ಸರ್ವಜ್ಞ ಸಾರ್ವಭೌಮ ಮಹರ್ಷಿ

ವಿಜಯವಾಣಿ (1)
Published on
ಜಗತ್ತಿನ ಉಳಿದ ರಾಷ್ಟ್ರಗಳಲ್ಲಿ ಹಲವು ವ್ಯಕ್ತಿಗಳಿಂದ ಹುಟ್ಟಿದ ಸಂಸ್ಕೃತಿ ಕೆಲವು ಶತಕಗಳ ಕಾಲ ಬದುಕಿ ನಾಶವಾದವು. ಆದರೆ ನಮ್ಮ ಭಾರತದ ಸಂಸ್ಕೃತಿ ಅಚ್ಚಳಿಯದೆ ಹಚ್ಚಹಸಿರಾಗಿ ಉಳಿಯಿತು. ಈ ಸಮೃದ್ಧ ಸಂಸ್ಕೃತಿಯ ಸಾಹಿತ್ಯವನ್ನು ಸೃಷ್ಟಿಸಿದ ಮೂಲಪುರುಷ ಭಗವಾನ್ ವೇದವ್ಯಾಸರು. ಅವರು ಸರ್ವಜ್ಞ ಸೌರ್ವಭೌಮ ಮಹರ್ಷಿ, ಮೇಧಾವಿ ಮನೀಷಿ. ಯಮುನಾ ನದಿಯಲ್ಲಿ ದೋಣಿ ನಡೆಸುತ್ತಿದ್ದ ಮೀನುಗಾರರ ಹುಡುಗಿ ಯೋಜನಗಂಧಿಯಲ್ಲಿ ಪರಾಶರ ಮಹರ್ಷಿಗಳಿಂದ ಜನಿಸಿದವರು ವೇದವ್ಯಾಸರು. ಎಂದೇ ಅವರಿಗೆ ಪಾರಾಶರ್ಯ ಎಂಬ ಹೆಸರೂ ಇದೆ. ಕೃಷ್ಣ ದ್ವೈಪಾಯನ, ಬಾದರಾಯಣ ಎಂಬ ಹೆಸರುಗಳೂ ಅವರಿಗಿವೆ.

ಕೃತಯುಗದಲ್ಲಿ ವಿಶಾಲವಾದ ಒಂದೇ ವೇದವಿತ್ತು. ಅದನ್ನು ಮಹಾವೇದವೆಂದು ಕರೆಯುತ್ತಿದ್ದರು. ಅದನ್ನು ಓದಲು, ಅರಿಯಲು ಅನುಕೂಲವಾಗುವಂತೆ ವ್ಯಾಸರು ವಿಂಗಡಿಸಿದರು. ಅಧಿಕಾರಿಗಳ ಯೋಗ್ಯತೆಗೆ ಅನುಗುಣವಾಗಿ ಆ ವೇದಗಳನ್ನು ಋಗ್ವೇದ, ಯಜುರ್ವೆದ, ಸಾಮವೇದ, ಅಥರ್ವಣ ವೇದವೆಂದು ನಾಲ್ಕು ಭಾಗವಾಗಿ ವಿಂಗಡಿಸಿ ಪರಿಷ್ಕರಿಸಿದ ಅವರು ವೇದವ್ಯಾಸರೆನಿಸಿದರು. ಅಪಾರ ವಾಙ್ಮಯ ನಿರ್ವಿುಸಿ ಅದನ್ನು ಸಾವಿರಾರು ಶಿಷ್ಯರಿಗೆ ಬೋಧಿಸಿ ಆ ಸಾಹಿತ್ಯ ಪರಂಪರೆ ಉಳಿಸಿದರು. ತಮ್ಮ ಶಿಷ್ಯರಲ್ಲಿ ಬುದ್ದಿವಂತರೆನಿಸಿದ ನಾಲ್ವರನ್ನು ಆಯ್ಕೆ ಮಾಡಿಕೊಂಡರು. ಪೈಲನನನ್ನು ಋಗ್ವೇದದಲ್ಲಿ, ವೈಶಂಪಾಯನನನ್ನು ಯಜುರ್ವೆದದಲ್ಲಿ, ಜೈಮಿನಿಯನ್ನು ಸಾಮವೇದದಲ್ಲಿ ಹಾಗೂ ಸುಮಂತನನ್ನು ಅಥರ್ವಣ ವೇದದಲ್ಲಿ ಪರಿಣಿತರನ್ನಾಗಿಸಿದರು. ರೋಮಹರ್ಷಣ ಮೊದಲಾದ ಶಿಷ್ಯರಿಗೂ ಈ ವೇದ ರಹಸ್ಯವನ್ನು ಬೋಧಿಸಿದರು. ವ್ಯಾಸರಿಗಿಂತ ಮೊದಲು ಅಪೌರುಷೇಯವಾದ (ಮನುಷ್ಯ ಕೃತವಲ್ಲದ) ವೇದ ರಾಶಿಯೇ ಇತ್ತು. ಆ ವೇದವಾಙ್ಮಯ ವನ್ನು ಆಧರಿಸಿಕೊಂಡೇ ಇಲ್ಲಿ ಆರ್ಯಸಂಸ್ಕೃತಿ ಬೆಳೆದುಕೊಂಡು ಬಂದಿತು. ವೇದವಾಙ್ಮಯವೆಂದರೆ ವಿಶ್ವದ ಜ್ಞಾನಕೋಶಗಳು ಎಂದರ್ಥ. ಇದರಲ್ಲಿ ಹೇಳದ ವಿಷಯವೇ ಇಲ್ಲ. ಸಾವಿರಾರು ಋಷಿಗಳು ತಮ್ಮ ತಪಸ್ಸು, ಅನುಭವಗಳಿಂದ ಕಂಡುಹಿಡಿದ ವಾಙ್ಮಯವೇ ವೇದಗಳು. ಇವುಗಳನ್ನು ವಿಂಗಡಿಸಿ ವಿಭಾಗಿಸಿದವರೇ ವೇದವ್ಯಾಸರು. ಇದೇ ಭಾರತೀಯ ಸಂಸ್ಕೃತಿಯ ಆಧಾರಶಿಲೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net