ತಂತ್ರಜ್ಞಾನದಿಂದ ಕಲಿಕೆಯ ಅವಕಾಶ ಹೆಚ್ಚು

kuvmpu vv
ಕುವೆಂಪು ವಿವಿಯಲ್ಲಿ ಏರ್ಪಡಿಸಿದ್ದ ಡಿಜಿಟಲ್ ಕ್ರಾಂತಿ-ಸ್ಮಾರ್ಟ್ ಲೈಬ್ರರಿಗಳ ನಿರ್ಮಾಣದ ಹಾದಿ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರೊ. ಟಿ.ಡಿ.ಕೆಂಪರಾಜು, ಪ್ರೊ. ತಾರಾನಾಥ್, ಪ್ರೊ. ಧರಣಿಕುಮಾರ್, ಪ್ರೊ. ಎಸ್.ಪದ್ಮಮ್ಮ ಭಾಗವಹಿಸಿದ್ದರು.
Published on

ಶಿವಮೊಗ್ಗ:ಭೌತಿಕ ಕಟ್ಟಡ ಮತ್ತು ಪುಸ್ತಕಗಳುಳ್ಳ ಗ್ರಂಥಾಲಯಗಳು ಇಂದು ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಂಡು ಬದಲಾಗಿವೆ. ವೈವಿಧ್ಯಮಯ ಕಲಿಕಾ ಅವಕಾಶಗಳನ್ನು ನೀಡುತ್ತಿದ್ದು, ಕಲಿಕಾ ಕೇಂದ್ರಗಳಾಗಿ ರೂಪುಗೊಂಡಿವೆ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ಟಿ.ಡಿ.ಕೆಂಪರಾಜು ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಹಾಗೂ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಪ್ರಾಧ್ಯಾಪಕ ಡಾ. ಬಿ.ಎಸ್.ಬಿರಾದಾರ್ ಗೌರವಾರ್ಥ ಶುಕ್ರವಾರ ಆಯೋಜಿಸಿದ್ದ ಡಿಜಿಟಲ್ ಕ್ರಾಂತಿ-ಸ್ಮಾರ್ಟ್ ಲೈಬ್ರರಿಗಳ ನಿರ್ಮಾಣದ ಹಾದಿ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶವದಲ್ಲಿ ಮಾತನಾಡಿದರು.
ಡಿಜಿಟಲ್ ತಂತ್ರಜ್ಞಾನವು ಸರ್ವತ್ರವಾಗಿದ್ದು, ಗ್ರಂಥಪಾಲಕರು ಮತ್ತು ಗ್ರಂಥಾಲಯಗಳು ಇವುಗಳನ್ನು ಅಳವಡಿಸಿಕೊಳ್ಳುವುದು, ಮುಂದುವರಿಯುವುದು ಅವಶ್ಯ. ಎಲ್ಲ ಕ್ಷೇತ್ರಗಳು ಸ್ಮಾರ್ಟ್ ಆಗುತ್ತಿವೆ. ಭಾರತದೆಲ್ಲೆಡೆ ಇಂದು ಸ್ಮಾರ್ಟ್ ಪದ ಮೊಳಗುತ್ತಿದೆ. ಹೀಗಾಗಿ ತಂತ್ರಜ್ಞಾನ ಅಳವಡಿಸಿಕೊಂಡ ಸ್ಮಾರ್ಟ್ ಗ್ರಂಥಾಲಯಗಳು ಅಸ್ತಿತ್ವಕ್ಕೆ ಬಂದಿವೆ ಎಂದರು.
ಡಿಜಿಟಲ್ ತಂತ್ರಜ್ಞಾನ, ಕ್ಲೌಡ್ ಕಂಪ್ಯೂಟಿಂಗ್‌ಗಳಿಂದಾಗಿ ಮಾಹಿತಿ ಬಳಕೆ, ಹಂಚಿಕೊಳ್ಳುವಿಕೆ, ಉಪಯುಕ್ತತೆ ವಿಧಾನಗಳು ಬದಲಾಗಿರುವುದನ್ನು ಕಾಣಬಹುದು. ಇದು ಗುಣಮಟ್ಟ ಮತ್ತು ವೃತ್ತಿಪರತೆಯನ್ನು ಹೆಚ್ಚಿಸುತ್ತಿದೆ. ಗ್ರಂಥಾಲಯ ಸೌಲಭ್ಯಗಳ ಬಳಕೆಯು ಇಂದು ಭೌಗೋಳಿಕ ಮಿತಿ ದಾಟಿದ್ದು ಹೆಚ್ಚು ಅಗ್ಗವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಾಸನ ವಿವಿ ಕುಲಪತಿ ಪ್ರೊ. ತಾರಾನಾಥ್ ಮಾತನಾಡಿ, ಗ್ರಂಥಾಲಯಗಳು ಡಿಜಿಟಲ್ ಬಳಕೆಗೆ ತೆರೆದುಕೊಂಡಿದ್ದು, ಪುಸ್ತಕದಾಚೆಗೆ ಬೇರೆ ಜಗತ್ತನ್ನು ಹೊಂದಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರಿಗೆ ಹೊಸ ಕಲಿಕೆಯ ಸುಲಭ ಹಾದಿಗಳನ್ನು ತೆರೆದಿಟ್ಟಿವೆ. ವಿಶೇಷ ಕಲಿಕೆಯ ಸ್ಥಾನಗಳಾಗಿವೆ ಎಂದು ತಿಳಿಸಿದರು. ಪ್ರಾಧ್ಯಾಪಕರಾದ ಪ್ರೊ. ಎಸ್.ಪದ್ಮಮ್ಮ, ಪ್ರೊ. ಧರಣಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net