

ಕೋಲಾರ: ಅಧಿಕಾರಿಗಳು ಸೊಂಬೇರಿತನ ಬಿಟ್ಟು ಅಭಿವೃದ್ಧಿ ಕೆಲಸದತ್ತ ಗಮನಕೊಡಿ. ಈವರೆಗೂ ಯಾರೊಬ್ಬರೂ ಅಭಿವೃದ್ಧಿ ವಿಚಾರವಾಗಿ ಚರ್ಚಿಸಲು ನನ್ನ ಬಳಿಗೆ ಬಂದಿಲ್ಲ ಏಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ಜಿ.ಪಂ. ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಸಭೆ ಆರಂಭದಲ್ಲಿ, ಆಗಬೇಕಿರುವ ಕೆಲಸಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲಾ, ರಾಜ್ಯ ಹಂತದಲ್ಲಿ ಕಡತ ಬಾಕಿ ಇದೆ ಎಂದು ಅಧಿಕಾರಿಗಳು ತಿಳಿಸಿದಾಗ ಗರಂ ಆದ ಸಚಿವರು, ಸಭೆಗೆ ಬಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಬಾಕಿ ಇದೆ ಎಂದರೆ ಏನರ್ಥ?, ಇದರಿಂದ ನಿಮ್ಮ ಇಲಾಖೆ ಪ್ರಗತಿ ಸಾಧನೆಯಾಗಿಲ್ಲ ಎಂದ ಅವರು, ಸಾರ್ವಜನಿಕರ ಕೆಲಸಗಳ ಬಗ್ಗೆ ಯಾವ ಅಧಿಕಾರಿಗೂ ಗಂಭೀರತೆಯಿಲ್ಲದAತಾಗಿದೆ. ಕೇವಲ ಪತ್ರ ಕೊಡು, ಶಿಷ್ಟಾಚಾರಕ್ಕೆ ಆಹ್ವಾನ ಪತ್ರಿಕೆ ಕೊಡುವುದೇ ಕೆಲಸ ಆಗ್ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವೇನು ಕಾಟಾಚಾರಕ್ಕೆ ಸಭೆ ನಡೆಸುತ್ತಿಲ್ಲ. ಏನಾದರೂ ಸಮಸ್ಯೆ ಆದರೆ ಜನ ಮೊದಲು ಪ್ರಶ್ನೆ ಮಾಡೊದು ಎಂಎಲ್‌ಎ, ಎಂಎಲ್ಸಿ ಮತ್ತು ಸಚಿವರನ್ನು. ಇಡೀ ರಾಜ್ಯದ ಅಧಿಕಾರಿಗಳು ನನ್ನನ್ನು ಸೇರಿ ಇತರ ಸಚಿವರನ್ನು ಭೇಟಿಯಾಗಲು ಬರುತ್ತಾರೆ. ಇಲ್ಲಿನ ಅಧೀಕಾರಿಗಳು ಕೆಡಿಪಿಗೆ ಸಿಮಿತವಾಗಿದ್ದರೆ ಏನು ಪ್ರಯೋಜನ? ನಮ್ಮ ಪಿಎಗೆ ಕಾಲ್ ಮಾಡಿಕೊಂಡು ಬನ್ನಿ, ಸಮಸ್ಯೆ ಹೇಳಿಕೊಂಡರೆ ಮಾತ್ರ ಕೆಲಸಗಳು ಆಗಲು ಸಾಧ್ಯ ಎಂದರು.
ಮಧ್ಯಪ್ರವೇಶ ಮಾಡಿದ ಸಂಸದ ಎಂ.ಮಲ್ಲೇಶ್‌ಬಾಬು, ಜಿಲ್ಲೆಯ ಅಧಿಕಾರಿಗಳಿಗೆ ಸಮಸ್ಯೆ ಏನು ಎಂಬುದು ಅರ್ಥವಾಗುತ್ತಿಲ್ಲ. ಯಾರೊಬ್ಬರು ನಮ್ಮ ಬಳಿಗೂ ಬರುವುದಿಲ್ಲ. ಜಿಲ್ಲಾಧಿಕಾರಿ ಅಧಿಕಾರಿಗಳನ್ನು ಹಿಡಿತಕ್ಕೆ ತೆಗೆದುಕೊಳ್ಳದಿದ್ದರೆ ಕಷ್ಟ ಎಂದು ಎಚ್ಚರಿಸಿದರು.
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಅಽಕಾರಿಗಳು ಕಚೇರಿ ಬಿಟ್ಟು ಹೊರಬರದಿದ್ದರೆ ಸಮಸ್ಯೆಗಳು ಅರ್ಥವಾಗುವುದಿಲ್ಲ. ಈಗಲೇ ರಾಗಿ ಬೆಳೆ ಒಣಗಿ ಹೋಗಿದೆ. ಕೂಡಲೇ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಕಳುಹಿಸಿಕೊಡಿ ಎಂದರು. ಇದಕ್ಕೆ ಧ್ವನಿಗೂಡಿಸಿದ ಸಚಿವ, ಪರಿಹಾರ ಕೊಡಲು ಮಾನದಂಡ ಪಾಲನೆ ಮಾಡಬೇಕು ಎಂದು ಸೂಚಿಸಿದರು.
ಎಂಎಲ್ಸಿ ನಜೀರ್ ಅಹ್ಮದ್, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಚ್.ಎಂ.ರೇವಣ್ಣ, ಜಿಲ್ಲಾಽಕಾರಿ ಅಕ್ರಂಪಾಷಾ, ಕೋಲಾರ ಎಸ್ಪಿ ಬಿ.ನಿಖಿಲ್, ಕೆಜಿಎಫ್ ಎಸ್ಪಿ ಶಾಂತಕುಮಾರ್, ಡಿಸಿಎಫ್ ಏಡುಕೊಂಡಲು ಹಾಜರಿದ್ದರು.
ಮಕ್ಕಳಿಗೆ ಮೊಟ್ಟೆ ಕೊಡದಿದ್ದರೆ ಜೈಲಿಗೆ ಹಾಕಿ
ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಸರಬರಾಜು ಪೂರೈಕೆ ಜತೆಗೆ ಮೊಟ್ಟೆ ಕೊಡುತ್ತಿಲ್ಲ. ಈ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ವರದಿ ನೀಡಿದ್ದಾರೆ ಎಂದು ಬೈರತಿ ಸುರೇಶ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾರಾಯಣಸ್ವಾಮಿ, ಹಕ್ಕಿ-ಪಿಕ್ಕಿ ಕಾಲನಿ ಕಾರ್ಯಕರ್ತೆ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡದಿರುವ ಬಗ್ಗೆ ಗಮನಕ್ಕೆ ಬಂದ ಕೂಡಲೇ ಅಮಾನತು ಮಾಡಲಾಗಿದೆ. ಇನ್ನು ರಾಜ್ಯಮಟ್ಟದಲ್ಲೇ ಆಹಾರ ಸರಬರಾಜು ಮಾಡಲು ಟೆಂಡರ್ ಆಗಿದ್ದು, ಗುಣಮಟ್ಟ ಪರಿಶೀಲಿಸಿಯೇ ಮಕ್ಕಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಕೊತ್ತೂರು ಜಿ.ಮಂಜುನಾಥ್, ಕೆ.ವೈ.ನಂಜೇಗೌಡ, ರಾಜ್ಯಮಟ್ಟದಲ್ಲಿ ಟೆಂಡರ್ ಆಗಿದೆ, ಕಳಪೆ ಆಹಾರ ಸರಬರಾಜು ಆಗುತ್ತಿರುವ ಬಗ್ಗೆ ದೂರು ಬಂದಿದ್ದು, ಯಾರನ್ನು ಪ್ರಶ್ನೆ ಮಾಡಬೇಕು ಎಂಬುದು ತಿಳಿಯುತ್ತಿಲ್ಲ ಎಂದರು. ಈ ಬಗ್ಗೆ ಸಿಎಂ ಬಳಿ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಬೈರತಿ ಸುರೇಶ್ ಭರವಸೆ ನೀಡಿದರು.
ದಾಖಲಾತಿ ಕುಸಿತಕ್ಕೆ ಆಕ್ರೋಶ
ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿದಿದೆ, ಸಾಕಷ್ಟು ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ತುರಹಳ್ಳಿ ಶಾಲೆಗೆ ಬೀಗ ಹಾಕಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು. ಧ್ವನಿಗೂಡಿಸಿದ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ೬ನೇ ಸ್ಥಾನದಿಂದ 20ನೇ ಸ್ಥಾನಕ್ಕೆ ಕುಸಿದಿದೆ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಡಿಸಿಸಿಪಿಐ ಕೃಷ್ಣಮೂರ್ತಿ, ದಾಖಲಾತಿ ಹೆಚ್ಚಿಸಲು ಪ್ರತಿ ಕ್ಲಸ್ಟರ್‌ಮಟ್ಟದಲ್ಲಿ ದಾಖಲಾತಿ ಆಂದೋಲನ ನಡೆಸಲಾಗಿತ್ತು. ಆದರೆ ಶೇ.೪ ದಾಖಲಾತಿ ಕುಸಿದಿದೆ ಎಂದು ತಿಳಿಸಿದರು.
ಖಾಸಗಿ ಬಸ್‌ಗಳ ಸಂಚಾರ ಅನಽಕೃತ
ಆಂಧ್ರದಿAದ ಕೋಲಾರ ಮೂಲಕ ಬೆಂಗಳೂರಿಗೆ ಅನಽಕೃತವಾಗಿ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಗ್ರಾಮೀಣ ಭಾಗದಿಂದ ಓಡಾಡಲು ಅನುಮತಿ ಪಡೆದುಕೊಂಡು, ಹೆದ್ದಾರಿ ಮೂಲಕ ಹೋಗುತ್ತಾರೆ. ಈ ಬಗ್ಗೆ ಅಽಕಾರಿಗಳ ಗಮನಕ್ಕೆ ತಂದರೂ ಕ್ರಮ ಆಗಿಲ್ಲ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ದೂರಿದರು. ಈ ಬಗ್ಗೆ ಪರಿಶೀಲನೆ ಮಾಡಿ, ಅಕ್ರಮ ಕಂಡು ಬಂದ ಕೂಡಲೇ ಪರವಾನಿಗೆ ರದ್ದುಗೊಳಿಸಬೇಕು ಎಂದು ಸಚಿವರು ಡಿಸಿಗೆ ಸೂಚಿಸಿದರು.
ಸಿಎಲ್-7ಗೆ ಅನುಮತಿ ಬೇಡ
ಜಿಲ್ಲೆಯಲ್ಲಿ ಸಿಎಲ್- ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಅನುಮತಿ ನೀಡುತ್ತಿರುವ ಬಗ್ಗೆ ಶಾಸಕರು ಸಭೆಯ ಗಮನಕ್ಕೆ ತಂದರು. ಸಿಎಲ್-7 ಬಾರ್‌ಗಳಿಗೆ ಲೈಸನ್ಸ್ ಕೊಡುವುದನ್ನು ನಿಲ್ಲಿಸಬೇಕು, 8 ತಿಂಗಳಿAದ ಲೈಸನ್ಸ್ ನೀಡಿರುವ ಬಗ್ಗೆ ಪಟ್ಟಿ ಕೇಳಲಾಗಿದ್ದು, ಇದರಲ್ಲಿ ಅನಽಕೃತವಾಗಿ ಅನುಮತಿ ನೀಡಿರುವುದು ಕಂಡು ಬಂದರೆ ಅಂತಹ ಲೈಸನ್ಸ್ ರದ್ದುಗೊಳಿಸಬೇಕು ಎಂದರು.
ನರ್ಸರಿಗಳ ವಿರುದ್ಧ ಕ್ರಮ
ಜಿಲ್ಲೆಯಲ್ಲಿ ಮುಂಗಾರು ಶೇ.97 ಬಿತ್ತನೆಯಾಗಿದ್ದು, ಕಳೆದ ೩ ವಾರಗಳಿಂದ ಮಳೆ ಕೊರತೆಯಿಂದ ರಾಗಿ ಸೇರಿ ಇತರ ಬೆಳೆಗಳು ಒಣಗುತ್ತಿವೆ. ಮುಂದಿನ ವಾರದಿಂದ ಸರ್ವೇ ಮಾಡಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಪರಿಹಾರ ಬಿಡುಗಡೆಯಾದ ನಂತರ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅಡಿ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಂ.ಆರ್.ಸುಮಾ ತಿಳಿಸಿದರು.