

ಬೆಂಗಳೂರು: ಸೈಕಲ್‌ನಲ್ಲಿ ಮುಂಜಾನೆ ಹಾಲು-ಪೇಪರ್ ಮಾರಾಟದ ಸೋಗಿನಲ್ಲಿ ಸುತ್ತಾಡಿಕೊಂಡು ಮನೆ ಎದುರು ನಿಲ್ಲಿಸುತ್ತಿದ್ದ ದುಬಾರಿ ಸೈಕಲ್‌ಗಳನ್ನು ಕಳವು ಮಾಡುತ್ತಿದ್ದ ಕಳ್ಳನನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಮಪುರದ ದಯಾನಂದನಗರ ನಿವಾಸಿ ಶೇಖರ್ (50) ಬಂಧಿತ. ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಮೇರೆಗೆ 5 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 19 ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ. ಮಲ್ಲೇಶ್ವರದಲ್ಲಿ ಅಕ್ಷತಾ ಎಂಬುವರ ಮನೆ ಎದುರು ನಿಲ್ಲಿಸಿದ್ದ 65 ಸಾವಿರ ರೂ. ಮೌಲ್ಯದ ಹೈಟೆಕ್ ಸೈಕಲ್ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಶೇಖರಪ್ಪ, ಸೈಕಲ್ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ. ಅದರಲ್ಲೂ ಹೈಟೆಕ್ ಸೈಕಲ್‌ಗಳನ್ನೇ ಟಾರ್ಗೆಟ್ ಮಾಡಿಕೊಂಡು ಕೃತ್ಯ ಎಸೆಗುತ್ತಿದ್ದ. ಮುಂಜಾನೆ ಸೈಕಲ್‌ನಲ್ಲಿ ಪೇಪರ್-ಹಾಲು ಮಾರಾಟದ ಸೋಗಿನಲ್ಲಿ ನಗರದ ವಿವಿಧೆಡೆ ರಸ್ತೆಗಳಲ್ಲಿ ಸುತ್ತಾಡುತ್ತಿದ್ದ. ಮನೆ ಎದುರು ನಿಲ್ಲಿಸಿರುವ ಹೈಟೆಕ್ ಸೈಕಲ್‌ಗಳನ್ನು ಗುರುತಿಸಿಕೊಂಡು ಬಳಿಕ ತನ್ನ ಹಳೇ ಸೈಕಲ್‌ನನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ, ಹೈಟೆಕ್ ಸೈಕಲ್‌ನ್ನು ತೆಗೆದುಕೊಂಡು ಹಾಲು-ಪೇಪರ್ ಮಾರಾಟಕ್ಕೆ ತೆರಳುವನಂತೆ ಸ್ಥಳದಿಂದ ಪರಾರಿಯಾಗುತ್ತಿದ್ದ.
ಮಲ್ಲೇಶ್ವರ, ಸದಾಶಿವನಗರ, ವಯ್ಯಲಿಕಾವಲ್, ಯಶವಂತಪುರ, ಶೇಷಾದ್ರಿಪುರ, ರಾಜಾಜಿನಗರದ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ 19 ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ. ಮಲ್ಲೇಶ್ವರ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳ ಸೈಕಲ್ ಕಳವು ಪ್ರಕರಣಗಳು ಪತ್ತೆಯಾಗಿದ್ದು, 17 ಸೈಕಲ್‌ಗಳ ವಾರಸುದಾರರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಕ್ಯೂರಿ ಗಾರ್ಡ್ ಸೋಗಿನಲ್ಲಿ ಮಾರಾಟ :
ಕದ್ದ ಸೈಕಲ್‌ಗಳನ್ನು ಶೇಖರಪ್ಪ ನಗರದ ಹೊರವಲಯದ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದ. ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದೇನೆ. ಪ್ಲಾೃಟ್‌ನಲ್ಲಿ ಇದ್ದವರುವಿದೇಶಕ್ಕೆ ತೆರಳಿದರು. ಅವರ ಬಳಿಯಿದ್ದ ಸೈಕಲ್‌ನ್ನು ನನಗೆ ಮಾರಾಟ ಮಾಡಿದ್ದಾರೆ. ನನಗೆ ತುರ್ತು ಹಣದ ಅಗತ್ಯ ಇರುವುದರಿಂದ ಮಾರಾಟ ಮಾಡುತ್ತಿರುವುದಾಗಿ ನಂಬಿಸುತ್ತಿದ್ದ. ದೊಡ್ಡಬಳ್ಳಾಪುರದಲ್ಲಿ ಇರುವ ಸಂಬಂಧಿಕರಿಗೂ ಕದ್ದ ಸೈಕಲ್‌ಗಳನ್ನು ಮಾರಾಟ ಮಾಡಿದ್ದ. ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಸೈಕಲ್‌ನಲ್ಲಿ ಸವಾರಿ ಮಾಡಿಕೊಂಡು ಹೋಗಿ ಮಾರಾಟ ಮಾಡಿದ್ದ.