

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ದಿನೇದಿನೆ ವ್ಯಾಪಕವಾಗಿ ಹರಡುತ್ತಿರುವ ನಡುವೆಯೂ ರಾಜ್ಯದಲ್ಲಿ ಮೊದಲು ಕರೊನಾ ಸೋಂಕು ತಗುಲಿದ್ದ ದಂಪತಿ ಹಾಗೂ ಹೆಣ್ಣು ಮಗುವಿನ ಆರೋಗ್ಯ ಸುಧಾರಿಸಿರುವುದು ಕೊಂಚ ಸಮಾಧಾನ ತಂದಿದೆ.
ಸೋಂಕು ತಗುಲಿರುವವರನ್ನೆಲ್ಲ ರಾಜೀವ್ ಗಾಂಧಿ ಎದೆರೋಗಗಗಳ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ಅಮೆರಿಕಾದಿಂದ ಬಂದಿದ್ದ ವೈಟ್ಫೀಲ್ಡ್ನ ಟೆಕ್ಕಿ, ಆತನ ಪತ್ನಿ ಹಾಗೂ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಮತ್ತೊಮ್ಮೆ ಅವರ ಸ್ವಾ್ಯಬ್ ಮತ್ತು ರಕ್ತ ಮಾದರಿ ಪರೀಕ್ಷೆ ನಡೆಸಲಾಗುವುದು. ವರದಿಯಲ್ಲಿ ನೆಗೆಟಿವ್ ಬಂದರೆ 24 ಗಂಟೆಯೊಳಗೆ ಮತ್ತೆ ಪರೀಕ್ಷೆ ನಡೆಸಲಾಗುತ್ತದೆ. ಎರಡೂ ವರದಿ ನೆಗೆಟಿವ್ ಬಂದರೆ ಗುಣಮುಖರಾಗಿದ್ದಾರೆ ಎಂದು ಪರಿಗಣಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮತ್ತೆ ಮೂರು ಪ್ರಕರಣ: ಮಂಗಳವಾರ ಹೊಸದಾಗಿ ಮೂವರಲ್ಲಿ ಸೋಂಕು ದೃಢಪಡುವ ಮುಖಾಂತರ ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಲಂಡನ್ನಿಂದ ಮಾ.12ರಂದು ಆಗಮಿಸಿದ್ದ 20 ವರ್ಷದ ಯುವತಿ ಹಾಗೂ ದುಬೈಗೆ ತೆರಳಿದ್ದ 67 ವರ್ಷದ ಮಹಿಳೆಗೂ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಸೋಮವಾರ ಸೋಂಕು ದೃಢಪಟ್ಟಿದ್ದ 32 ವರ್ಷದ ವ್ಯಕ್ತಿಯ ಅಮೆರಿಕಾದಿಂದ ಲಂಡನ್ಗೆ ಭೇಟಿ ನೀಡಿದ್ದು, ಅಲ್ಲಿಂದ ಮಾ. 8ರಂದು ಭಾರತದಕ್ಕೆ ಹಿಂದಿರುಗಿದ್ದಾರೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 50 ಮಂದಿಯನ್ನು ಪತ್ತೆ ಮಾಡಲಾಗಿದ್ದು, ಎಲ್ಲರನ್ನು ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿರಿಸಲಾಗಿದೆ. ಈ ವ್ಯಕ್ತಿ ಈಗಾಗಲೇ ಸೋಂಕಿತ ಎಂದು ಘೋಷಿಸಿದ್ದ 50 ವರ್ಷದ ಟೆಕ್ಕಿಯ ಸಹೋದ್ಯೋಗಿಯಾಗಿದ್ದು, ಮಾ. 8ರಂದು ಇಬ್ಬರು ಒಂದೇ ವಿಮಾನದಲ್ಲಿ ಆಗಮಿಸಿದ್ದರು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದರು.
ಕರೊನಾ ವೈರಸ್ ಶಂಕೆ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 58 ವರ್ಷದ ವ್ಯಕ್ತಿ ಬೆಂಗಳೂರಿನ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಪೊಲೀಸರು ಹಾಗೂ ಆಸ್ಪತ್ರೆ ಸಿಬ್ಬಂದಿ ಆತನ ಹುಡುಕಾಟ ನಡೆಸುತ್ತಿದ್ದಾರೆ. ಇತ್ತೀಚೆಗೆ ಅಮೆರಿಕಾದಿಂದ ಹಿಂದಿರುಗಿದ್ದ ವ್ಯಕ್ತಿಯನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿ ಸೋಂಕಿತ ದೇಶದಿಂದ ಬಂದಿದ್ದ ಕಾರಣಕ್ಕಾಗಿ ‘ಬಿ’ ಗುಂಪಿನವರೆಂದು ಗುರುತಿಸಿ ಸಿ.ವಿ.ರಾಮನ್ ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಲಾಗಿತ್ತು. ಆದರೆ ಮಂಗಳವಾರ ಬೆಳಗ್ಗೆ ಆಸ್ಪತ್ರೆಯಿಂದ ಓಡಿ ಹೋಗಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಲ್ಲಿಗೆ ಹೂವಿನ ವ್ಯಾಪಾರಕ್ಕೂ ಕರೊನಾ ವೈರಸ್ ಕಂಟಕವಾಗಿ ಪರಿಣಮಿಸಿದೆ. ಈ ತಾಲೂಕಿನಲ್ಲಿ 250 ಹೆಕ್ಟೇರ್ ಪ್ರದೇಶದಲ್ಲಿ ಮಲ್ಲಿಗೆ ಬೆಳೆಯುತ್ತಿದ್ದು,ಪ್ರತಿ ಕೆಜಿ ಮಲ್ಲಿಗೆ 200 ರಿಂದ 500 ರೂ.ವರೆಗೆ ಮಾರಾಟವಾಗಿತ್ತು. ಈಗ 100 ರೂ.ಗೆ ಕುಸಿದಿದೆ. ಕರೊನಾ ಭಯದಿಂದ ಮದುವೆ, ಮುಂಜಿ, ಸಭೆ, ಸಮಾರಂಭ, ಜಾತ್ರೆಗಳು ನಡೆಯದಂತಾಗಿ, ಹೂವಿನ ಹಾರಗಳ ಮಾರಾಟ ನಿಂತಿದೆ. ಇದರಿಂದ ಮಲ್ಲಿಗೆ ಹೂವು ಖರೀದಿಸುವವರು ಇಲ್ಲದಂತಾಗಿದೆ.
ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ 50 ವರ್ಷದ ಮಹಿಳೆ ಹಾಗೂ ಶ್ರೀರಂಗಪಟ್ಟಣದ ವ್ಯಕ್ತಿ ಜ್ವರ, ಗಂಟಲು ಕೆರೆತ, ಕೆಮ್ಮು, ಶೀತದಿಂದ ಬಳಲುತ್ತಿದ್ದರು. ಕರೊನಾ ಶಂಕೆ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಇವರನ್ನು ಮಿಮ್ಸ್ಗೆ ದಾಖಲಿಸಲಾಯಿತಾದರೂ ಇವರಲ್ಲಿ ಸೋಂಕು ಇಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.