ಶ್ರಾವಣ ಮಾಸದಲ್ಲಿ ಎಲ್ಲೆಡೆ ಮೊಳಗಿದ ಗೋವಿಂದ ಸ್ಮರಣೆ

27-kkr1(7-25
ಕಿಕ್ಕೇರಿಯಲ್ಲಿ ಮಕ್ಕಳು ಶ್ರಾವಣ ಮಾಸದ ಮೊದಲ ಶನಿವಾರ ಕೈಯಲ್ಲಿ ಚೊಂಬು ಹಿಡಿದು ಗೋವಿಂದ ಸ್ಮರಣೆ ಮಾಡುತ್ತ ಉಪದಾನ ಮಾಡಿದರು.
Published on

ಕಿಕ್ಕೇರಿ: ಹೋಬಳಿಯಾದ್ಯಂತ ಶ್ರೀಮದ್ ರಮಾರಮಣ ಗೋವಿಂದ ನಾಮ ಸ್ಮರಣೆ ಆಸ್ತಿಕರಲ್ಲಿ ಮೊಳಗಿ ಶ್ರಾವಣ ಮಾಸದ ಮೊದಲ ಶನಿವಾರದ ಪೂಜೆ ಆಧ್ಯಾತ್ಮಿಕ ಭಾವನೆ ಮೂಡಿಸಿತು.

ದಾಸಪ್ಪಧಾರಿಗಳು ಕೈಯಲ್ಲಿ ಶಂಖ, ಬುವನಾಸಿ ಹಿಡಿದು ಮನೆಮನೆಗೆ ತೆರಳಿ ದೇವರಿಗೆ ಪ್ರಿಯವಾದ ಉಪದಾನ(ಬಿಕ್ಷಾ ಕೈಂಕರ್ಯ) ಮಾಡಿದರು. ಶಂಖ, ಕಹಳೆ ಊದಿ ಗ್ರಾಮ, ಮನೆಗಳಲ್ಲಿ ಶಾಂತಿ ನೆಮ್ಮದಿ ಲಭಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

ಮಕ್ಕಳಿಗೆ ಬಲು ಸಂತಸ ನೀಡುವ ಮಾಸವಾದ ಶ್ರಾವಣ ಮಾಸದ ಶನಿವಾರ ಮಕ್ಕಳು ಕೈಯಲ್ಲಿ ಚೊಂಬು, ಲೋಟ ಹಿಡಿದು ಉಪಧನ(ಭಿಕ್ಷಾಟನೆ) ಮಾಡಿದರು. ಅಂಗಡಿ, ಬೇಕರಿ, ಮನೆಗಳಲ್ಲಿ ನೀಡಿದ ಚಾಕೊಲೇಟ್, ಕೇಕ್, ಜಿಲೇಬಿ, ಪೇಡ, ಬಿಸ್ಕತ್, ಬಾಳೆಹಣ್ಣು ತಿಂದು ಖುಷಿಪಟ್ಟರು. ಮನೆಗಳಲ್ಲಿ ಅಕ್ಕಿ, ರಾಗಿ ಹಿಟ್ಟನ್ನು ಮಹಿಳೆಯರು ಚೊಂಬು, ಲೋಟಕ್ಕೆ ಹಾಕಿ, ಮಕ್ಕಳ ಮುಖಕ್ಕೆ ಹಿಟ್ಟು ಬಳಿದು ಖುಷಿಪಟ್ಟರು.

ಹೋಬಳಿಯ ವಿಷ್ಣು ದೇಗುಲಗಳಲ್ಲಿ ಶಂಖನಾದ, ಜಾಗಟೆಗಳಿಂದ ಪೂಜಾರಾಧನೆ ನಡೆಯಿತು. ಪಟ್ಟಣದ ಕೋಟೆ ಆಂಜನೇಯ, ನರಸಿಂಹಸ್ವಾಮಿ ದೇಗುಲ, ಸಿದ್ದಾರೂಢಸ್ವಾಮಿ ಮಠ, ಮಾದಾಪುರ, ತೆಂಗಿನಘಟ್ಟ, ಮಂದಗೆರೆ, ಗದ್ದೆಹೊಸೂರು, ಕಾಳೇನಹಳ್ಳಿ, ಆನೆಗೊಳ ಆಂಜನೇಯ ದೇಗುಲ, ಗದ್ದೆಹೊಸೂರು ಅಭಯ ವೆಂಕಟೇಶ್ವರ, ಗೂಡೆಹೊಸಹಳ್ಳಿ ಶ್ರೀನಿವಾಸ, ಬೋಳಮಾರನಹಳ್ಳಿ, ಚಿಕ್ಕಳಲೆ ಲಕ್ಷ್ಮೀನರಸಿಂಹಸ್ವಾಮಿ, ಕೃಷ್ಣಾಪುರ ಚಲುವನಾರಾಯಣಸ್ವಾಮಿ ದೇಗುಲ, ಗೊಲ್ಲರಕೊಪ್ಪಲು ಅಂಗರತಿಮ್ಮಪ್ಪ ಸೇರಿದಂತೆ ವಿವಿಧೆಡೆ ವಿಜೃಂಭಣೆಯಿಂದ ಪೂಜೆಗಳು ಜರುಗಿದವು. ವಿಷ್ಣು ದೇಗುಲಗಳಲ್ಲಿ ದೇವರಿಗೆ ವಿಶೇಷವಾಗಿ ಪುಷ್ಪ, ವಸ್ತ್ರಾಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net