77 ಸಾವಿರ ದಾಟಿದ ಕರೊನಾ ಸೋಂಕಿತರ ಸಂಖ್ಯೆ

Covid 19
Published on

ನವದೆಹಲಿ: ದೇಶದಲ್ಲಿ ಕರೊನಾ ಸೋಂಕು ದಿನದಿಂದ ದಿನಕ್ಕೆ ತೀವ್ರತೆ ಹೆಚ್ಚಿಸಿಕೊಳ್ಳುತ್ತಿದೆ. ಬುಧವಾರ ಸೋಂಕಿತರ ಸಂಖ್ಯೆ 77,000 ಗಡಿ ದಾಟಿದೆ. ಕಳೆದ 24 ತಾಸುಗಳಲ್ಲಿ 3,400 ಜನರಲ್ಲಿ ಸೋಂಕು ದೃಢವಾಗಿದ್ದು ಸೋಂಕಿತರ ಸಂಖ್ಯೆ 77,730ಕ್ಕೆ ಏರಿದೆ. ಮೃತರ ಸಂಖ್ಯೆಯಲ್ಲೂ ಏರಿಕೆ ಕಂಡಿದ್ದು ಈವರೆಗೆ 2,535 ಸೋಂಕಿತರು ಸಾವನ್ನಪ್ಪಿದ್ದಾರೆ. ಬುಧವಾರ 120 ಸಾವು ವರದಿಯಾಗಿದೆ. ಇದುವರೆಗೆ 26,000 ಸೋಂಕಿತರು ಗುಣಮುಖರಾಗಿ ಬಿಡುಗಡೆಗೊಂಡಿದ್ದು, 49,200 ಸಕ್ರಿಯ ಪ್ರಕರಣಗಳಿವೆ.

ದೇಶದಲ್ಲಿ ಕೋವಿಡ್ 19 ಸೋಂಕಿಗೆ ಹೆಚ್ಚು ಬಾಧಿತವಾಗಿರುವ ಮಹಾರಾಷ್ಟ್ರದ ಮುಂಬೈನ ಧಾರಾವಿ ಸ್ಲಂನಲ್ಲಿ ಏಪ್ರಿಲ್ 1ರಂದು ಮೊದಲ ಕರೊನಾ ಪ್ರಕರಣ ಪತ್ತೆಯಾಗಿತ್ತು. ಆ ನಂತರ ಪ್ರತಿ ದಿನ ಪ್ರಕರಣ ಹೆಚ್ಚುತ್ತಲೇ ಇದೆ. ಈವರೆಗೆ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಬುಧವಾರ 66 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1028ಕ್ಕೆ ತಲುಪಿದೆ. ಇಲ್ಲಿ 40 ಜನರು ಮೃತರಾಗಿದ್ದಾರೆ. ಲಾಕ್​ಡೌನ್ ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (ಸಿಎಪಿಎಫ್) 20 ತಂಡವನ್ನು (2000 ಸಿಬ್ಬಂದಿ) ಕಳುಹಿಸಬೇಕೆಂದು ರಾಜ್ಯ ಸರ್ಕಾರ ಕೇಂದ್ರದಲ್ಲಿ ಮನವಿ ಮಾಡಿಕೊಂಡಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೋಂಕಿನಿಂದಾಗಿ ಮೃತರ ಸಂಖ್ಯೆ 100 ದಾಟಿದೆ. ಬುಧವಾರ 20 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 106ಕ್ಕೆ ಏರಿದೆ. ಕಳೆದ 24 ತಾಸಿನಲ್ಲಿ 359 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 7,988ಕ್ಕೆ ಏರಿದೆ. ಸರ್ಕಾರ ನೀಡುತ್ತಿರುವ ವರದಿಗಿಂತ ಹೆಚ್ಚು ಸಾವು ಸಂಭವಿಸಿವೆ ಎಂದೂ ಹೇಳಲಾಗುತ್ತದೆ. ಹೀಗಾಗಿ ಸರ್ಕಾರ ಪರಿಷ್ಕೃತ ವರದಿ ನೀಡಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮೃತ ಪಟ್ಟಿದ್ದು, ವರದಿಯಿಂದ ಹೊರಗುಳಿದಿದ್ದ 20 ಪ್ರಕರಣಗಳನ್ನು ಪಟ್ಟಿಯಲ್ಲಿ ಸೇರಿಸಿದೆ.

ಒಡಿಶಾದಲ್ಲಿ ತೀವ್ರ

ಈವರೆಗೆ ಮಂದಗತಿಯ ಕರೊನಾ ಪಸರಿಸುವಿಕೆಯನ್ನು ಕಂಡಿದ್ದ ಒಡಿಶಾದಲ್ಲಿ ಬುಧವಾರದಂದು ಏಕಾಏಕಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಒಂದೇ ದಿನದಲ್ಲಿ 101 ನೂತನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 538ಕ್ಕೆ ತಲುಪಿದೆ. ನೂತನ ಪ್ರಕರಣಗಳ ಪೈಕಿ 52 ಪ್ರಕರಣಗಳು ಗಂಜಮ್ ಜಿಲ್ಲೆಯಲ್ಲೇ ಕಾಣಿಸಿಕೊಂಡಿವೆ. ಉಳಿದಂತೆ ಬಾಲಸೋರ್​ನಲ್ಲಿ 33, ಜೈಪುರ ಮತ್ತು ಸುಂದರ್​ಗಡ್​ನಿಂದ ತಲಾ ಏಳು, ಕೆಂದುಝುರ್ ಜಿಲ್ಲೆಯಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 500ರ ಗಡಿ ದಾಟಿದ್ದರೂ, ಸಾವನ್ನಪ್ಪಿರುವರ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿಲ್ಲ. ಈವರೆಗೆ ಕೇವಲ ಮೂರು ಸೋಂಕಿತರು ಮೃತರಾಗಿರುವುದು ವರದಿಯಾಗಿದೆ. 143 ಸೋಂಕಿತರು ಗುಣಮುಖರಾಗಿದ್ದು, 538 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

10 ಕೋಟಿ ಜನರಿಂದ ಆರೋಗ್ಯ ಸೇತು ಬಳಕೆ

ನವದೆಹಲಿ: ಕರೊನಾ ಸೋಂಕು ಕುರಿತು ಮುನ್ನೆಚ್ಚರಿಕೆ ನೀಡುವ ‘ಆರೋಗ್ಯ ಸೇತು’ ಆಪ್ ಬಳಕೆದಾರರ ಸಂಖ್ಯೆ 10 ಕೋಟಿಗೆ ತಲುಪಿದೆ. ಏಪ್ರಿಲ್​ನಲ್ಲಿ ಆರಂಭಿಸಲಾದ ಆಪ್ ಕೆಲವೇ ದಿನಗಳಲ್ಲಿ ಐದು ಕೋಟಿ ಡೌನ್​ಲೋಡ್ ಆಗಿತ್ತು. ‘ದೇಶದಾದ್ಯಂತ 10 ಕೋಟಿ ಆರೋಗ್ಯ ಸೇತು ಬಳಕೆದಾರರಿದ್ದಾರೆ. ನಾವೆಲ್ಲ ಒಟ್ಟಾಗಿ ಕೊವಿಡ್-19ಅನ್ನು ಸೋಲಿಸಬಹುದು. ಆರೋಗ್ಯ ಸೇತು ಡೌನ್​ಲೋಡ್ ಮಾಡಿ ಮತ್ತು ಸುರಕ್ಷಿತವಾಗಿರಿ’ ಎಂದು ಅಧಿಕೃತ ಟ್ವಿಟರ್ ಹ್ಯಾಂಡಲ್ ಟ್ವೀಟ್ ಮಾಡಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್​ಐಸಿ) ಮಾರ್ಗದರ್ಶನದಡಿ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಆಪ್ ಅಭಿವೃದ್ಧಿ ಪಡಿಸಿದೆ. ಇದು 11 ಭಾಷೆಗಳಲ್ಲಿ ಲಭ್ಯ.

1.4 ಲಕ್ಷ ಜನರಿಗೆ ಎಚ್ಚರಿಕೆ

ಕರೊನಾ ಸೋಂಕಿನ ಕುರಿತು ಈ ಆಪ್ ಸುಮಾರು 1.4 ಲಕ್ಷ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ದೇಶದಲ್ಲಿ 697 ಕರೊನಾ ಹಾಟ್​ಸ್ಪಾಟ್ ಬಗ್ಗೆ ಮಾಹಿತಿ ಕಲೆ ಹಾಕಲು ಕೂಡ ಇದು ನೆರವಾಗಿದೆ. ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳಿಗೆ ಈ ಆಪ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಮೇ 12ರಂದು ಕೆಲವು ರೈಲುಗಳ ಸೇವೆ ಪುನಾರಂಭವಾಗಿದ್ದು ಪ್ರಯಾಣಿಕರಿಗೆ ಆಪ್ ಡೌನ್​ಲೋಡ್ ಕಡ್ಡಾಯಗೊಳಿಸಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯ ಕೂಡ ಈ ಬಗ್ಗೆ ಚಿಂತನೆ ನಡೆಸುತ್ತಿದೆ.

ಟೆಕ್ಕಿಗಳಿಗೆ ಶಾಶ್ವತ ವರ್ಕ್ ಫ್ರಂ ಹೋಂ!

ವಾಷಿಂಗ್ಟನ್: ಟ್ವಿಟರ್ ಸಂಸ್ಥೆ ತನ್ನ ಸಿಬ್ಬಂದಿಗೆ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಕರೊನಾ ಸೋಂಕು ಯಾವಾಗ ಮುಕ್ತಾಯವಾಗುತ್ತದೆ ಎಂದು ತಿಳಿಯದ ಕಾರಣ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಲಾಗಿದೆ. ಸಂಸ್ಥೆ ಮುಖ್ಯಸ್ಥ ಜಾಕ್ ಡೋರ್ಸೆ ಈ ವಿಚಾರವನ್ನು ಸಿಬ್ಬಂದಿಗೆ ಇ ಮೇಲ್ ಮೂಲಕ ತಿಳಿಸಿದ್ದಾರೆ. ಮನೆಯಲ್ಲಿ ಕೆಲಸ ಮಾಡಲು ಬಯಸದವರು ಕಚೇರಿಗೆ ಬಂದು ಕೆಲಸ ಮಾಡಬಹುದು. ವಿಶ್ವದಲ್ಲಿ ಕರೊನಾ ಪ್ರಮಾಣವನ್ನು ಗಮನಿಸಿದರೆ ಈ ವರ್ಷದ ಸೆಪ್ಟೆಂಬರ್​ವರೆಗೆ ಕಚೇರಿಗಳನ್ನು ತೆರೆಯಲಾಗುವುದಿಲ್ಲ. ಅವಶ್ಯಕತೆ ಬಿದ್ದರೆ 2021ರವರೆಗೂ ಕಚೇರಿ ತೆರೆಯುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಫೇಸ್​ಬುಕ್, ಗೂಗಲ್ ಸಂಸ್ಥೆಗಳು ಈ ವರ್ಷದ ಅಂತ್ಯದವರೆಗೆ ಮನೆಯಿಂದಲೇ ಕೆಲಸ ಮಾಡುವಂತೆ ಸಿಬ್ಬಂದಿಗೆ ತಿಳಿಸಿದೆ. ಅಮೆಜಾನ್ ಸಂಸ್ಥೆ ಅಕ್ಟೋಬರ್​ವರೆಗೆ ವರ್ಕ್ ಫ್ರಂ ಹೋಂ ಸೌಲಭ್ಯ ನೀಡಿರುವುದಾಗಿ ಮಾಹಿತಿ ನೀಡಿದೆ.

more
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net