ಒಬಿಸಿ ಪಟ್ಟಿ ಮತ್ತೆ ರಾಜ್ಯಗಳ ಸುಪರ್ದಿಗೆ

parliment
Published on

ನವದೆಹಲಿ: ಇತರೆ ಹಿಂದುಳಿದ ವರ್ಗಗಳನ್ನು (ಒಬಿಸಿ) ಗುರುತಿಸಿ ಪಟ್ಟಿಗೆ ಸೇರಿಸುವ ಹೊಣೆಗಾರಿಕೆಯನ್ನು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರುವ ಮಸೂದೆ ಮಂಡಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಮೀಸಲು ಒದಗಿಸುವ ರಾಜ್ಯಗಳ ಅಧಿಕಾರ 102ನೇ ಸಂವಿಧಾನ ತಿದ್ದುಪಡಿ 2018ರಲ್ಲಿ ಮಂಡನೆಯಾದಾಗ ರದ್ದಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ಮೇ 5ರಂದು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಿದ್ದುಪಡಿ ತರಲು ಮುಂದಾಗಿದೆ. 102ನೇ ತಿದ್ದುಪಡಿ ವೇಳೆ ಅನುಚ್ಛೇದ 342ಬಿ ಯನ್ನು ಸೇರ್ಪಡೆಗೊಳಿಸಲಾಗಿತ್ತು. ಇದರಲ್ಲಿ ರಾಜ್ಯಗಳ ಬಳಿ ಇದ್ದ ಅಧಿಕಾರ ನ್ಯಾಷನಲ್ ಕಮಿಷನ್ ಫಾರ್ ಬ್ಯಾಕ್ವರ್ಡ್ ಕ್ಲಾಸಸ್​ಗೆ ವರ್ಗಾವಣೆಯಾಗಿತ್ತು. ಇದಕ್ಕೆ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಮರಾಠ ಕೋಟ ಕಲ್ಪಿಸುವ ಮಸೂದೆಯನ್ನು ಅಂಗೀಕ ರಿಸಿತ್ತಾದರೂ, ಸುಪ್ರೀಂ ಕೋರ್ಟ್​ನ ಪಂಚ ಸದಸ್ಯ ಸಾಂವಿಧಾನಿಕ ಪೀಠ ಅದನ್ನು 1992ರ ಮಂಡಲ್ ತೀರ್ಪಿಗೆ ಅನುಗುಣವಾಗಿ ರದ್ದುಗೊಳಿಸಿತ್ತು.

ತ್ವರಿತಗತಿ ಕೋರ್ಟ್ ಮುಂದುವರಿಕೆ: ದೇಶದಲ್ಲಿರುವ 1,023 ತ್ವರಿತಗತಿಯ ವಿಶೇಷ ಕೋರ್ಟ್​ಗಳನ್ನು ಮುಂದು ವರಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟ ಅನುಮೋದಿಸಿದೆ. ಇದರಲ್ಲಿ 389 ವಿಶೇಷ ಪೋಕ್ಸೊ ಕೋರ್ಟ್ ಗಳೂ ಸೇರಿಕೊಂಡಿವೆ. ಇದರೊಂದಿಗೆ ಇವುಗಳ ಕಾಲಾವಧಿ ಇನ್ನೆರಡು ವರ್ಷಕ್ಕೆ ವಿಸ್ತರಣೆಯಾಗಿದೆ ಎಂದು ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. 31 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ 28ರಲ್ಲಿ ತ್ವರಿತಗತಿಯ ವಿಶೇಷ ಕೋರ್ಟ್ ಕಲಾಪ ನಡೆಸುತ್ತಿದೆ.

ಸಮಗ್ರ ಶಿಕ್ಷಣ 5 ವರ್ಷಕ್ಕೆ ವಿಸ್ತರಣೆ

ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ‘ಸಮಗ್ರ ಶಿಕ್ಷಣ ಯೋಜನೆ’ಯನ್ನು ಇನ್ನೂ 5 ವರ್ಷ ಮುಂದುವರಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ. 2026ರ ಮಾರ್ಚ್ 31ರ ತನಕ ಇದು ಮುಂದುವರಿಯಲಿದೆ. ಈ ಯೋಜನೆಯನ್ನು ‘ಸಮಗ್ರ ಶಿಕ್ಷಣ ಯೋಜನೆ 2’ ಎಂದು ಗುರುತಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net