

ಬೆಂಗಳೂರು: ಮದ್ಯದ ಅಮಲಿನಲ್ಲಿ ರಸ್ತೆ ಬದಿ ಮಲಗಿದ್ದ ಹೋಟೆಲ್ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆಗೈದಿರುವ ಘಟನೆ ನವರಂಗ್ ಸಿಗ್ನಲ್‌ನ ನೇತ್ರಧಾಮ ಆಸ್ಪತ್ರೆಯ ಬಳಿ ಶನಿವಾರ ನಸುಕಿನಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಮೂಲದ ಸುರೇಶ್(೫೫) ಕೊಲೆಯಾದ ಹೋಟೆಲ್ ಸಿಬ್ಬಂದಿ. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಸುರೇಶ್, ಶಂಕರಮಠ ಸಮೀಪದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಮೀಪದಲ್ಲೇ ಬಾಡಿಗೆ ಕೊಠಡಿಯಲ್ಲಿ ಒಬ್ಬರೇ ವಾಸವಾಗಿದ್ದರು.ಈ ಮಧ್ಯೆ ವಿಪರಿತ ಮದ್ಯದ ಚಟ ಅಂಟಿಸಿಕೊಂಡಿದ್ದ ಸುರೇಶ್, ಅಮಲಿನಲ್ಲಿ ಎಲ್ಲೆಂದರಲ್ಲಿ ಮಲಗುತ್ತಿದ್ದರು. ಎಚ್ಚರಗೊಂಡ ಬಳಿಕ ಕೊಠಡಿಗೆ ತೆರಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಕೂಡ ಕಂಠಪೂರ್ತಿ ಮದ್ಯ ಸೇವಿಸಿದ ಸುರೇಶ್, ನವರಂಗ್ ಸಿಗ್ನಲ್ ಬಳಿಯ ನೇತ್ರಧಾಮ ಆಸ್ಪತ್ರೆ ಮುಂಭಾಗದ ಮಲಗಿದ್ದರು. ಈ ವೇಳೆ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಕತ್ತು ಎತ್ತಿಹಾಕಿ ಹತ್ಯೆಗೈದು ಪರಾರಿಯಾಗಿದ್ದಾರೆ. ಶನಿವಾರ ಮುಂಜಾನೆ ೩ ಗಂಟೆ ಸುಮಾರಿಗೆ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕೃತ್ಯಕ್ಕೆ ಕಾರಣವೇನು ಹಾಗೂ ಆರೋಪಿಗಳು ಯಾರೆಂಬುದು ಸದಯಕ್ಕೆ ಗೊತ್ತಾಗಿಲ್ಲ. ಘಟನಾ ಸ್ಥಳ ಸಮೀಪದಲ್ಲಿರುವ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.