

ಬೆಟ್ಟದಪುರ: ಸಮೀಪದ ಕುಡುಕೂರು ಕೊಪ್ಪಲು ಬಳಿಯ ತಿರುವಿನಲ್ಲಿ ಸೋಮವಾರ ಚಾಲಕನ ನಿಯಂತ್ರಣ ತಪ್ಪಿದ ನಂದಿನಿ ಹಾಲಿನ ಲಾರಿ ಪಲ್ಟಿಯಾಗಿ 15 ಸಾವಿರ ಲೀಟರ್ ಹಾಲು ಮಣ್ಣು ಪಾಲಾಗಿದೆ.
ಈ ವ್ಯಾಪ್ತಿಯ ವಿವಿಧ ಹಾಲು ಶೀಥಲೀಕರಣ ಕೇಂದ್ರಗಳಲ್ಲಿ ಸಂಗ್ರಹಿಸಿದ್ದ ಹಾಲು ತುಂಬಿಸಿಕೊಡು ಬೆಟ್ಟದತುಂಗ ಮಾರ್ಗವಾಗಿ ಹುಣಸೂರಿಗೆ ಹೋಗುತ್ತಿದ್ದಾಗ ಕುಡುಕೂರು ಕೊಪ್ಪಲು ಬಳಿ ಘಟನೆ ಸಂಭವಿಸಿದೆ. ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಮುಲ್ ವಿಸ್ತರಣಾಧಿಕಾರಿ ಸತೀಶ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
‘ಲಾರಿ ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಮಗುಚಿ ಬಿದ್ದಿದ್ದರಿಂದ 15 ಸಾವಿರ ಲೀ. ಹಾಲು ವ್ಯರ್ಥವಾಗಿದೆ. ಈ ನಷ್ಟದ ವೆಚ್ಚವನ್ನು ಲಾರಿ ಕಂಪನಿಯೇ ಭರಿಸಬೇಕು. ಘಟನೆಯಿಂದ ಯಾವುದೇ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ನಷ್ಟವಾಗುವುದಿಲ್ಲ’ ಎಂದು ಸತೀಶ್ ತಿಳಿಸಿದ್ದಾರೆ.