

ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ
ಕೈಗಾರಿಕೆಗಳ ಸ್ಥಾಪನೆಗೆ ವಿರೋಧವಿಲ್ಲ. ಆದರೆ, ಕೈಗಾರಿಕೆಗಾಗಿ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಈ ಬಗ್ಗೆ ಸರ್ಕಾರ ಮರುಪರಿಶೀಲನೆ ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಆಗ್ರಹಿಸಿದರು. ತಾಲೂಕಿನ ಜಂಗಮ ಕೋಟೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೇಷ್ಮೆ ಬೆಳೆಗಾರರ ರೈತ ಉತ್ಪಾದಕರ ಕಂಪನಿಯ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಕೃಷಿಯಂತೆಯೆ ಕೈಗಾರಿಕೆಗಳು ಸಹ ಪ್ರಮುಖ ಪಾತ್ರ ವಹಿಸುತ್ತವೆ. ಕೈಗಾರಿಕೆಗಳ ಸ್ಥಾಪನೆ ಅಗತ್ಯವಿದೆ. ಆದರೆ ಫಲವತ್ತಾದ ಭೂಮಿಯಲ್ಲಿ ಕೈಗಾರಿಕೆಗಳ ಸ್ಥಾಪನೆ ಮಾಡಬೇಡಿ, ಬಂಜರು ಭೂಮಿ ಮತ್ತು ಕೃಷಿ ಯೋಗ್ಯವಲ್ಲದ ಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಿ ಎಂದು ಮನವಿ ಮಾಡಿದರು. ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿ ಸ್ವಾಧೀನಕ್ಕೆ ಮುಂದಾಗಿರುವ ಬಹುತೇಕ ಎಲ್ಲ ಭೂಮಿ ಫಲವತ್ತಾದ ಭೂಮಿಯಾಗಿದ್ದು, ಸರ್ಕಾರ ಈ ಭೂಮಿಯ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟು ಬೇರೆ ಕಡೆ ಜಾಗ ನೋಡಲಿ ಎಂದು ಕೋರಿದರು.
ಸಹಕಾರ ಸಂಘಗಳು ರೈತರ ಹಾಗೂ ಕೃಷಿಯ ಜೀವಾಳ, ಸಹಕಾರ ಕ್ಷೇತ್ರದಲ್ಲಿ ರಾಜಕೀಯ ನುಸುಳದಂತೆ ನೋಡಿಕೊಳ್ಳಬೇಕು, ಸಹಕಾರ ರಂಗವನ್ನು ಉಳಿಸಿದರೆ, ಅದು ರೈತರನ್ನು ಉಳಿಸಿ ಬೆಳೆಸುತ್ತದೆ. ಕಂಪನಿಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೆಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಭಕ್ತರಹಳ್ಳಿ ಚಿದಾನಂದಮೂರ್ತಿ, ರೈತರಿಗೆ ಅನುಕೂಲ ಮಾಡಿಕೊಡುವುದೇ ಕಂಪನಿಯ ಉದ್ದೇಶ. ಹೆಚ್ಚಿನ ರೈತರು ಕಂಪನಿಯಲ್ಲಿ ಶೇರುಗಳನ್ನು ಕಟ್ಟಿ, ಇಲ್ಲಿಯೆ ಹೆಚ್ಚು ಕೃಷಿ ಪರಿಕರಗಳು, ರಸಗೊಬ್ಬರಗಳನ್ನು ಖರೀದಿಸುವ ಮೂಲಕ ಕಂಪನಿಯನ್ನು ಆರ್ಥಿಕವಾಗಿ ಸದೃಢಗೊಳಿಸುವಂತೆ ಮನವಿ ಮಾಡಿದರು.
ಕಂಪನಿಯ ಮುಖ್ಯ ಕಾರ್ಯನಿರ್ವಹಣಾಕಾರಿ ಬಿ.ಆರ್.ಸುರೇಶ್ ಅವರು ಆಯವ್ಯಯದ ಲೆಕ್ಕ ಮಂಡಿಸಿ ಸಭೆಯಲ್ಲಿ ಅನುಮೋದನೆ ಪಡೆದುಕೊಂಡರು. ಕಂಪನಿಯಲ್ಲಿ ಹೆಚ್ಚು ಪರಿಕರಗಳನ್ನು ಖರೀದಿಸಿದ ಕಾಕಚೊಕ್ಕಂಡಹಳ್ಳಿಯ ರೈತ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ತಮ್ಮಣ್ಣ, ನಿರ್ದೇಶಕರಾದ ಎಚ್.ಎಂ. ಮಂಜುನಾಥಗೌಡ, ಎಸ್.ಜಿ. ನಾರಾಯಣಸ್ವಾಮಿ, ಜಯರಾಂ, ಕೆ.ಕುಮಾರ್, ಸರಿತಾ ಗಂಗಾಧರ್, ಮುರಳೀಧರ್, ಜಿ.ಸಿ.ಪ್ರಕಾಶ್, ಮುನಿರಾಜು, ಪ್ರಗತಿಪರ ರೈತರಾದ ಮುನಿರೆಡ್ಡಿ, ರಾಮಚಂದ್ರ, ದೇವರಾಜ್, ಲಕ್ಷ್ಮೀನಾರಾಯಣ್, ಸಿಬ್ಬಂದಿ ಸುರೇಶ್, ಸಂಧ್ಯ ಹಾಜರಿದ್ದರು.