ಹೆಚ್ಚೆಚ್ಚು ತಿಳಿದಷ್ಟು ತಿಳಿಯದೆ ಇರುವುದು ಬೆಳೆಯುತ್ತಿರುತ್ತದೆ!

-68125cceb5bd8
Published on
ಜೀವನವು ಸರಳತೆಯ, ಕ್ಲಿಷ್ಟತೆಯ ಮಿಶ್ರಣ. ಒಂದೆಡೆ ಜೀವನ ಅತೀ ಸರಳ. ಮತ್ತೊಂದೆಡೆ ಅತೀ ಕ್ಲಿಷ್ಟ. ಕ್ಲಿಷ್ಟತೆಯಿಂದ ಜೀವನವು ಆಸಕ್ತಿಕರ ವಾಗಿರುತ್ತದೆ ಮತ್ತು ಬೆಳವಣಿಗೆಗೆ ಸಹಾಯಕವಾಗಿರುತ್ತದೆ. ಸರಳತೆ ಯಿಂದ ಸರಾಗವಾಗಿ ಉಸಿರಾಡಬಹುದು. ಎರಡೂ ಒಮ್ಮೆಲೇ ಇರುತ್ತದೆ. ಹೇಗೆ?

ಏನೋ ಒಂದು ಆಹಾರವನ್ನು ತಿನ್ನುತ್ತೀರಿ ಮತ್ತು ಆಹಾರ ಜೀರ್ಣವಾಗಿದೆ ಅನ್ನಿಸುತ್ತದೆಯಲ್ಲವೆ? ಆಹಾರದ ಪಚನಕ್ರಿಯೆಯನ್ನು ನೋಡಿದರೆ, ಅದು ಅತೀ ಕ್ಲಿಷ್ಟವಾದದ್ದು. ಲೋಳಾರಸದಲ್ಲಿ ಶರ್ಕರ ಪಿಷ್ಠದ ಪಚನವು ಆರಂಭವಾಗಿ, ಹೊಟ್ಟೆಯೊಳಗೆ ಹೊಕ್ಕು ಗ್ಯಾಸ್ಟಿಕ್ ರಸಗಳೊಡನೆ ಬೆರೆಯುತ್ತದೆ. ಅಲ್ಲಿಂದ ಡ್ಯುಯೋಡಿನಮ್ೊಳಗೆ ಹೊಕ್ಕುತ್ತದೆ. ಅಲ್ಲಿ ಆಹಾರವು ಹೀರಿಕೊಳ್ಳಲ್ಪಟ್ಟ ನಂತರ ದೊಡ್ಡ ಕರುಳನ್ನು ಪ್ರವೇಶಿಸುತ್ತದೆ. ಸ್ವಲ್ಪ ಹೊರಗೆ ಬಂದರೆ, ಸ್ವಲ್ಪ ಮೇಲೆ ಹೋಗುತ್ತದೆ. ಅದರ ಸಾರ ರಕ್ತದೊಳಗೆ ಹೊಕ್ಕುತ್ತದೆ.

ಅದೇ ರೀತಿಯಾಗಿ ಜೀವನದಲ್ಲಿ ಕತ್ತಲು ಹೋಗಿ, ಬೆಳಕು ಬರುತ್ತದೆ; ಜ್ಞಾನ ಉದಯಿಸುತ್ತದೆ ಮತ್ತು ಅಜ್ಞಾನ ಬಾಡಿ ಹೋಗುತ್ತದೆ. ಇದು ಒಮ್ಮೆಲೇ ನಡೆಯುವಂಥದ್ದು. ಬಟ್ಟೆಯನ್ನು ತೊಳೆಯಲು ಸಾಬೂನನ್ನು ಹಚ್ಚುತ್ತೀರಿ. ಕೊಳಕು ಮಾಯವಾಗುತ್ತಿರುತ್ತದೆ ಮತ್ತು ಒಮ್ಮೆಲೇ ಹೊಳಪು ಬರುತ್ತಿರುತ್ತದೆ.

ಜೀವನದಲ್ಲಿ ಜ್ಞಾನವು ಮೇಲೆದ್ದು ಅಜ್ಞಾನ ಮಾಯವಾಗಬೇಕೆಂದರೆ ಗುರು ಬೇಕು, ಗುರುತತ್ವ ಬೇಕು. ಆದ್ದರಿಂದ ಜ್ಞಾನ ಮತ್ತು ಜೀವನದಲ್ಲಿ ಚಲನೆ, ಅಭಿವೃದ್ಧಿ ಅವಶ್ಯಕ. ಕೇವಲ ಜ್ಞಾನವಿದ್ದರೆ ಸಾಲದು. ಜ್ಞಾನವು ಕಾರ್ಯರೂಪದಲ್ಲೂ ಬರಬೇಕು, ಉಪಯುಕ್ತವಾಗಿರಬೇಕು. ಜ್ಞಾನವನ್ನು ಪಡೆಯುವುದು ಒಂದು ವಿಷಯವಾದರೆ, ಜ್ಞಾನದ ಚಲನೆಯೂ ಮುಖ್ಯ. ಅದನ್ನು ಬೇರೆಯವರಿಗೂ ನೀಡಿ ನಾವೆಷ್ಟು ಬಳಸಿದೆವು? ಜ್ಞಾನವನ್ನು ಬಳಸುತ್ತೀರಿ ಸರಿ. ಆದರೆ ಅದರಿಂದ ಯಾವ ಫಲವೂ ಸಿಗದಿದ್ದರೆ? ಅದರ ಅಂತಿಮ ಉತ್ಪನ್ನವೇನು? ಅದರಿಂದ ಎಷ್ಟು ಲಾಭವಾಗಿದೆ?

ಬಹಳ ಓದಿದವರು ಉತ್ಸಾಹದಿಂದ, ಬಹಳ ವೆಚ್ಚ ಮಾಡಿ ಏನನ್ನೋ ಮಾಡಲು ಮುಂದಾಗುತ್ತಾರೆ. ಆದರೆ ಅದು ಯಾವ ಫಲವನ್ನೂ ಪಡೆಯಲಾಗುವುದಿಲ್ಲ. ಅಷ್ಟೇನೂ ಓದದವರು, ಅದರ ಕಾಲು ಭಾಗ ವೆಚ್ಚದಲ್ಲಿ ಫಲವನ್ನು ಪಡೆಯುತ್ತಾರೆ. ಜನರ ಬಳಿ ಜ್ಞಾನವಿದೆ ಮತ್ತು ಅದನ್ನು ಬಳಸುತ್ತಾರೆ ಎಂದುಕೊಳ್ಳುತ್ತೇವೆ. ಆದರೆ ಬೇರೆ ಯಾವುದರಿಂದಲೋ ಸಾಧನೆಯಾಗುತ್ತದೆ. ಇದನ್ನು ಅದೃಷ್ಟ ಎಂದುಕೊಂಡು ಬಿಟ್ಟುಬಿಡುತ್ತೇವೆ. ಇಬ್ಬರು ವ್ಯಕ್ತಿಗಳು ಅಕ್ಕ ಪಕ್ಕ ಅಂಗಡಿಗಳನ್ನು ತೆರೆಯುತ್ತಾರೆ. ಒಂದು ಅಂಗಡಿ ಚೆನ್ನಾಗಿ ನಡೆಯುತ್ತದೆ. ಮತ್ತೊಂದರಲ್ಲಿ ವ್ಯಾಪಾರವೇ ಆಗುವುದಿಲ್ಲ.

ಈ ಪರಿಸ್ಥಿತಿಯಲ್ಲಿ ಎಲ್ಲವು ಭಾಗ್ಯ ಎನ್ನುತ್ತೇವೆ. ಇಬ್ಬರೂ ಒಂದೇ ವ್ಯಾಪಾರವನ್ನು ಮಾಡುತ್ತಿರು ತ್ತಾರೆ. ಟೊರೊಂಟೊದಲ್ಲಿ ಇದನ್ನು ಸಾಮಾನ್ಯವಾಗಿ ಕಾಣಬಹುದು. ಜನರು ಒಂದೇ ರೀತಿಯ ರೆಸ್ಟೋರೆಂಟ್​ಗಳನ್ನು ತೆರೆಯುತ್ತಾರೆ. ಒಬ್ಬರು ಚೆನ್ನಾಗಿ ಅಭಿವೃದ್ಧಿ ಹೊಂದುತ್ತಾರೆ ಮತ್ತೊಬ್ಬರು ಕೆಳಗುಂದುತ್ತಿರುತ್ತಾರೆ. ಹೀಗೇಕೆ ಆಗುತ್ತದೆ ಎಂದು ಅರ್ಥವಾಗುವುದಿಲ್ಲ. ಈ ಪರಿಸ್ಥಿತಿಗಳಲ್ಲಿ ತರ್ಕವನ್ನು ಮೀರಿರುವಂತಹ ಅಸ್ತಿತ್ವಕ್ಕೆ ನಮ್ಮ ಕಣ್ಣು ತೆರೆಯುತ್ತದೆ. ಕೇವಲ ರ್ತಾಕವಾಗಿ ಆಲೋಚಿಸಬೇಕೆಂಬುದು ನಮ್ಮ ಪರಿಪಾಠವಾಗಿ ಬಿಟ್ಟಿದೆ. ತರ್ಕ ಎಂದರೆ ನಿಮಗೀಗಾಗಲೆ ತಿಳಿದಿರುವುದರೊಡನೆ ಸಂಬಂಧ ವನ್ನು ಕಲ್ಪಿಸಿಕೊಳ್ಳುವುದು; ಅಜ್ಞಾತವಾದುದನ್ನು ಜ್ಞಾತದೊಡನೆ ಜೋಡಿಸಲೆತ್ನಿಸುವುದು. ಆದರೆ ಸತ್ಯವು ತರ್ಕದೊಡನೆ ಬೆರೆಯಬೇಕಿಲ್ಲ.

ಭಾರತದಿಂದ ಕೆನಡಾಗೆ ಅಥವಾ ಆಸ್ಟ್ರೇಲಿಯಾಗೆ ರಸ್ತೆಯ ಮೇಲೆ ಮಾತ್ರ ಪ್ರಯಾಣಿಸಿ ಸೇರುತ್ತೇನೆ ಎಂದರೆ ಸಾಧ್ಯವಿಲ್ಲ. ಎಲ್ಲವೂ ಒಂದೇ ಭೂಮಿ. ಹಡಗನ್ನೊ, ವಿಮಾನವನ್ನೊ ಏಕೆ ಹತ್ತಬೇಕು? ಎಂದು ಕೇಳಲು ಸಾಧ್ಯವಿಲ್ಲ. ಕೆಲವು ಸ್ಥಳಗಳನ್ನು ತಲುಪಲು ಹಡಗಿನಲ್ಲಿ ಹೋಗಲೇ ಬೇಕಾಗುತ್ತದೆ. ತರ್ಕವನ್ನು ಮೀರಿ, ದಡವನ್ನು ದಾಟಿ ಮತ್ತೊಂದೆಡೆಗೆ ತಲುಪಲು ಬೇಕಾದ ಹಡಗೇ ವಿಶ್ವಾಸ. ಅಗೋಚರವಾದ ನಿಯಮ ದಿಂದಾಗಿ, ಅಗೋಚರ ಶಕ್ತಿಯಾದ ಸತ್ವದಿಂದಾಗಿ ಸಾಧಿಸಲು ಸಾಧ್ಯ. ‘ಕ್ರಿಯಾಸಿದ್ಧಿಃ ಸತ್ವೆ ಭವತೆ ಮಹತಾಂ ನೋಪಕರಣೆ’ - ಯಾವುದೇ ಕಾರ್ಯದ ಸಿದ್ಧಿಯು ಸತ್ವದಿಂದಾಗುತ್ತದೆ.

ಏನನ್ನೋ ಸಾಧಿಸುವ ಸಾಧನಗಳು ನಿಮ್ಮ ಬಳಿ ಇರಬಹುದಾದರೂ ಫಲಕಾರಿಯಾಗುವುದಿಲ್ಲ. ಏಕೆ? ಸತ್ವದ ಅಭಾವದಿಂದ. ಸತ್ವ ಎಂದರೆ ಜ್ಞಾನ, ಸಾಮರಸ್ಯ ಮತ್ತು ತೀಕ್ಷ್ಣವಾದ ಬುದ್ಧಿ.ಆ ಉನ್ನತವಾದ, ಮಹಾನ್ ಬುದ್ಧಿಯೇ ಗುರು. ನಮಗೆ ತಿಳಿದಿರುವ ಬುದ್ಧಿ ತರ್ಕದೊಳಗೆ ಇರುವಂಥದ್ದು. ತರ್ಕವನ್ನು ಮೀರಿರುವಂತಹ ಬುದ್ಧಿ ಇದೆಯೆ? ಇದೆ. ಅದೇ ಗುರುತತ್ವ. ಸಾಧನೆ ಮತ್ತು ಯಶಸ್ಸು ಸತ್ವ ಎಂಬ ಶಕ್ತಿಯಿಂದಾಗುತ್ತದೆ, ಗುರು ತತ್ವದಿಂದಾಗು ತ್ತದೆ. ಭಕ್ತರು ಅದನ್ನು ಕೃಪೆ ಅಥವಾ ಗುರುಕೃಪೆ ಎನ್ನುತ್ತಾರೆ. ನೀವು ವೈಜ್ಞಾನಿಕವಾದದವರಾಗಿದ್ದರೆ, ಅದೊಂದು ಅಗೋಚರವಾದ ಶಕ್ತಿ ಎನ್ನುತ್ತೀರಿ. ಅದ್ದರಿಂದಲೇ ಮಹಾನ್ ವಿಜ್ಞಾನಿಗಳು ಸದಾ ಆಶ್ಚರ್ಯ ದಲ್ಲಿರುತ್ತಾರೆ. ತಮಗೆ ತಿಳಿದಿರುವುದು ಬಹಳ ಕಡಿಮೆ, ತಿಳಿಯದೆ ಇರುವುದು ಹೆಚ್ಚು ಹೆಚ್ಚು ಇದೆ ಎನ್ನುತ್ತಾರೆ.

ನೀವು ಹೆಚ್ಚೆಚ್ಚು ತಿಳಿದಷ್ಟು, ತಿಳಿಯದೆ ಇರುವುದು ಬೆಳೆಯುತ್ತಲೇ ಇರುತ್ತದೆ. ಆದ್ದರಿಂದ ಆಧ್ಯಾತ್ಮಿಕ ವಿಜ್ಞಾನ, ಆಧ್ಯಾತ್ಮಿಕ ಜ್ಞಾನ ಅಗೋಚರ ವಾದ, ಅಜ್ಞಾತವಾದ ವಲಯಕ್ಕೆ ಸೇರಿದಂತಹುದು. ಆ ವಲಯದಿಂದ ಬಂದಿರುವ ಗುರುವು ನಿಮಗೆ ಬೇಕೇ ಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net