ಣೀರೊರೆಸಲು ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯ ಸುತ್ತಿದ್ದಿದೆ. ಕರೊನಾ ಸೋಂಕು ಕಟ್ಟಿಹಾಕಲು ಬಿಡುವಿಲ್ಲದ ಕಾರ್ಯ, ನಿರಂತರ ಸಭೆಗಳ ಮೂಲಕ ಪರಿಸ್ಥಿತಿ ಮೇಲೆ ನಿಗಾ.