

ಕಿರುವಾರ ಎಸ್.ಸುದರ್ಶನ್ ಕೋಲಾರ
ರಾಜ್ಯಮಟ್ಟದಲ್ಲಿ ವಕ್ಫ್ಗೆ ಆಸ್ತಿ ಬದಲಾವಣೆ ವಿಚಾರ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಜಿಲ್ಲೆಯಲ್ಲೂ ಈ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ರೈತರ ಜಮೀನು, ಮಠ-ಮಂದಿರ, ದೇವಾಲಯಗಳ ಆಸ್ತಿಯನ್ನು ವಕ್ಫ್ ಹೆಸರಿಗೆ ಬದಲಾವಣೆ ಮಾಡಲು ತೆರೆ ಮರೆಯಲ್ಲಿ ಕಸರತ್ತು ನಡೆಯುತ್ತಿದೆಯೇ ಎಂಬ ಸಂದೇಹಕ್ಕೆ ಪೂರಕ ಎಂಬಂತೆ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ವಕ್ಫ್ಗೆ ಸೇರಲಿದೆ ಎನ್ನಲಾದ ಆಸ್ತಿ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ.
ರಾಜ್ಯ ವಕ್ಫ್ ಮಂಡಳಿಯಿಂದ ಜಿಲ್ಲಾ ವಕ್ಫ್ ಕಚೇರಿಗೆ ಪತ್ರ ಬಂದ ಬೆನ್ನಲ್ಲೇ ತಾಲೂಕು ವ್ಯಾಪ್ತಿಯಲ್ಲಿನ ಹೋಬಳಿ ಕೇಂದ್ರ, ಪಂಚಾಯಿತಿ ಕೇಂದ್ರ ಹಾಗೂ ಗ್ರಾಮಗಳಲ್ಲಿನ ಆಸ್ತಿಗಳನ್ನು ಗುರುತು ಮಾಡಿದ್ದು, ಹಾಲಿ ಹೆಸರು, ಬದಲಾಗಬೇಕಾಗಿರುವ ಹೆಸರಿನ ಕಲಂಗೆ ತಕ್ಕಂತೆ ರಾಜಸ್ವ ನಿರೀಕ್ಷಕರು (ಆರ್ಐ) ಪಟ್ಟಿ ಸಿದ್ಧಪಡಿಸಿ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಈ ಪೈಕಿ ಮಾಲೂರು ತಾಲೂಕಿನ 65 ಕಡೆ ಹಾಗೂ ಕೋಲಾರ ತಾಲೂಕಿನ 112 ಕಡೆ ದೇವಾಲಯ, ರೈತರ ಆಸ್ತಿಗಳನ್ನು ವಕ್ಫ್ ಹೆಸರಿಗೆ ಖಾತೆ ಬದಲಾವಣೆ ಮಾಡುವ ಬಗ್ಗೆ ಪ್ರಸ್ತಾಪಿಸಿರುವುದು ವಿವಾದಕ್ಕೆ ಎಡೆಮಾಡಿದೆ.
* ಅಧಿಕಾರಿಗಳಿಂದ ಹಾರಿಕೆ ಉತ್ತರ
ಅಧಿಕಾರಿಗಳು ಸಿದ್ಧಪಡಿಸಿರುವ ಪಟ್ಟಿಯಲ್ಲಿ ಬಹುತೇಕ ರೈತರ ಹೆಸರುಗಳು, ಸರ್ವೇ ನಂಬರ್ಗಳು ಇವೆ. ಈ ವಿಚಾರದ ಬಗ್ಗೆ ಆರ್ಐ ಕೇಳಿದರೆ ಮೇಲಧಿಕಾರಿಗಳು ಸೂಚಿಸಿರುವ ಕೆಲಸ ಮಾಡಿದ್ದೇವೆ. ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ನುಣುಚಿಕೊಳ್ಳುತ್ತಾರೆ ಎಂದು ರೈತರು ಆರೋಪಿಸಿದ್ದಾರೆ. ಈ ಬೆಳವಣಿಗೆಯಿಂದ ಸಾರ್ವಜನಿಕರು ಜಮೀನು ಕಳೆದುಕೊಳ್ಳುವ ಭೀತಿಯಲ್ಲಿ ಸೈಬರ್ ಕೇಂದ್ರಗಳತ್ತ ದೌಡಾಯಿಸಿ ಪಹಣಿ ಪರಿಶೀಲಿಸಿಕೊಳ್ಳಲು ಮುಂದಾಗುತ್ತಿದ್ದಾರೆ.
* ಪಿತ್ರಾರ್ಜಿತ ಆಸ್ತಿ ಕೈ ತಪ್ಪುವ ಭೀತಿ
ಮಾಲೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಚಿಕ್ಕತಿರುಪತಿಯಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲ. ಆದರೂ ಗ್ರಾಮದ ಖಾಸಗಿ ಹಾಗೂ ಪಿತ್ರಾರ್ಜಿತ ಆಸ್ತಿಗಳ ಸರ್ವೇ ನಂಬರ್ಗಳಲ್ಲಿ ವಕ್ಫ್ ಹೆಸರನ್ನು ನಮೂದಿಸಲಾಗಿದೆ. ಅಂತೆಯೇ, ತಾಲೂಕು ವ್ಯಾಪ್ತಿಯಲ್ಲಿನ ವಕ್ಫ್ ಮಂಡಳಿಯ ಜಮೀನುಗಳನ್ನು ವಕ್ಫ್ ಹೆಸರಿಗೆ ಖಾತೆ ಬದಲಾವಣೆ ಮಾಡುವಂತೆ ಉಲ್ಲೇಖ (1)ರಲ್ಲಿ ಸ್ವೀಕೃತವಾದ ಪತ್ರದಂತೆ ಪರಿಶೀಲಿಸಿ ಸ್ವತ್ತುಗಳನ್ನು ಖಾತೆ ಮಾಡುವ ಬಗ್ಗೆ ರಾಜಸ್ವ ನೀರಿಕ್ಷಕರು ಸೆಪ್ಟೆಂಬರ್ನಲ್ಲಿ ವರದಿ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಇದರ ನಡುವೆ, ನಮೂದಿಸಲಾದ ಭೂಮಿ ಹಿಡುವಳಿ ಜಮೀನು ಆಗಿರುವುದರಿಂದ ಸದರಿ ಹಿಡುವಳಿದಾರರೇ ಅನುಭವದಲ್ಲಿದ್ದು, ಸಕ್ಷಮ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಿಕೊಂಡು ಖಾತೆ ಮಾಡಿಕೊಳ್ಳುವ ಬಗ್ಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಹಸೀಲ್ದಾರ್ ಬರೆದ ಪತ್ರವೊಂದು ವೈರಲ್ ಆಗಿದೆ.
* ಮಾಲೂರು ತಾಲೂಕಿನಲ್ಲಿ ಗುರುತಿಸಲಾದ ಭೂಮಿ
ತಾಲೂಕಿನ ಚಿಕ್ಕತಿರುಪತಿ, ಚಿಕ್ಕಇಗ್ಗಲೂರು, ನೆಲ್ಲಹಳ್ಳಿ, ಹುಳದೇನಹಳ್ಳಿ, ಮಾಕಾರಹಳ್ಳಿ, ತೊರಲಕ್ಕಿ, ಕೊಂಡಶೆಟ್ಟಿಹಳ್ಳಿ, ಮಾಸ್ತಿ, ಟೇಕಲ್, ಕೊಂಡನಹಳ್ಳಿ, ಯಲವುಗುಳಿ, ಮಾಲೂರು ಪಟ್ಟಣ, ಉಪ್ಪಾರಹಳ್ಳಿ, ಅಗರ, ತೊರಲಕ್ಕಿ, ಸೀತಹಳ್ಳಿ, ಯಶವಂತಪುರ, ಚೊಕ್ಕಂಡಹಳ್ಳಿ, ಚವ್ವೇನಹಳ್ಳಿ, ಅರಳೇರಿ, ಕುಡಿಯನೂರು ಗ್ರಾಮಗಳ ಹಲವು ಸರ್ವೇ ನಂಬರ್ಗಳನ್ನು ಗುರುತು ಮಾಡಲಾಗಿದೆ. ಈಗಾಗಲೆ ಕೆಲ ಪಹಣಿಗಳಲ್ಲಿ ವಕ್ಫ್ ಸ್ವತ್ತು, ಖಬರಸ್ತಾನ್ ಎಂದು ನಮೂದಿಸಿದ್ದು, ಸಾರ್ವಜನಿಕರು ನಾಡಕಚೇರಿ ಹಾಗೂ ತಹಸೀಲ್ದಾರ್ ಕಚೇರಿಗಳಿಗೆ ಅಲೆದಾಡುವಂತಾಗಿದೆ.
* ಕೋಲಾರ ತಾಲೂಕಿನ ಗುರುತಿಸಲಾದ ಭೂಮಿ
ಹೋಳೂರು ಹೋಬಳಿ ವ್ಯಾಪ್ತಿಯ ನುಕ್ಕನಹಳ್ಳಿ, ನಾಯನಹಳ್ಳಿ, ಹುತ್ತೂರು ವ್ಯಾಪ್ತಿಯ ಶಾಪೂರು, ನದಂಬಳಿ, ಸುಗಟೂರು ವ್ಯಾಪ್ತಿಯ ಕಿತ್ತಂಡೂರು, ಅಲೇರಿ, ವೇಮಗಲ್ ವ್ಯಾಪ್ತಿಯ ಕುರಗಲ್, ಹಾರ್ಜೇನಹಳ್ಳಿ, ವೇಮಗಲ್, ಚನ್ನಂಚರ, ಬೀಚಗಾನಹಳ್ಳಿ, ವಕ್ಕಲೇರಿ ವ್ಯಾಪ್ತಿಯ ಮುದುವತಿ, ತಲಗುಂದ, ದೊಡ್ಡಯೂರು, ಅರಾಭಿಕೊತ್ತೂರು. ಕಸಬಾ ವ್ಯಾಪ್ತಿಯ ಅಮೇಹಳ್ಳಿ ಕೊಳತಿಮ್ಮನಹಳ್ಳಿ, ಮಾರ್ಜೇನಹಳ್ಳಿ, ಸಂಗೋಂಡಹಳ್ಳಿ, ಖಾದ್ರಿಪುರ, ಕೊಂಡರಾಜನಹಳ್ಳಿ, ಸುಲ್ತಾನ್ ತಿಪ್ಪಸಂದ್ರ ಗ್ರಾಮಗಳಲ್ಲಿ ವಕ್ಫ್ಗೆ ಬದಲಾಯಿಸಬೇಕಾಗಿರುವ ಸರ್ವೇ ನಂಬರ್ಗಳನ್ನು ಗುರುತು ಮಾಡಲಾಗಿದೆ.
* ಮುಸ್ಲಿಂ ಕುಟುಂಬ ಇಲ್ಲದಿದ್ದರೂ ಜಾಗ ಗುರುತು
ಕೆಲ ಗ್ರಾಮಗಳಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲದಿದ್ದರೂ ವಕ್ಫ್ಗೆ ಆಸ್ತಿ ಬದಲಾಯಿಸಬೇಕಾಗಿರುವ ರೈತರ ಜಮೀನುಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಕ್ರಮ ಸಂಖ್ಯೆ, ಹೋಬಳಿ, ಗ್ರಾಮ, ವಿಸ್ತಿರ್ಣ, ಹಾಲಿ ಹೆಸರು, ಬದಲಾಗಬೇಕಾಗಿರುವ ಹೆಸರು ಹೀಗೆ ಕಲಂ ಪ್ರತಿಯಲ್ಲಿ, ಆಯಾ ಹೋಬಳಿಯ ಆರ್ಐ ಸೇರಿ ಇತರ ಅಧಿಕಾರಿಗಳು ತೆರೆ ಮರೆಯಲ್ಲಿ ಪಟ್ಟಿ ಸಿದ್ಧಪಡಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಕ್ಫ್ ವ್ಯಾಪ್ತಿಗೆ ಒಳಪಡುವ ಮಕಾನ್ ಇನಾಂ, ಈದ್ಗಾ, ಮಸೀದಿ, ಖಬರಸ್ತಾನ್ ಹೀಗೆ ಹಲವು ಹೆಸರುಗಳಿಗೆ ಬದಲಾವಣೆ ಮಾಡಲು ಸಿದ್ಧತೆ ನಡೆದಿದೆ.
ಬಾಕ್ಸ್...
* ಹೋರಾಟದ ಎಚ್ಚರಿಕೆ
ಪಿತ್ರಾರ್ಜಿತವಾಗಿ ಬಂದ ಜಮೀನು ದಾಖಲೆಗಳಲ್ಲಿ ವಕ್ಫ್ ಬೋರ್ಡ್ ಹಾಗೂ ಖಬರಸ್ತಾನ್ ಎಂಬ ಹೆಸರು ನಮೂದಿಸುತ್ತಿರುವುದು ಸರಿಯಲ್ಲ. ಇದೇ ರೀತಿ ಮುಂದುವರಿದರೆ ಸರ್ಕಾರದ ವಿರುದ್ಧ ಬೃಹತ್ ಹೋರಾಟ ಮಾಡಲಾಗುವುದು. ಈ ರೀತಿ ನಮೂದು ಮಾಡಿ ಆದೇಶಿಸಿದವರು ಯಾರು?. ಏಕೆ ಈ ರೀತಿ ದಾಖಲೆಗಳಲ್ಲಿ ವಕ್ಫ್ ಹೆಸರು ನಮೂದಿಸಿ ರೈತರನ್ನು ಕೆಣಕುತ್ತಿದ್ದಾರೆ. ತಪು$್ಪ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ನೊಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಟ್...
ವಕ್ಫ್ಗೆ ಜಮೀನುಗಳನ್ನು ಖಾತೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಒಂದೇ ಒಂದು ಇಂಚು ಸಹ ವರ್ಗಾವಣೆ ಮಾಡಿಲ್ಲ. ಗಮನಕ್ಕೆ ಬಂದಿದ್ದನ್ನು ಪರಿಶೀಲಿಸಿ ರದ್ದುಪಡಿಸಲಾಗಿದೆ. ವಕ್ಫ್ ಅಧಿಕಾರಿಗಳು ಪಟ್ಟಿಕೊಟ್ಟು ಜಾಗ ಬಿಡಿಸಿಕೊಡಲು ಮನವಿ ಮಾಡಿದ್ದರು. ಆದರೆ ಅದಕ್ಕೆ ಅವಕಾಶ ನೀಡಿಲ್ಲ.
-ಅಕ್ರಂಪಾಷಾ, ಡಿಸಿ, ಕೋಲಾರ
ಕೋಟ್...
ಕೋಲಾರ ತಾಲೂಕಿನಲ್ಲಿ ಯಾವುದೇ ಆಸ್ತಿಯನ್ನು ವಕ್ಫ್ಗೆ ಬದಲಾಯಿಸಲು ಪ್ರಸ್ತಾವನೆ ಬಂದಿಲ್ಲ. ಯಾವುದಾದರು ಪತ್ರ ಹರಿದಾಡುತ್ತಿದ್ದರೆ ಅದು ತಪ್ಪು ಮಾಹಿತಿ. ನಿಖರ ಮಾಹಿತಿ ನೀಡಿದರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.
- ಡಾ.ನಯನಾ, ತಹಶೀಲ್ದಾರ್, ಕೋಲಾರ