ಮಗ ಆತ್ಮಹತ್ಯೆ: ವಿಷಯ ತಿಳಿದು ತಾಯಿ ಸಾವು

Crime Logo
Published on

ಬೆಂಗಳೂರು: ಸಾಲಭಾದೆ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಮರಣ ಪತ್ರ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪುತ್ರನ ಆತ್ಮಹತ್ಯೆ ತಿಳಿದು ಅನಾರೋಗ್ಯಪೀಡಿತ ತಾಯಿ ಸಹ ಮಲಗಿದ್ದ ಹಾಸಿಗೆಯಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಾಮಾಕ್ಷಿಪಾಳ್ಯ ನಡೆದಿದೆ.
ಕಾಮಾಕ್ಷಿಪಾಳ್ಯದ ಕಾವೇರಿಪುರ ನಿವಾಸಿ ಅರುಣ್ ಕುಮಾರ್(೩೭) ಆತ್ಮಹತ್ಯೆ ಮಾಡಿಕೊಂಡವನು. ಈತನ ತಾಯಿ ಸರಸ್ವತಿ(೭೩) ಮೃತಪಟ್ಟವರು. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಮೃತ ಸ್ವರಸ್ವತಿ ಅವರಿಗೆ ಮೂವರು ಗಂಡ ಮಕ್ಕಳು. ಈ ಪೈಕಿ ಹಿರಿಯ ಮತ್ತು ಕೊನೆಯ ಮಗ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಎರಡನೇ ಮಗ ಅರುಣ್ ಕುಮಾರ್ ಜತೆಗೆ ಸರಸ್ವತಿ ಅವರು ಕಾವೇರಿಪುರದಲ್ಲಿ ವಾಸಿಸುತ್ತಿದ್ದರು. ಅರುಣ್ ಕುಮಾರ್ ಅವಿವಾಹಿತನಾಗಿದ್ದು, ಕ್ಯಾಬ್ ಚಾಲಕನಾಗಿದ್ದ. ಸಾಕಷ್ಟು ಸಾಲ ಮಾಡಿಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದ. ಒಂದು ವರ್ಷದ ಹಿಂದೆ ಸ್ನಾನದ ಕೋಣೆಯಲ್ಲಿ ತಾಯಿ ಸರಸ್ವತಿ ಅವರು ಜಾರಿ ಬಿದ್ದು ಬೆನ್ನು ಮೂಳೆ ಮುರಿದುಕೊಂಡಿದ್ದರು. ಚಿಕಿತ್ಸೆ ಪಡೆಯುತ್ತಾ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದರು. ಹೀಗಾಗಿ ಅರುಣ್ ಕುಮಾರ್ ತಾಯಿಯ ಯೋಗಾಕ್ಷೇಮ ವಿಚಾರಸಿಕೊಂಡು ಆರೈಕೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಮಾನಸಿಕ ಖಿನ್ನತೆಗೆ ಒಳಗಾಗಿದ್ದ:
ಸಾಲಭಾದೆ ಹಾಗೂ ತಾಯಿಯ ಅನಾರೋಗ್ಯದಿಂದ ಅರುಣ್ ಕುಮಾರ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಭಾನುವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಾಹ್ನ ೧೨.೩೦ಕ್ಕೆ ಸಹೋದರ ಮನೆಗೆ ಬಂದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅರುಣ್ ಕುಮಾರ್ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಮರಣಪತ್ರ ಸಿಕ್ಕಿದ್ದು, ಅದರಲ್ಲಿ ತನ್ನ ಸಾಲ, ತಾಯಿಯ ಅನಾರೋಗ್ಯದಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿರುವುದು ಕಂಡು ಬಂದಿದೆ. ಬಳಿಕ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ತಾಯಿ ಸಾವು:
ಪುತ್ರ ಅರುಣ್ ಕುಮಾರ್ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದು ಮೂರು ಗಂಟೆಯ ಬಳಿಕ ಅನಾರೋಗ್ಯಪೀಡಿತ ತಾಯಿ ಸರಸ್ವತಿ ಅವರು ಸಹ ತಾವು ಮಲಗಿದ್ದ ಹಾಸಿಗೆಯಲ್ಲೇ ಮೃತಪಟ್ಟಿದ್ದಾರೆ. ಮಗನ ಆತ್ಮಹತ್ಯೆಯ ಆಘಾತ ಹಾಗೂ ಅನಾರೋಗ್ಯದಿಂದ ಆಕೆ ಮೃತಪಟ್ಟಿರುವ ಸಾಧ್ಯತೆಯಿದೆ. ಆತ್ಮಹತ್ಯೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net