ನೂತನ ವಿಜಯನಗರ ಜಿಲ್ಲೆ ಸನ್ನಿಹಿತ

Vidhanasoudha vvani
Published on

ಬೆಂಗಳೂರು: ಉಪಚುನಾವಣೆ ವೇಳೆ ಹೆಚ್ಚು ಚರ್ಚೆಗೆ ಬಂದ ವಿಜಯನಗರ ಜಿಲ್ಲೆ ಸ್ಥಾಪನೆಗೆ ಸರ್ಕಾರ ಅಧಿಕೃತ ಮುನ್ನುಡಿ ಬರೆದಿದೆ. ಬಳ್ಳಾರಿ ಜಿಲ್ಲೆ ವಿಭಜಿಸುವುದು ಸೂಕ್ತ ಎಂದು ಅಲ್ಲಿನ ಡಿಸಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಕಂದಾಯ ಇಲಾಖೆ ವರದಿ ಸ್ವೀಕರಿಸಿದ್ದು ಸಹಮತ ವ್ಯಕ್ತಪಡಿಸಿ ಮುಖ್ಯಮಂತ್ರಿ ಅವಗಾಹನೆಗೆ ತರಲು ನಿರ್ಧರಿಸಿದೆ. ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಸೇರಿಕೊಂಡಂತೆ ಹೊಸ ಜಿಲ್ಲೆಯ ಸಾಧ್ಯತೆ ಬಗ್ಗೆ ವರದಿ ಸಲ್ಲಿಕೆಯಾಗಿದೆ. ಸ್ಪಷ್ಟವಾಗಿ ಎಷ್ಟು ತಾಲೂಕು ಈ ಪ್ರಸ್ತಾಪದಲ್ಲಿ ಅಡಕವಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಬಳ್ಳಾರಿ ಜಿಲ್ಲಾಧಿಕಾರಿ ವರದಿ ಕಳಿಸಿದ್ದಾರೆ, ಜಿಲ್ಲೆ ವಿಭಜನೆ ಸೂಕ್ತ ಎಂದು ಅಭಿಪ್ರಾಯವಿದೆ. ನಾನು ಮುಖ್ಯಮಂತ್ರಿಗೆ ಸಲ್ಲಿಸುತ್ತೇನೆ. ನಂತರ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.

ಪರ-ವಿರೋಧ: ಮೈತ್ರಿ ಸರ್ಕಾರ ಪತನ ಬಳಿಕ ನಡೆದ ಉಪಚುನಾವಣೆ ಸಂದರ್ಭ ಪ್ರತ್ಯೇಕ ಜಿಲ್ಲೆ ಬಗ್ಗೆ ಪ್ರಸ್ತಾಪವಾಗಿತ್ತು. ಹೊಸಪೇಟೆ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಮೊದಲು ಈ ವಿಚಾರ ಎತ್ತಿದ್ದರು. ಹಂಪಿ ಉತ್ಸವ ವೇಳೆಯೂ ವಿಷಯ ಪ್ರಸ್ತಾಪಿಸಿದ್ದರು. ಆದರೆ, ಅವರದೇ ಪಕ್ಷದ ಶಾಸಕ ಸೋಮಶೇಖರ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ವಿವಿಧ ಸಂಘಟನೆಗಳಿಂದ ಬಳ್ಳಾರಿ ಬಂದ್ ಕೂಡ ನಡೆಸಲಾಗಿತ್ತು. ರಾಜ್ಯದಲ್ಲಿ ಪ್ರಸ್ತುತ 30 ಜಿಲ್ಲೆಗಳಿದ್ದು, ವಿಜಯನಗರ 31ನೇ ಜಿಲ್ಲೆಯಾಗಲಿದೆ?

ಡಿಸಿ ವರದಿಯೇ ಆಧಾರ

ಬಳ್ಳಾರಿ: ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ 2019 ಸೆ.20ರಂದು ಡಿಸಿಗೆ ಪತ್ರ ಬರೆದು ನೂತನ ಜಿಲ್ಲೆ ರಚನೆಗೆ ಅಗತ್ಯವಾದ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದರು. ಇದರನ್ವಯ ಸೆ.28ರಂದು ಡಿಸಿ ಎಸ್.ಎಸ್.ನಕುಲ್ ಜಿಲ್ಲೆಯ ಭೌಗೋಳಿಕ ಚಿತ್ರಣ, ಜಿಲ್ಲಾ ಕೇಂದ್ರದಿಂದ ತಾಲೂಕುಗಳ ಅಂತರ, ತಾಲೂಕುಗಳ ಜನಸಾಂಧ್ರತೆ, ವಿಧಾನಸಭಾ ಕ್ಷೇತ್ರಗಳು, ಉದ್ದಿಮೆಗಳು, ನೈಸರ್ಗಿಕ ಸಂಪತ್ತು, ಪ್ರವಾಸಿ ತಾಣಗಳು, ಕೃಷಿ, ಬೆಳೆ ಪದ್ಧತಿ ಮತ್ತತರ ವಿಷಯಗಳ ಸಮಗ್ರ ವರದಿ ಸಲ್ಲಿಸಿದ್ದರು. ನೂತನ ಜಿಲ್ಲೆಗೆ ಈ ವರದಿಯೇ ಆಧಾರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net