

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯದಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ತನಿಖೆ ವೇಳೆ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದರೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸರು ಸಮರಸಾರಿದ್ದಾರೆ.
ರಸ್ತೆ ಗುಂಡಿ, ಬೆಳಕಿನ ಕೊರತೆ, ಸೂಚನ ಲಕ ಇಲ್ಲದಿರುವುದು, ಅಪೂರ್ಣ ಕಾಮಗಾರಿ, ಬ್ಲ್ಯಾಕ್ ಸ್ಪಾಟ್ ಅಭಿವೃದ್ಧಿಪಡಿಸದೆ ನಿರ್ಲಕ್ಷ್ಯ ಸೇರಿದಂತೆ ರಸ್ತೆಯಲ್ಲಿ ಭೌತಿಕ ದೋಷದಿಂದ ಗಂಭೀರ ಅಪಘಾತ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ.
ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ತನಿಖಾಧಿಕಾರಿಗಳಿಗೆ ಅವಕಾಶ ಇದೆ. ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿಲ್ಲ. ರಸ್ತೆ ಅಪಘಾತ ಸಂಭವಿಸಿದಾಗ ದೊಡ್ಡ ವಾಹನ ಚಾಲಕನ ಅಥವಾ ಬದುಕಿ ಉಳಿದವನ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಮೃತನ ಕುಟುಂಬಕ್ಕೆ ಸಹಾಯಕ್ಕೆ ಪೊಲೀಸರು ನಿಲ್ಲುತ್ತಾರೆ. ರಸ್ತೆಯ ಭೌತಿಕ ದೋಷಕ್ಕೆ ಕಾರಣ ಆದವರ ವಿರುದ್ಧ ಕ್ರಮವಾಗುತ್ತಿಲ್ಲ. ಪರಿಣಾಮ ರಸ್ತೆ ಅಪಘಾತ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ರಾಜ್ಯದಲ್ಲಿ ಪ್ರತಿದಿನ ಅಂದಾಜು 30 ಗಂಭೀರ ಅಪಘಾತ ಸಂಭವಿಸುತ್ತಿದ್ದು, ಇಬ್ಬರಿಂದ ಮೂವರು ಪ್ರಾಣ ಕಳೆದುಕೊಳ್ಳುತ್ತಿದ್ದು, ಶೇ.50ರಷ್ಟು ಮಂದಿ 25 ರಿಂದ 60 ವರ್ಷ ವಯಸ್ಸಿನರು ಆಗಿದ್ದಾರೆ. ಈ ಕುಟುಂಬ ಅತಂತ್ರ ಸ್ಥಿತಿಗೆ ಜಾರುತ್ತಿವೆ. ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಮೇಲೂ ದುಷ್ಪರಿಣಾಮ ಬೀರುತ್ತದೆ. ಆದರಿಂದ ರಸ್ತೆ ಅಪಘಾತ ತಗ್ಗಿಸಲು ಮೋಟಾರು ವಾಹನ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ತರಲು ಎಲ್ಲ ಪೊಲೀಸ್ ಠಾಣೆಗಳಿಗೆ ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಕಟ್ಟಾಜ್ಞೆ ಮಾಡಿದ್ದಾರೆ.
ಗಂಭೀರ ಅಪಘಾತದಲ್ಲಿ ಸಾವು ಅಥವಾ ಹೆಚ್ಚಿನ ನೋವು ಸಂಭವಿಸಿದ ಪ್ರಕರಣದಲ್ಲಿ ಪೊಲೀಸರು ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಮತ್ತು ಎನ್‌ಎಚ್‌ಎಐ, ಪಿಡಬ್ಲೂೃಡಿ ಇಂಜಿನಿಯರ್ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು. ಅಪಘಾತಕ್ಕೆ ವಾಹನ ಚಾಲಕ/ಸವಾರ, ರಸ್ತೆ ವಿನ್ಯಾಸ ಅಥವಾ ವಾಹನದಲ್ಲಿನ ದೋಷದ ಬಗ್ಗೆ ವರದಿ ಸಿದ್ಧಪಡಿಸಬೇಕು. ಆದರೆ, ಹಲವೆಡೆ ಇದು ಕಟ್ಟುನಿಟ್ಟಾಗಿ ನಡೆಯುತ್ತಿಲ್ಲ. ಕೇವಲ ಅಪಘಾತಕ್ಕೆ ಕಾರಣರಾದ ವಾಹನದ ಮೇಲೆ ಕೇಸ್ ದಾಖಲಿಸಿ ಪೊಲೀಸರು ಸುಮ್ಮನಾಗುತ್ತಿದ್ದಾರೆ. ಇನ್ನೂ ಜಂಟಿಯಾಗಿ ಅಧಿಕಾರಿಗಳು ನೀಡುವ ವರದಿಯಲ್ಲಿ ಭೌತಿಕ ದೋಷದಿಂದ ಅಪಘಾತಕ್ಕೆ ಕಾರಣ ಎಂದು ಬಂದರೇ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಆರೋಪಪಟ್ಟಿ ಸಲ್ಲಿಸುವಂತೆ ಸೂಚನೆ ಕೊಡಲಾಗಿದೆ.
ಅಂದರೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದರೇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್‌ಎಐ), ರಾಜ್ಯ ಹೆದ್ದಾರಿಯಾದರೇ ಪಿಡಬ್ಲೂೃಡಿ ಮತ್ತು ಗ್ರಾಮ ರಸ್ತೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಇಂಜಿನಿಯರ್, ಅಧಿಕಾರಿ ಮತ್ತು ಮತ್ತು ಗುತ್ತಿಗೆದಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತಿದೆ. ಕಾನೂನು ಭಯದಿಂದ ಇಲಾಖೆಗಳು ರಸ್ತೆಗಳ ನಿರ್ವಹಣೆ, ಅಭಿವೃದ್ಧಿಯನ್ನು ಕಾಲಕಾಲಕ್ಕೆ ಸರಿಯಾಗಿ ನಡೆಸಲಿವೆ ಎಂದು ಪೊಲೀಸ್ ಇಲಾಖೆ ಅಭಿಪ್ರಾಯವಾಗಿದೆ.
ಅಭಿವೃದ್ಧಿ ಕಾರಣದ ಬ್ಲ್ಯಾಕ್ ಸ್ಪಾಟ್‌ಗಳು
3 ವರ್ಷಗಳ ಅವಧಿಯಲ್ಲಿ ಒಂದೇ ಸ್ಥಳದಲ್ಲಿ 5 ಅಘಾತ ಸಂಭವಿಸಿ 10 ಮಂದಿ ಸಾವನ್ನಪ್ಪಿದರೆ ಅಂತಹ ಸ್ಥಳವನ್ನು ಬ್ಲ್ಯಾಕ್ ಸ್ಪಾಟ್ ಎಂದು ಗುರುತಿಸಿ ಅದರ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆಗೆ ವರದಿ ಸಲ್ಲಿಸಲಾಗುತ್ತದೆ. 2016-18ರಲ್ಲಿ ಗುರುತಿಸಿರುವ ಬ್ಲ್ಯಾಕ್ ಸ್ಪಾಟ್‌ಗಳ ಅಭಿವೃದ್ಧಿ ಆಗಿಲ್ಲ. ಇದಾದ ಮೇಲೆ 2018-21ನೇ ಸಾಲಿನ ವರದಿ ಸಹ ಸಲ್ಲಿಸಲಾಗಿದೆ. ಇದೀಗ 8 ತಿಂಗಳು ಕಳೆದರೇ 2021-24ನೇ ಸಾಲಿನ ಬ್ಲ್ಯಾಕ್ ಸ್ಪಾಟ್ ವರದಿ ನೀಡಲು ಪೊಲೀಸ್ ಇಲಾಖೆ ಸಿದ್ದತೆ ನಡೆಸುತ್ತಿದೆ.
ಇಲ್ಲಿಯವರೆಗೂ ಸಲ್ಲಿಸಿರುವ ಬ್ಲ್ಯಾಕ್ ಸ್ಪಾಟ್‌ಗಳನ್ನು ಪರಿಶೀಲನೆ ನಡೆಸಿ ಅಭಿವೃದ್ಧೆಯಾಗದೆ ಹಾಗೇ ಉಳಿದಿದ್ದರೇ ಸಂಬಂಧಪಟ್ಟ ಅಧಿಕಾರಿಗಳಿಗೆ ಇಲಾಖಾ ತನಿಖೆಯಡಿ ನೋಟಿಸ್ ಕೊಟ್ಟು ಹೇಳಿಕೆ ಪಡೆದು ಕಾನೂನು ಕ್ರಮ ತೆಗೆದುಕೊಳ್ಳುತ್ತಿದೆ. ಬ್ಲ್ಯಾಕ್ ಸ್ಪಾಟ್‌ಗಳಲ್ಲೇ ಅಪಘಾತ ಸಂಭವಿಸಿದರೇ ಎಫ್ಐಆರ್ ದಾಖಲಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಲಾಗುತ್ತಿದೆ.
ದಿನಕ್ಕೆ 121 ಅಪಘಾತ, 31 ಸಾವು
ರಾಜ್ಯದಲ್ಲಿ ಪ್ರತಿದಿನ ಸರಾಸರಿ 30ಗಂಭೀರ ಅಪಘಾತ ಮತ್ತು 91 ಗಂಭೀರವಲ್ಲದ ಅಪಘಾತ ಸಂಭವಿ 31 ಜನ ಪ್ರಾಣ ಕಳೆದುಕೊಂಡರೇ 146 ಮಂದಿ ಗಾಯಗೊಳ್ಳುತ್ತಿದ್ದಾರೆ. ಜೂನ್‌ನಲ್ಲಿ 899 ಗಂಭೀರ ಅಪಘಾತ ಸಂಭವಿಸಿ 984 ಮಂದಿ ಮೃತಪಟ್ಟಿದ್ದು,2727 ಗಂಭೀರವಲ್ಲದ ಆಕ್ಸಿಡೆಂಟ್‌ನಲ್ಲಿ 4407 ಮಂದಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ 288 ಗಂಭೀರ ಅಪಘಾತ ಜರುಗಿದ್ದು, 347 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ 261 ಗಂಭೀರ ಅಪಘಾತಕ್ಕೆ 280 ಮೃತಪಟ್ಟಿದ್ದಾರೆ. ಇನ್ನೂ ಇತರೆ ರಸ್ತೆಗಳಲ್ಲಿ 350 ಅಪಘಾತದಲ್ಲಿ 357 ಮಂದಿ ಅಸುನೀಗಿದ್ದಾರೆ ಎಂದು ಪೊಲೀಸ್ ಇಲಾಖೆ ಅಂಕಿಅಂಶದಿಂದ ತಿಳಿದುಬಂದಿದೆ.
5 ವರ್ಷ ಕಳೆದರೂ ತಡೆಗೋಡೆ ಇಲ್ಲ :
2018ರ ನ.24ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದಲ್ಲಿ ವಿಸಿ ನಾಲೆಗೆ ಖಾಸಗಿ ಬಸ್ ಉರುಳಿ 25 ಪ್ರಯಾಣಿಕರು ಮೃತಪಟ್ಟಿದ್ದರು. ನಾಲೆಗೆ ತಡೆಗೋಡೆ ಇಲ್ಲದೆ ಇರುವುದಕ್ಕೆ ಅಪಘಾತಕ್ಕೆ ಕಾರಣವೆಂದು ವರದಿ ಸಲ್ಲಿಸಲಾಗಿತ್ತು. ಇಲ್ಲಿಯವರೆಗೂ ತಡೆಗೋಡೆ ನಿರ್ಮಾಣವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗೆ ನೋಟಿಸ್ ಕೊಡಲು ಪೊಲೀಸ್ ಇಲಾಖೆ ಸಿದ್ದತೆ ನಡೆಸಿದೆ.
ರಸ್ತೆ ಅಪಘಾತಕ್ಕೆ ಚಾಲಕ, ಸವಾರರೇ ಕಾರಣರಲ್ಲ. ರಸ್ತೆಯ ಭೌತಿಕ ದೋಷಗಳಿಂದಲೂ ಆಕ್ಸಿಡೆಂಟ್ ಸಂಭವಿಸುತ್ತಿವೆ. ತನಿಖೆ ವೇಳೆ ಅಧಿಕಾರಿಗಳ ಲೋಪ ಕಂಡುಬಂದರೇ ಅವರ ವಿರುದ್ಧ ಎ್ಐಆರ್ ದಾಖಲಿಸಿ ಕೋರ್ಟ್ ಆರೋಪಪಟ್ಟಿ ಸಲ್ಲಿಸಲಾಗುತ್ತದೆ.
ಅಲೋಕ್ ಕುಮಾರ್- ಎಡಿಜಿಪಿ ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ