ಹೊಸ ಇಲೆಕ್ಟ್ರಿಕ್ ವಾಹನ ನೀತಿ

ವಿಜಯವಾಣಿ-_6_
Published on

ನವದೆಹಲಿ: ವಿದ್ಯುಚ್ಛಕ್ತಿಚಾಲಿತ ವಾಹನಗಳ (ಇ.ವಿ.) ನೀತಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ದೇಶದಲ್ಲಿ ಕನಿಷ್ಠ 500 ದಶಲಕ್ಷ ಡಾಲರ್ ಹೂಡಿಕೆ ಮಾಡುವ ಕಂಪನಿಗಳಿಗೆ ತೆರಿಗೆ ವಿನಾಯಿತಿಗಳನ್ನು ನೀಡಲು ಈ ನೀತಿ ನಿರ್ಧರಿಸಿದೆ. ಅಮೆರಿಕದ ಟೆಸ್ಲಾದಂಥ ಬೃಹತ್ ಜಾಗತಿಕ ಕಂಪನಿಗಳನ್ನು ಸೆಳೆಯುವುದು ಇದರ ಉದ್ದೇಶವಾಗಿದೆ.

ಇ-ವಾಹನಗಳ ಉತ್ಪಾದನಾ ಘಟಕ ಸ್ಥಾಪಿಸುವ ಕಂಪನಿಗಳು ಕಡಿಮೆ ಸೀಮಾ ಸುಂಕ ದರದಲ್ಲಿ ಸೀಮಿತ ಸಂಖ್ಯೆಯ ಕಾರುಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗುವುದೆಂದು ಅಧಿಕೃತ ಹೇಳಿಕೆ ತಿಳಿಸಿದೆ. ಭಾರತವನ್ನು ಇವಿ ಉತ್ಪಾದನೆಯ ಗಮ್ಯ ತಾಣವನ್ನಾಗಿ ಮಾಡುವುದು ಹಾಗೂ ಪ್ರತಿಷ್ಠಿತ ಜಾಗತಿಕ ಕಂಪನಿಗಳನ್ನು ಈ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಆಕರ್ಷಿಸುವುದು ನೀತಿಯ ಗುರಿಯಾಗಿದೆ ಎಂದು ಹೇಳಿಕೆ ವಿವರಿಸಿದೆ.

ಕನಿಷ್ಠ ಬಂಡವಾಳ ಮಿತಿ: ಯಾವುದೇ ಕಂಪನಿ ಭಾರತದಲ್ಲಿ ಇ.ವಿ. ಉತ್ಪಾದನಾ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿದರೆ ಅದು ಕನಿಷ್ಠ 500 ದಶಲಕ್ಷ ಡಾಲರ್ ಅಥವಾ 4,150 ಕೋಟಿ ರೂಪಾಯಿ ಬಂಡವಾಳವನ್ನು ಹೂಡಬೇಕಾಗುತ್ತದೆ. ಇದಕ್ಕೆ ಮೇಲ್ಮಿತಿ (ಅಪ್ಪರ್ ಲಿಮಿಟ್) ಇಲ್ಲ. ಆಮದು ಮಾಡಿಕೊಳ್ಳಲಾದ ಒಟ್ಟು ಇವಿಗಳಿಗೆ ಸುಂಕ ವಿನಾಯಿತಿಯು 6,484 ಕೋಟಿ ರೂ. ಹೂಡಿಕೆಗೆ ಸೀಮಿತವಾಗಿರುತ್ತದೆ. ಇದು ಪಿಎಲ್​ಐ ಯೋಜನೆಯಡಿಯ ಉತ್ತೇಜಕಕ್ಕೆ ಸಮನಾಗಿರುತ್ತದೆ. ಇವುಗಳಲ್ಲಿ ಯಾವುದು ಕಡಿಮೆಯೋ ಅದು ಅನ್ವಯವಾಗುತ್ತದೆ.

ನೀತಿಗಳ ಬದಲಾವಣೆ ಇಲ್ಲ

ಅಮೆರಿಕದ ಇವಿ ದಿಗ್ಗಜ ಟೆಸ್ಲಾದ ಅಗತ್ಯಗಳಿಗೆ ತಕ್ಕಂತೆ ಭಾರತದ ನೀತಿಯನ್ನು ಬದಲಾಯಿಸಲಾಗದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸ್ಪಷ್ಟಪಡಿಸಿದ್ದಾರೆ. ಜಗತ್ತಿನ ನಾನಾ ಭಾಗಗಳ ಇವಿ ತಯಾರಿಕಾ ಕಂಪನಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಕಾನೂನು ಮತ್ತು ತೆರಿಗೆ ಸ್ವರೂಪವನ್ನು ರೂಪಿಸಲಾಗುತ್ತದೆ ಎಂದು ಗೋಯಲ್ ಹೇಳಿದ್ದಾರೆ.

3 ವರ್ಷ ಗಡುವು

ಅನುಮತಿ ಪಡೆದ ಕಂಪನಿ ಭಾರತದಲ್ಲಿ ಇವಿ ಉತ್ಪಾದನಾ ಘಟಕ ಸ್ಥಾಪಿಸಲು ಹಾಗೂ ಇ-ವಾಹನಗಳ ತಯಾರಿಕೆ ಆರಂಭಿಸಲು ಮೂರು ವರ್ಷದ ಗಡುವನ್ನು ನೀಡಲಾಗುತ್ತದೆ. ಶೇಕಡ 50ರಷ್ಟು ಡೊಮೆಸ್ಟಿಕ್ ವ್ಯಾಲ್ಯೂ ಅಡಿಶನ್ (ಡಿವಿಎ) ತಲುಪಲು ಗರಿಷ್ಠ ಐದು ವರ್ಷದ ಕಾಲಾವಕಾಶ ಒದಗಿಸಲಾಗುತ್ತದೆ ಎಂದು ನೀತಿ ತಿಳಿಸಿದೆ. ಮೂರನೇ ವರ್ಷದೊಳಗೆ ಶೇ. 25ನ್ನು ಹಾಗೂ ಐದನೇ ವರ್ಷದೊಳಗೆ ಶೇ. 50ನ್ನು ತಲುಪಬೇಕು ಎಂದು ನಿಗದಿಪಡಿಸಲಾಗಿದೆ. ಸಿಕೆಡಿ ಘಟಕಗಳಿಗೆ ಅನ್ವಯಿಸುವ ಶೇ. 15 ಸೀಮಾ ಸುಂಕ (ಕಸ್ಟಮ್್ಸ ಡ್ಯೂಟಿ) 35,000 ಡಾಲರ್ ಹಾಗೂ ಅದಕ್ಕಿಂತ ಮೇಲ್ಪಟ್ಟ ಮೌಲ್ಯದ ಕನಿಷ್ಠ ಸಿಐಎಫ್ ಮೌಲ್ಯದ ವಾಹನಗಳಿಗೆ ಅನ್ವಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net