ವೃದ್ಧಾಪ್ಯ ವೇತನ ಮಂಜೂರಾತಿ ಪತ್ರ ಖುದ್ದು ನೀಡಿದ ಶಾಸಕ

HUN-NOV-30-2(OLD AGE PENSION TO NAGANNA DEVADIGA)
ಹುಣಸೂರು ನಗರದ ಬೈಪಾಸ್ ರಸ್ತೆಯ ಬದಿಯಲ್ಲಿರುವ ಟೀ ಅಂಗಡಿಯ ವೃದ್ಧ ನಾಗಣ್ಣ ದೇವಾಡಿಗರಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ವೃದ್ಧಾಪ್ಯ ವೇತನದ ಮಂಜೂರಾತಿ ಪತ್ರ ನೀಡಿದರು. ನಿಂಗರಾಜ ಮಲ್ಲಾಡಿ, ಬಲ್ಲೇನಹಳ್ಳಿ ಕೆಂಪರಾಜು, ಬಸವಲಿಂಗಯ್ಯ, ಧಣಿ ಇತರರಿದ್ದರು.
Published on

ಹುಣಸೂರು: ಸಂಬಂಧಿಗಳಿಂದ ದೂರಾಗಿ ರಸ್ತೆ ಬದಿ ಟೀ ಅಂಗಡಿ ಇಟ್ಟುಕೊಂಡು ಬದುಕಿನ ಜಟಕಾಬಂಡಿ ಸಾಗಿಸುತ್ತಿದ್ದ ವೃದ್ಧನಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಆತನಿದ್ದ ಸ್ಥಳಕ್ಕೆ ಧಾವಿಸಿ ವೃದ್ಧಾಪ್ಯ ವೇತನದ ಮಂಜೂರಾತಿ ಪತ್ರ ನೀಡುವ ಮೂಲಕ ಮಾನವೀಯತೆ ತೋರಿದರು.

ಗುರುವಾರ ನಗರದ ಬೈಪಾಸ್ ರಸ್ತೆಯ ನ್ಯಾಯಾಲಯಗಳ ಸಂಕೀರ್ಣದ ಕಟ್ಟಡದ ಬಳಿಯಲ್ಲಿ ಟೀ ಅಂಗಡಿ ಇಟ್ಟುಕೊಂಡಿರುವ ನಾಗಣ್ಣ ದೇವಾಡಿಗ ಎಂಬ ವೃದ್ಧನಿಗೆ ವೃದ್ಧಾಪ್ಯ ವೇತನದ ಪತ್ರ ನೀಡಿ ಅವರ ಅಂಗಡಿಯಲ್ಲಿ ಎಲ್ಲರೊಂದಿಗೆ ಟೀ ಸವಿದರು. ಎಲ್ಲರ ಕುಶಲೋಪರಿ ವಿಚಾರಿಸಿ ಸರಳತೆ ಮೆರೆದರು.

ಈ ವೇಳೆ ಮಾತನಾಡಿದ ಶಾಸಕ ಹರೀಶ್‌ಗೌಡ, ನೊಂದವರು ತಮ್ಮ ಸಮಸ್ಯೆಯ ಪರಿಹಾರಕ್ಕಾಗಿ ನನ್ನ ಬಳಿಗೆ ಬರುವುದಕ್ಕಿಂತ ನಾನೇ ಅವರ ಬಳಿಗೆ ಹೋಗಿ ಕಷ್ಟ-ಸುಖಗಳನ್ನು ಅರಿತು ಸಮಸ್ಯೆಯ ಪರಿಹಾರಕ್ಕೆ ಯತ್ನಿಸುವುದೇ ಸರಿ ಎನ್ನುವುದು ನನ್ನ ಅನಿಸಿಕೆ. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡಬೇಕೆಂದಿದ್ದೇನೆ. ದಿಕ್ಕಿಲ್ಲದ ಇಂತಹ ವೃದ್ಧರಿಗೆ ಅವರೊಂದಿಗೆ ಎಂದಿಗೂ ನಾನಿದ್ದೇನೆ ಎಂಬ ಸಂದೇಶವನ್ನು ಈ ಮೂಲಕ ನೀಡಲು ಇಚ್ಛಿಸುತ್ತೇನೆ. ಯಾವುದೇ ಜಾತಿಯ ನೊಂದವರು, ಬಡವರು ಭಯಪಡುವ ಅಗತ್ಯವಿಲ್ಲ. ಇಂತಹ ನೊಂದ ಮನಸ್ಸುಗಳಿಗೆ ನಾನು ಪ್ರಾಮಾಣಿಕವಾಗಿ ಅವರ ನೋವುಗಳಿಗೆ ಸ್ಪಂದಿಸುವೆ ಎಂದರು.

ದಲಿತ ಸಂಘರ್ಷ ಸಮಿತಿಯ ಮುಖಂಡರಾದ ನಿಂಗರಾಜ್ ಮಲ್ಲಾಡಿ ಮತ್ತವರ ತಂಡದವರು ನಾಗಣ್ಣ ದೇವಾಡಿಗರಿಗೆ ವೃದ್ಧಾಪ್ಯ ವೇತನ ಮಂಜೂರಾತಿ ಮಾಡಿಸಿಕೊಡುವಲ್ಲಿ ಮಾನವೀಯತೆ ಮೆರೆದಿದ್ದಾರೆ. ಅವರಿಗೆ ನಾನು ತಾಲೂಕಿನ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು.

ನಿಂಗರಾಜ ಮಲ್ಲಾಡಿ ಮಾತನಾಡಿ, 70ರ ಹರೆಯದ ನಾಗಣ್ಣ ದೇವಾಡಿಗ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದರು. ಅನಾಥಪ್ರಜ್ಞೆ ಅವರಲ್ಲಿ ಕಾಡುತ್ತಿತ್ತು. ಇದೀಗ ಅವರಿಗೆ ಮನೋಧೈರ್ಯ ಬಂದಿದೆ. ಮುಂದಿನ ದಿನಗಳಲ್ಲಿ ಅವರಿಗೆ ಪಡಿತರ ಚೀಟಿ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಸಮಿತಿ ಮುಂದಾಗಲಿದೆ ಎಂದರು.

ಮುಖಂಡರಾದ ದೇವೇಂದ್ರ ಕುಳುವಾಡಿ, ಬಲ್ಲೇನಹಳ್ಳಿ ಕೆಂಪರಾಜು, ದಲಿತ ಮುಖಂಡರಾದ ಬಸವಲಿಂಗಯ್ಯ, ಸೋಮನಹಳ್ಳಿ ಕೆಂಪರಾಜು, ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net