

ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ವ್ಯಕ್ತಿಯೊಬ್ಬರನ್ನು ಹತ್ತಿಸಿಕೊಂಡು ಚಾಕು ತೋರಿಸಿ ಬೆದರಿಕೆ ಒಡ್ಡಿ 11 ಸಾವಿರ ರೂ. ಮತ್ತು ಮೊಬೈಲ್‌ನ್ನು ದುಷ್ಕರ್ಮಿಗಳು ದೋಚಿದ್ದಾರೆ.
ಅನ್ನಪೂಣೇಶ್ವರಿನಗರ ನಿವಾಸಿ ಆರ್.ರವೀಶ್ (45) ದರೋಡೆಗೆ ಒಳಗಾದ ವ್ಯಕ್ತಿ. ಆಗಸ್ಟ್ 15ರ ಬೆಳಗಿನ ಜಾವ 4.30ರಲ್ಲಿ ಕಗ್ಗಲಿಪುರದಲ್ಲಿ ಇರುವ ಹೋಟೆಲ್‌ಗೆ ಹೋಗುವ ಸಲುವಾಗಿ ಸುಮನಹಳ್ಳಿ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಅಲ್ಲಿಗೆ ಟಾಟಾ ಇಂಡಿಕಾ ಕಾರಿಯಲ್ಲಿ ಬಂದ ದುಷ್ಕರ್ಮಿಗಳು, ನಾಯಂಡಹಳ್ಳಿ ಎಂದು ಕೂಗಿದ್ದಾರೆ.
ಡ್ರಾಪ್ ಪಡೆಯುವ ಸಲುವಾಗಿ ರವೀಶ್, ಕಾರಿಗೆ ಹತ್ತಿದ್ದಾಗ ಚಾಲಕ ಸೇರಿ ಮೂವರು ಕುಳಿತಿದ್ದರು. ರವೀಶ್‌ನನ್ನು ಮದ್ಯದಲ್ಲಿ ಕೂರಿಸಿಕೊಂಡು ಮುಂದೆ ಸಾಗಿದ ದುಷ್ಕರ್ಮಿಗಳು, ಮಾರ್ಗಮಧ್ಯೆ ಚಾಕು ತೋರಿಸಿ ನಗದು ಮತ್ತು ಮೊಬೈಲ್ ಕಸಿದುಕೊಂಡಿದ್ದಾರೆ. ಬಳಿಕ ನಾಗರಬಾವಿ ರಿಂಗ್ ರಸ್ತೆಯಲ್ಲಿ ಸುತ್ತಾಡಿಸಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹಿಂದಿರುಗಿ ನೋಡಿದರೆ ಕಲ್ಲಿನಲ್ಲಿ ಹೊಡೆಯುವುದಾಗಿ ಬೆದರಿಕೆ ಒಡ್ಡಿ ಪರಾರಿ ಆಗಿದ್ದಾರೆ.
ನೊಂದ ರವೀಶ್, ಈ ಕುರಿತು ಅನ್ನಪೂಣೇಶ್ವರಿನಗರ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.