ಜಡತ್ವ ಬಿಟ್ಟು ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಸಚಿವ

education
Published on

ಬೆಂಗಳೂರು ಸಾರ್ವಜನಿಕರು ಕಡತಗಳ ಹಿಂದೆ ಸುತ್ತುವ ಕಾರ್ಯಕ್ಕೆ ತೆರೆ ಎಳೆಯಿರಿ. ತ್ವರಿತಗತಿಯಲ್ಲಿ ಕಡತಗಳನ್ನು ವಿಲೇವಾರಿ ಮಾಡಿ ಸಾರ್ವಜನಿಕರ ಅಲೆದಾಟ ತಪ್ಪಿಸಬೇಕು. ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಕಡತ ವಿಲೇವಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸದಿದ್ದರೆ, ಇಲಾಖೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.

ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಮಂಗಳವಾರ ತಾಂತ್ರಿಕ ಶಿಕ್ಷಣ, ಕಾಲೇಜು ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ವಿಶ್ವವಿದ್ಯಾಲಯದ ಕುಲಸಚಿವರ ಸಭೆಯಲ್ಲಿ ಅವರು ಮಾತನಾಡಿದರು.

ಸಿಬ್ಬಂದಿ ಮತ್ತು ಅಧಿಕಾರಿಗಳು ಜಡತ್ವ ಬಿಟ್ಟು ಹೊಣೆಗಾರಿಕೆ, ಪಾರದರ್ಶಕತೆ, ಉತ್ತರದಾಯಿತ್ವದಲ್ಲಿ ಕರ್ತವ್ಯ ನಿರ್ವಹಿಸಬೇಕು. ಸಚಿವರ ಕಚೇರಿಯಿಂದ ಕಡತಗಳು ಸಚಿವಾಲಯಕ್ಕೆ ಬಂದರೂ ಅಲ್ಲಿಂದ ಆದೇಶ ಹೊರಡಿಸಲು ತಡ ಮಾಡುವ ಅವಶ್ಯಕತೆ ಏನಿದೇ? ಎಂದು ಪ್ರಶ್ನಿಸಿದರು.

ಪ್ಲೇಸ್‌ಮೆಂಟ್ ಅಧಿಕಾರಿಗಳನ್ನು ನೇಮಿಸಿ: ಪಾಲಿಟೆಕ್ನಿಕ್ ಪರೀಕ್ಷೆ ನಡೆಯುವ ವೇಳೆ ಕೇಂದ್ರೀಕೃತ ಸಿ.ಸಿ.ಟಿ.ವಿ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳ ವೃತ್ತಿಭವಿಷ್ಯದ ದೃಷ್ಠಿಯಿಂದ ಪ್ಲೇಸ್‌ಮೆಂಟ್ ಅಧಿಕಾರಿಯನ್ನು ನೇಮಿಸಿ, ವಿವಿಧ ಕಂಪನಿಗಳೊಂದಿಗೆ ನಿಕಟ ಸಂಪರ್ಕ ಹೊಂದುವಂತೆ ಮಾಡಬೇಕು ಎಂದರು.

ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಜಗದೀಶ್ ಸೇರಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net