

Simmer Dating : ನಾವಿಂದು ಡೇಟಿಂಗ್ ಟ್ರೆಂಡ್ಸ್ ಯುಗದಲ್ಲಿ ವಾಸಿಸುತ್ತಿದ್ದೇವೆ. ಘೋಸ್ಟಿಂಗ್, ಸಿಚುವೇಶನ್ಶಿಪ್, ಬ್ರೆಡ್ಕ್ರಂಬಿಂಗ್, ಜೋಂಬಿಯಿಂಗ್, ಸ್ಲೆಡ್ಜಿಂಗ್ ಮತ್ತು ಫ್ರೆಂಡ್ಶಿಪ್ ಮ್ಯಾರೇಜ್ನಂತಹ ಅನೇಕ ಡೇಟಿಂಗ್ ಟ್ರೆಂಡ್ಸ್ ಜಗತ್ತಿನಲ್ಲಿಂದು ಚರ್ಚೆಯಾಗುತ್ತಿವೆ. ಅನೇಕ ದೇಶದ ಯುವಕರು ಈ ಟ್ರೆಂಡ್ಸ್ ಹಿಂದೆ ಬಿದ್ದಿದ್ದಾರೆ. ಇದೀಗ ಈ ಗುಂಪಿನ ಅಡಿಯಲ್ಲಿ ಬಂದಿರುವ ಹೊಸ ಟ್ರೆಂಡ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಅದುವೇ ಸಿಮ್ಮರ್ ಟ್ರೆಂಡ್.
ಪ್ರಸ್ತುತ ಜಗತ್ತು ವೇಗವಾಗಿ ಬದಲಾಗುತ್ತಿದೆ. ಕ್ಷಣಾರ್ಧದಲ್ಲೇ ಎಲ್ಲ ಮಾಹಿತಿ ನಮಗೆ ಗೊತ್ತಾಗುತ್ತಿದೆ. ಡೇಟಿಂಗ್ ಅಪ್ಲಿಕೇಶನ್ಗಳು ಅನೇಕ ರೀತಿಯ ಸಂಬಂಧಗಳನ್ನು ಬೆಳೆಸುತ್ತಿವೆ. ಇದೇ ಸಂದರ್ಭದಲ್ಲಿ ಸಿಮ್ಮರ್ ಡೇಟಿಂಗ್ ಕೂಡ ಎಲ್ಲೆಡೆ ಟ್ರೆಂಡ್ ಆಗುತ್ತಿದೆ.
ಈ ಹೊಸ ಡೇಟಿಂಗ್ ಟ್ರೆಂಡ್ನಲ್ಲಿ ಸಂಬಂಧಗಳು ನಿಧಾನವಾಗಿ ಬೆಳೆಯುತ್ತವೆ. ನೀವು ಇಷ್ಟಪಡುವ ಯಾರಿಗಾದರೂ ನಿರಂತರವಾಗಿ ಮಸೇಜ್ ಕಳುಹಿಸುವುದು, ನಂತರ ಕಾಫಿಗಾಗಿ ಭೇಟಿಯಾಗುವುದು ಮತ್ತು ಸಂಬಂಧವನ್ನು ಮುಂದುವರಿಸುವುದು ಸಿಮ್ಮರ್ ಡೇಟಿಂಗ್ನ ವಿಶೇಷತೆ.
ಈ ಟ್ರೆಂಡ್ನಲ್ಲಿ ದೈಹಿಕ ಸಂಬಂಧಕ್ಕೆ ಧಾವಿಸುವ ಬದಲು ಅಥವಾ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು, ಭಾವನಾತ್ಮಕ ಸಂಬಂಧ ಮತ್ತು ಹೊಂದಾಣಿಕೆಯನ್ನು ನಿರ್ಮಿಸುತ್ತದೆ. ಸಿಮ್ಮರ್ ಡೇಟಿಂಗ್ ಆಳವಾದ ಮತ್ತು ಅರ್ಥಪೂರ್ಣವಾದ ಸಂಬಂಧವನ್ನು ಬೆಳೆಸುತ್ತದೆ. ಇಲ್ಲಿ ಸಂಬಂಧವು ಬಹಳ ನಿಧಾನವಾಗಿ ರೂಪುಗೊಳ್ಳುತ್ತದೆ. ಸದ್ಯ ಯುವಜನತೆ ಈ ಸಂಬಂಧದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ.
ಇನ್ನು ಈ ಡೇಟಿಂಗ್ ಟ್ರೆಂಡ್ನಲ್ಲಿ ಇನ್ನೊಬ್ಬರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅವಕಾಶವಿದೆ. ಅಲ್ಲದೆ, ಈ ರೀತಿಯ ಸಂಬಂಧವು ತುಂಬಾ ಪ್ರಬಲವಾಗಿರುತ್ತದೆ. ಹೀಗಾಗಿಯೇ ಹೆಚ್ಚಿನ ಯುವ ಜನಾಂಗ ಈ ಡೇಟಿಂಗ್ ಟ್ರೆಂಡ್ ಅನ್ನು ಅನುಸರಿಸುತ್ತಿದ್ದಾರೆ.
ಈ ಹೊಸ ರೀತಿಯ ಡೇಟಿಂಗ್ನಲ್ಲಿ ಇತರ ವ್ಯಕ್ತಿಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ನಿಮಗೆ ಅವಕಾಶವಿರುತ್ತದೆ. ಸಂಬಂಧವನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಸಹ ನಿಮಗೆ ಸಹಾಯ ಮಾಡುತ್ತದೆ. ಈ ಡೇಟಿಂಗ್ ಮೇಲೆ ಪೂರ್ಣ ಏಕಾಗ್ರತೆ ಇಲ್ಲದಿರುವುದರಿಂದ, ವೈಯಕ್ತಿಕ ಬೆಳವಣಿಗೆಗೂ ಸಮಯವಿರುತ್ತದೆ. (ಏಜೆನ್ಸೀಸ್)