ಮನಸ್ಸೇ ಹೀಗೆ

1-6824d1a5b13de
Published on
ಸ್ವಾಮೀ ಚಿನ್ಮಯಾನಂದರು ಬಹಳ ಸುಂದರವಾದ ಒಂದು ಕಥೆಯನ್ನು ಹೇಳುತ್ತಿದ್ದರು. ಒಂದು ಊರಿನಲ್ಲಿ ಕಾಲಿಲ್ಲದ ಒಬ್ಬ ವಾಸಿಸುತ್ತಿದ್ದ. ಆತ ಪ್ರತಿನಿತ್ಯವೂ ಎರಡು ಮರದ ಕೋಲುಗಳ ಸಹಾಯದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ತನ್ನ ಕೆಲಸಕ್ಕೆ ನಡೆದುಹೋಗುತ್ತಿದ್ದ. ಆತನಿಗೆ ಬಹಳ ಬಡತನವಿತ್ತು. ಈತನನ್ನು ಕಂಡ ಒಬ್ಬ ಉದಾರ ಹೃದಯಿ ಮೂರು ಚಕ್ರದ ಒಂದು ಸೈಕಲ್ ದಾನವಾಗಿ ಕೊಟ್ಟ. ಆ ಕಾಲಿಲ್ಲದ ವ್ಯಕ್ತಿಗೆ ಸ್ವರ್ಗವೇ ಭೂಮಿಗಿಳಿದಂತಿತ್ತು.

ದಾನ ನೀಡಿದ ವ್ಯಕ್ತಿಗೆ ‘ಸ್ವಾಮೀ ನೀವೇ ದೇವರು, ನನ್ನ ಕಷ್ಟವನ್ನು ಅರಿತು ಸಹಾಯ ಮಾಡಿರುವಿರಿ’ ಎಂದು ಹೇಳಿ ವಂದಿಸಿದ. ಈಗ ಪ್ರತಿನಿತ್ಯವು ಮೂರು ಚಕ್ರದ ಸೈಕಲ್ಲಿನಲ್ಲಿ ಕುಳಿತು ಕೈಗಳ ಸಹಾಯದಿಂದ ಗಾಲಿಯನ್ನು ತಿರುವುತ್ತಾ ತನ್ನ ಕೆಲಸಕ್ಕೆ ಸಾಗುತ್ತಿದ್ದ. ಹೀಗೆ ಒಂದೆರಡು ವರ್ಷ ಕಳೆಯಿತು. ಸೈಕಲ್ ದಾನ ಮಾಡಿದ್ದ ವ್ಯಕ್ತಿ ಕಾಲಿಲ್ಲದವನನ್ನು ಒಮ್ಮೆ ಕಂಡು ನೆಮ್ಮದಿಯಿಂದ ಇರುವೆಯಾ ಎಂದು ಪ್ರಶ್ನಿಸಿದ. ಆಗ ಆತ ‘ಏನು ಹೇಳಲಿ ಸ್ವಾಮಿ? ಮೊದಲೇ ಕಾಲಿಲ್ಲ. ಈ ಕೈಗಳು ದಿನನಿತ್ಯ ಗಾಲಿಯನ್ನು ತಿರುಗಿಸಿ ತಿರುಗಿಸಿ ನಿಶ್ಶಕ್ತಿಯಿಂದ ಬಳಲುತ್ತಿವೆ. ತಾವು ಮನಸ್ಸುಮಾಡಿ ನನಗೆ ಮೂರು ಚಕ್ರದ ಸ್ಕೂಟರ್ ಕೊಡಿಸಿದರೆ ಮಹದುಪಕಾರವಾಗುತ್ತದೆ’ ಎಂದು ಬೇಡಿಕೊಂಡ.

ದಾನಿಯ ಹೃದಯ ಮಿಡಿಯಿತು. ತನ್ನ ಸ್ನೇಹಿತರ ಸಹಾಯ ಹಾಗೂ ತನ್ನ ಸ್ವಂತ ಹಣವನ್ನು ಸೇರಿಸಿ ಒಂದು ಮೂರು ಚಕ್ರದ ಸ್ಕೂಟರ್ ಕೊಡಿಸಿದ. ಕಾಲಿಲ್ಲದ ವ್ಯಕ್ತಿ ಬಹಳ ಸಂತೋಷಪಟ್ಟ. ಕೇವಲ ತನ್ನ ಬಲಗೈಯಿಂದ ಆಕ್ಸಲೇಟರ್ ಕೊಟ್ಟರು ಗಾಡಿ ಮುಂದೆ ಸಾಗುತ್ತಿತ್ತು. ಕಾಲಚಕ್ರ ಮುಂದೆ ಸಾಗಿತು. ಐದಾರು ವರ್ಷಗಳ ನಂತರ ಕಾಲಿಲ್ಲದ ವ್ಯಕ್ತಿ ಮೊದಲಿನಂತೆ ನಿರಾಶೆಯಿಂದ ಇರುವುದು ಕಂಡುಬಂತು. ಯಾರಾದರೂ ಆತನನ್ನು ಕೇಳಿದರೆ ಆತ ಸೂರ್ಯನ ಬಿಸಿಲು ಜಾಸ್ತಿ, ಮಳೆಯ ತೊಂದರೆ, ಹೆಚ್ಚು ಚಳಿ ಹೀಗೆ ಹಲವಾರು ಅನಾನುಕೂಲಗಳ ಕಾರಣಗಳನ್ನು ಕೊಡುತ್ತಿದ್ದ. ನಮ್ಮ ಮನಸ್ಸೇ ಹೀಗೆ. ಇರುವುದನ್ನು ಮರೆತು ಇಲ್ಲದ್ದನ್ನು ನೆನೆದು ದುಃಖಿಸುತ್ತಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net