ಋಣಮಾರ್ಗದ ಸುಖ ದುಃಖಗಳು

Kaggada Belaku vvani
Published on

ನಿನ್ನೇಳು ಬೀಳುಗಳು ನಿನ್ನ ಸೊಗ ಗೋಳುಗಳು |

ನಿನ್ನೊಬ್ಬನೋಸುಗವೇ ನಡೆವ ಯೋಜನೆಯೇಂ? ||

ಇನ್ನದೆನಿಬರೆ ಜೀವಪಾಕವದರಿಂದಹುದೊ |

ಛನ್ನವಾ ಋಣಮಾರ್ಗ - ಮಂಕುತಿಮ್ಮ ||

‘ನಿನ್ನ ಏಳು-ಬೀಳುಗಳು, ಸುಖ-ದುಃಖಗಳು ನಿನ್ನೊಬ್ಬನಿಗಾಗಿಯೇ ನಡೆವ ಯೋಜನೆಯೇನು? ಅದರಿಂದ ಇನ್ನೆಷ್ಟು ಜನರ ಜೀವಪಾಕ ಆಗಲಿದೆಯೋ ಹೇಳಲು ಅಸಾಧ್ಯ. ಆ ಋಣಮಾರ್ಗ ಮರೆಯಾಗಿದೆ’ ಎನ್ನುತ್ತದೆ ಈ ಕಗ್ಗ.

ಮನುಷ್ಯಜೀವಿತವು ಸುಂದರ ವರ್ಣಚಿತ್ರದಂತಿದೆ. ಈ ಚಿತ್ರದಲ್ಲಿ ಪ್ರತಿ ಗೆರೆ, ಬಣ್ಣ, ಚುಕ್ಕಿ ಪರಸ್ಪರ ಸಂಬಂಧಿಸಿದೆ. ಯಾವುದೋ ಒಂದರಲ್ಲಿ ಲೋಪವಿದ್ದರೂ ಪೂರ್ತಿ ಚಿತ್ರವೇ ಕಳೆಗುಂದುತ್ತದೆ. ಹುಟ್ಟಿದಾರಭ್ಯ ಜೊತೆಗೂಡುವ ಸ್ನೇಹ-ಸಂಬಂಧಗಳು ಆಕಸ್ಮಿಕವಾಗಿ ಲಭ್ಯವಾಗುವುದಲ್ಲ. ಬಾಳಹಾದಿಯಲ್ಲಿ ಪರಿಚಿತರಾದವರೆಲ್ಲ ಪೂರ್ವ ಋಣದ ಎಳೆಗಳ ಕಾರಣದಿಂದಲೇ ಎದುರಾಗುತ್ತಾರೆ. ಪ್ರೀತಿಯಂತೆಯೇ ದ್ವೇಷವೂ ಪರಸ್ಪರ ನಂಟನ್ನು ಹೊಂದಿರುತ್ತದೆ. ಅನಂತಸಾಗರದಲ್ಲಿ ಮರದ ದಿಮ್ಮಿಗಳು ಎಲ್ಲಿಂದಲೋ ಬಂದು ಒಂದಷ್ಟು ಕಾಲ ಜೊತೆಯಾಗಿದ್ದು ಮತ್ತೆ ಬೇರ್ಪಡುತ್ತವೆ. ಅಂತೆಯೇ ಜೀವನದಲ್ಲಿ ಪತಿ, ಪತ್ನಿ, ಮಕ್ಕಳು, ನೆಂಟರಿಷ್ಟರು ಪೂರ್ವ ಋಣಶೇಷವನ್ನು, ಪುಣ್ಯ-ಪಾಪದ ಬಾಧ್ಯತೆಗಳನ್ನು ಹೊಂದಿಕೊಂಡು ಒಂದಷ್ಟು ಕಾಲ ಜೊತೆಗೂಡಿರುತ್ತಾರೆ. ಋಣಶೇಷ ತೀರಿದಂದು ದೂರವಾಗುತ್ತಾರೆ. ಹೀಗೆ ಮನುಷ್ಯಜೀವಿತದ ಎಲ್ಲ ಸ್ನೇಹ-ಸಂಬಂಧಗಳಿಗೂ, ವೈರವೈಷಮ್ಯಗಳಿಗೂ ಪೂರ್ವ ಕರ್ಮ ಋಣಶೇಷವು ಕಾರಣವಾಗಿರುತ್ತದೆ. ಆದುದರಿಂದ ವ್ಯಕ್ತಿಯ ಜೀವನದ ಏಳು-ಬೀಳುಗಳು, ಸುಖ-ದುಃಖಗಳು ಅವನಿಗಷ್ಟೇ ಸಂಬಂಧಿಸಿದ್ದಲ್ಲ, ಸೀಮಿತವೂ ಅಲ್ಲ. ಈ ರೀತಿಯ ಸಂಯೋಜನೆಯ ಕಾರಣದಿಂದ ಜೀವವು ಸಂಸ್ಕಾರಗೊಳ್ಳುತ್ತದೆ.

ಒಂದೊಮ್ಮೆ ಅಪಘಾತ ಸಂಭವಿಸಿದರೆ ಹಲವರು ನೆರವಿಗೆ ಧಾವಿಸುತ್ತಾರೆ. ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಸಹಾಯ ಮಾಡುತ್ತಾರೆ. ಪ್ರಾಕೃತಿಕ ವಿಕೋಪಗಳಂತಹ ಗಂಡಾಂತರಗಳು ಘಟಿಸಿದಾಗ ಸಹಾನುಭೂತಿಯಿಂದ ಸ್ಪಂದಿಸುವವರು ಅನೇಕರಿದ್ದಾರೆ. ಅವ್ಯಕ್ತ ಋಣಶೇಷವು ಹೀಗೆ ಎಲ್ಲೋ ಹೇಗೋ ಜೋಡಿಸಲ್ಪಡುತ್ತದೆ. ಜೊತೆಗೆ ಇಂತಹ ಸಂದರ್ಭಗಳು ಬದುಕಿಗೆ ಒಂದಿಷ್ಟು ಪಾಠವನ್ನೂ ಹೇಳುತ್ತವೆ. ಬೇಸರದಿಂದ ಬಸವಳಿದು ಕುಳಿತವರೆದೆಯಲ್ಲಿ ಭರವಸೆ ತುಂಬುವುದು ಜೀವನದಲ್ಲಿ ಸಾಮಾನ್ಯ. ಈ ರೀತಿ ಬೆಸೆದುಕೊಳ್ಳುವ ಬಾಂಧವ್ಯಗಳ ಹಿಂದೆ ಋಣದ ಹಾದಿಯೊಂದು ಮರೆಯಲ್ಲಿದ್ದೇ ಕೆಲಸ ಮಾಡುತ್ತದೆ, ಅನುಬಂಧಗಳನ್ನು ಹತ್ತಿರವಾಗಿಸುತ್ತದೆ.

ಬದುಕೆಂದರೆ ಹೋರಾಟ. ಈ ನಿರಂತರ ಹೋರಾಟದಲ್ಲಿ ಜೀವವು ಪಕ್ಷವಾಗುತ್ತ ಹೋಗುತ್ತದೆ. ತನ್ನಲ್ಲಿರುವ ದೌರ್ಬಲ್ಯಗಳನ್ನು, ಕಳಚಿಕೊಂಡು ಸತ್ತಾ್ವತಿಶಯವಾಗುವುದಕ್ಕೆ ಹವಣಿಸುತ್ತದೆ. ನೋವು, ವೈಫಲ್ಯಗಳು, ಹರುಷ ಹರಸಿದ ಕ್ಷಣಗಳು ಜೀವ ಸಂಸ್ಕಾರಕ್ಕೆ ಉಪಾದಿಗಳಾಗುತ್ತವೆ. ಹಾಗಾಗಿಯೇ ಹಗೆತನವೂ ಪ್ರಾಚೀನ ಕರ್ಮವನ್ನು ಅವಲಂಬಿಸಿಯೇ ಮೂಡುತ್ತದೆ. ಒಬ್ಬನಿಗೆ ಒಳಿತಾದ ಕ್ಷಣವೇ ಇನ್ನೊಬ್ಬನಿಗೆ ಕೆಡುಕಾಗಬಹುದು. ಗೆದ್ದು ಬೀಗುವಾತನ ಬೆನ್ನ ಹಿಂದೆ ಬಿಕ್ಕಳಿಸುವ ಧ್ವನಿ ಕೇಳಬಹುದು.

ಪ್ರತಿ ವ್ಯಕ್ತಿಯೂ ಸಮಷ್ಟಿಯ ಅಂಶವೇ ಆಗಿರುವುದರಿಂದ ಆತನ ಬದುಕಿನ ಆಗುಹೋಗುಗಳು ಅವನಿಗಷ್ಟೇ ಸೇರಿಲ್ಲ. ವಿಭಿನ್ನ ಸ್ವಭಾವ, ಸಂಸ್ಕೃತಿಗಳಿಂದ ಕೂಡಿದ ವ್ಯಕ್ತಿಗಳು ಒಂದೇ ದಾರದಲ್ಲಿ ಪೋಣಿಸಲ್ಪಟ್ಟ ಬಣ್ಣದ ಮಣಿಗಳಂತೆ ಬದುಕುತ್ತಾರೆ. ಎಲ್ಲವನ್ನೂ ದಾರದೆಳೆಯೊಂದು ಬಂಧಿಸಿದೆ. ಅದು ಅಗೋಚರವಾಗಿದ್ದೇ ಜೀವೋತ್ಕರ್ಷಕ್ಕೆ ಪ್ರೇರಣೆ ನೀಡುತ್ತದೆ. ಆಗ ಗೋಳಿನ ಬಾಳಿನಲ್ಲೂ ಸಮಚಿತ್ತದಿಂದಿರುವುದು ಸಾಧ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net