ಪೌರಾಯುಕ್ತೆ ಅಸಮಾಧಾನಕ್ಕೆ ಸಭೆ ಬಲಿ; ಕೈಕೈ ಮಿಲಾಯಿಸಿದ ನಗರಸಭೆ ಸದಸ್ಯರು

ಕೋಲಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯೆ&ಪೌರಾಯುಕ್ತೆ ಎದುರು ವಾಗ್ದಾಳಿ ನಡೆಸಿದ ಸದಸ್ಯರು.
ಕೋಲಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯೆ&ಪೌರಾಯುಕ್ತೆ ಎದುರು ವಾಗ್ದಾಳಿ ನಡೆಸಿದ ಸದಸ್ಯರು.
Published on

ಕೋಲಾರ: ಏಕವಚನ ಪ್ರಯೋಗ, ಕೈ ಕೈ ಮಿಲಾಯಿಸಿದ ಸದಸ್ಯರು, ಮೌನವಹಿಸಿದ ಆಯುಕ್ತೆ&ಅಧ್ಯಕ್ಷೆ ವಿರುದ್ಧ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ... ಇವು ಮಂಗಳವಾರ ನಗರಸಭೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ನಡೆದ ಪ್ರಮುಖ ಘಟನಾವಳಿಗಳು.

ಅಧ್ಯಕ್ಷೆ ಶ್ವೇತಾ ಶಬರೀಶ್​ ಮತ್ತು ಪೌರಾಯುಕ್ತೆ ಬಿ.ಎಸ್​. ಸುಮಾ ನಡುವೆ ನೀನಾ&ನಾನಾ ಎಂದು ಜಟಾಪಟಿ ನಡೆಯುತ್ತಿದ್ದು, ಇಬ್ಬರ ಮೌನವ್ರತಕ್ಕೆ ಸಭೆ ಬಲಿಯಾಯಿತು. ರಸ್ತೆ ಗುಂಡಿಗಳನ್ನು ಮುಚ್ಚಲು 15 ಲಕ್ಷ ರೂಪಾಯಿಗೆ ಟೆಂಡರ್​ ಆಗಿದ್ದು, ಕಾರ್ಯಾದೇಶಕ್ಕೆ ಒಪ್ಪಿಗೆ ನೀಡಬೇಕಿದ್ದರೂ ಸಭೆಯಲ್ಲಿ ಸದಸ್ಯರು ಸಭೆಗೆ ಸರಿಯಾಗಿ ಆಹ್ವಾನಿಸಿಲ್ಲ ಎಂದು ಖ್ಯಾತೆ ತೆಗೆದು ಪೌರಾಯುಕ್ತೆ -ಅಧ್ಯಕ್ಷೆ ಪರ ನಿಂತು ಜಂಗೀಕುಸ್ತಿ ನಡೆಸಿದರು.

ಚುನಾವಣೆ ಹತ್ತಿರ ಬರುತ್ತಿರುವುದರಿಂದ ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​, ಎಸ್​ಡಿಪಿಐ ಮತ್ತು ನಾಮನಿರ್ದೇಶಿತ ಸದಸ್ಯರು ಪರಸ್ಪರ ಏರುದ್ವನಿ ಮತ್ತು ಏಕವಚನದಲ್ಲಿ ನಿಂದಿಸಿಕೊಳ್ಳುವ ಮೂಲಕ ಯಾರನ್ನೋ ಮೆಚ್ಚಿಸಲು, ಮತ್ತಿನ್ಯಾರನ್ನೋ ನಿಂದಿಸಲು ವೇದಿಕೆಯನ್ನಾಗಿ ಬಳಸಿಕೊಂಡರು.

15 ಮಂದಿಗೆ ಮಾತ್ರ ಆಹ್ವಾನ: ಸಭೆ ಕರೆಯುವುದಕ್ಕೂ ಮುನ್ನ ಆಯಾ ವಾರ್ಡ್​ಗಳಲ್ಲಿನ ಒಂದೆರಡು ಪ್ರಮುಖ ಸಮಸ್ಯೆ ಕುರಿತು ಕೇಳುವುದು ಸಂಪ್ರದಾಯ. ಆದರೆ ಈ ಬಾರಿ ಹಾಗಾಗಿಲ್ಲ. ಇನ್ನು 40 ಸದಸ್ಯರ ಪೈಕಿ 15 ಮಂದಿಗೆ ಮಾತ್ರ ದೂರವಾಣಿ ಮುಖೇನ ಸಭೆಗೆ ಆಹ್ವಾನಿಸಲಾಗಿದೆ. ಉಳಿದವರಿಗೆ ಕನಿಷ್ಠ ಆಹ್ವಾನವನ್ನೂ ಕಳುಹಿಸಿಲ್ಲ. ಹೀಗಾದರೆ ನಗರದ ಅಭಿವೃದ್ಧಿಯಾಗುವುದು ಹೇಗೆ? ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು? ಜನರಿಗೆ ಉತ್ತರ ಕೊಡುವುದು ಹೇಗೆ ಎಂದು ಸೈಯದ್​ ಸಮೀಉಲ್ಲಾ, ಅಪೂರ್ವಾ, ಫೈರೋಜ್​, ನಾಸಿಯಾ, ಬಾಬ್​ಜಾನ್​, ಸುರೇಶ್​ ಬಾಬು, ಮಂಜುನಾಥ್​, ಮೊಹಮ್ಮದ್​ ಖಾಜಾ, ಅಂಬರೀಶ್​ ಮತ್ತಿತರರು ಪೌರಾಯುಕ್ತೆ ಬಿ.ಎಸ್​. ಸುಮಾ ಅವರನ್ನು ಪ್ರಶ್ನಿಸಿದರು.

ಸದಸ್ಯರ ಪ್ರಶ್ನೆಗೆ ಉತ್ತರಿಸುವಂತೆ ಅಧ್ಯಕ್ಷೆ ಶ್ವೇತಾ ಶಬರೀಶ್​ ಪೌರಾಯುಕ್ತೆ ಬಿ. ಎಸ್​. ಸುಮಾ ಅವರನ್ನು ಕೋರಿದರು.

ಆದರೆ ಇದಕ್ಕೆ ಆಯುಕ್ತೆ ಸುಮಾ ಯಾವುದೇ ಉತ್ತರ ಕೊಡಲು ಹೋಗದಿದ್ದಾಗ, ಸಭೆಯ ನಡಾವಳಿಗಳನ್ನು ರೆಕಾರ್ಡ್​ ಮಾಡುತ್ತಿದ್ದ ಸಿಬ್ಬಂದಿ ನಟರಾಜ್​ ಅವರನ್ನು ನೀವಾದರೂ ಉತ್ತರಿಸಿ ಎಂದರು.

ಅವರಿಂದಲೂ ಉತ್ತರ ಬಾರದಿದ್ದಾಗ ಕುಪಿತರಾದ ಸದಸ್ಯರು ಸಭೆಯ ಮುಂಭಾಗಕ್ಕೆ ಆಗಮಿಸಿ ಧರಣಿ ಕುಳಿತರು. ಆಗ ಸೈಯದ್​ ಸಮೀಉಲ್ಲಾ, ಅಂಬರೀಶ್​, ಎಂ.ಸುರೇಶ್​ ಬಾಬು ಮತ್ತಿತರರು ಪೌರಾಯುಕ್ತೆ ಸುಮಾರತ್ತ ನುಗ್ಗಿ ಬಂದು ನಿಂದಿಸಲು ಶುರುಮಾಡಿದರು.

ಕೂಡಲೇ ಮಧ್ಯೆ ಪ್ರವೇಶಿಸಿದ ಮುರಳಿಗೌಡ, ಪ್ರಸಾದ್​ ಬಾಬು, ಪ್ರವಿಣ್​ಗೌಡ ಎಲ್ಲರನ್ನೂ ಸಮಾಧಾನಪಡಿಸಲು ಯತ್ನಿಸಿದರಾದರೂ ಆಯುಕ್ತರ ಮೇಲಿನ ವಾಗ್ಧಾಳಿ ನಿಲ್ಲಲಿಲ್ಲ. ಇದರ ನಡುವೆ ನಾಮನಿರ್ದೇಶಿತ ಸದಸ್ಯರಾದ ರಾಜೇಶ್​, ಸುರೇಶ್​, ಸತೀಶ್​, ವೆಂಕಟರಾಜು, ಗೋವಿಂದರಾಜು ಎದ್ದು ನಿಂತು ಸಭೆ ನಡೆಸಲು ಅವಕಾಶ ನೀಡಿ ಎಂದಿದ್ದಕ್ಕೆ ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರು ಕೆರಳಿ ಕೆಂಡವಾಗಿ "ನಿಮಗೆ ಹೇಳುವ ಹಕ್ಕಿಲ್ಲ' ಎಂದರು. ಬಳಿಕ ಎರಡೂ ಕಡೆಯವರು ಆಯುಕ್ತೆ, ಅಧ್ಯಕ್ಷೆ ಕುಳಿತಿದ್ದ ಕಡೆ ತೆರಳಿ ಏಕವಚನದಲ್ಲಿ ಪರಸ್ಪರ ನಿಂದಿಸಿಕೊಂಡರು. ಒಂದು ಹಂತದಲ್ಲಿ ಕೈ ಕೈ ಮಿಲಾಯಿಸಿದರು. "ಹೆದರಲ್ಲ, ನೋಡೇ ಬಿಡುವ ಬಾ' ಎಂಬ ಪಂಥಾಹ್ವಾನವನ್ನೂ ಕೊಟ್ಟರು.

ಈ ವಿದ್ಯಮಾನಗಳಿಂದ ವಿಚಲಿತರಾದಂತೆ ಕಂಡುಬಂದ ಪೌರಾಯುಕ್ತೆ ಸುಮಾ ಸಭೆಯಿಂದ ಹೊರನಡೆದು ತಮ್ಮ ಕೊಠಡಿ ಸೇರಿಕೊಂಡರು. ಪೌರಾಯುಕ್ತೆ ಮನವೊಲಿಸಿ ಕರೆತರುವ ಯತ್ನವನ್ನು ಸದಸ್ಯ ಮುರಳಿಗೌಡ ಮತ್ತಿತರರು ನಡೆಸಿದರಾದರೂ ಫಲಿಸಲಿಲ್ಲ. ಇದೇ ವೇಳೆ ಅಧ್ಯಕ್ಷೆ ಶ್ವೇತಾ ಶಬರೀಶ್​ ಸಭೆಯನ್ನು ಮುಂದಿನ ತಿಂಗಳಿಗೆ ಮುಂದೂಡಿರುವುದಾಗಿ ಹೇಳಿ ತಮ್ಮ ಕೊಠಡಿ ಸೇರಿಕೊಂಡರು. ಹಿಂದಿನ ಸಭೆಯೂ ಇದೇ ರೀತಿ ಬರಕಾಸ್ತು ಆಗಿದ್ದರಿಂದ ಅಸಮಾಧಾನಗೊಂಡಿದ್ದ ಕೆಲವು ಹಿರಿಯ ಸದಸ್ಯರು ಆಯುಕ್ತರ ಮನವೊಲಿಸಿ ಅಧ್ಯಕ್ಷೆ ಕೊಠಡಿಯಲ್ಲಿ ಸಂಧಾನ ನಡೆಸಲು ಯತ್ನಿಸಿದರು. ಸಭೆ ನಂತರ ಜ.4ಕ್ಕೆ ಸಾಮಾನ್ಯ ಸಭೆ ನಡೆಸುವುದಾಗಿ ತೀಮಾರ್ನಿಸಲಾಯಿತೆಂದು ಸಿಬ್ಬಂದಿ ನಟರಾಜ್​ ತಿಳಿಸಿದರು.

ಕೊನೆೆಗೆ ಈ ಸದಸ್ಯರು ಆಯುಕ್ತೆ ಬೆಂಬಲಕ್ಕೆ ನಿಂತ ರಾಜೇಶ್​ ಮತ್ತಿತರರನ್ನು ನಿಮಗೆ ಚರ್ಚೆಯಲ್ಲಿ ಭಾಗವಹಿಸುವ ಹಕ್ಕಿಲ್ಲ ಎಂದರು. ಆಗ ಮಧ್ಯೆ ಪ್ರವೇಶಿಸಿದ ಮುರಳಿಗೌಡ, ಅವರಿಗೂ ಚರ್ಚೆ ನಡೆಸಲು ಸಮಾನ ಅವಕಾಶವಿದೆ ಎಂದು ಮನವರಿಕೆ ಮಾಡಿಸಲು ಯತ್ನಿಸಿದರು.

ನಾಮನಿರ್ದೇಶಿತರ ಮೇಲೆ ಕೆಂಗಣ್ಣು: ಪೌರಾಯುಕ್ತೆ ಬಿ. ಎಸ್​. ಸುಮಾ ಸಭೆ ನಡೆಸಲು ಸಾಧ್ಯವಾಗದಿದ್ದರೆ ಸಭೆಯಿಂದ ಹೊರನಡೆಯಬೇಕು ಎಂದು ಸೈಯದ್​ ಸಮೀಉಲ್ಲಾ, ಅಂಬರೀಶ್​, ಎಂ.ಸುರೇಶ್​ ಬಾಬು ಮತ್ತಿತರರು ಈ ಹಿಂದಿನ ಸಭೆಯಂತೆಯೇ ಈ ಬಾರಿಯೂ ವಾಗ್ದಾಳಿ ನಡೆಸಿದರು. ನಿಮ್ಮಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಮೌನವಹಿಸುವುದಕ್ಕೆ ಸಭೆಯಲ್ಲಿ ಪಾಲ್ಗೊಂಡಿದ್ದೀರಿ? ಕೂಡಲೇ ಸಭೆಯಿಂದ ಹೊರಹೋಗಿ ಎಂದು ಗರ್ಜಿಸಿದರು. ಕಡೆಗೆ ಈ ಸದಸ್ಯರು ಆಯುಕ್ತೆ ಬೆಂಬಲಕ್ಕೆ ನಿಂತ ನಾಮನಿರ್ದೇಶಿತ ಸದಸ್ಯ ರಾಜೇಶ್​ ಮತ್ತಿತರರನ್ನು ನಿಮಗೆ ಚರ್ಚೆಯಲ್ಲಿ ಭಾಗವಹಿಸುವ ಹಕ್ಕಿಲ್ಲ ಎಂದರು. ಆಗ ಮಧ್ಯೆ ಪ್ರವೇಶಿಸಿದ ಮುರಳಿಗೌಡ, ಅವರಿಗೂ ಚರ್ಚೆ ನಡೆಸಲು ಸಮಾನ ಅವಕಾಶವಿದೆ ಎಂದು ಮನವರಿಕೆ ಮಾಡಿಸಲು ಯತ್ನಿಸಿದರು.

ಮಧ್ಯೆ ಪ್ರವೇಶಿಸಿದ ಪೊಲೀಸರು: ನಗರ ಸಂಚಾರಿ ಠಾಣೆ ಇನ್​ಸ್ಪೆಕ್ಟರ್​ ಅಣ್ಣಯ್ಯ ನೇತೃತ್ವದಲ್ಲಿ ಸಭೆಗೆ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿತ್ತು. ಸದಸ್ಯರು ಕೈಕೈ ಮಿಲಾಯಿಸುವ ಹಂತ ತಲುಪಿದ್ದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ಸದಸ್ಯರನ್ನು ಸಮಾಧಾನಪಡಿಸಿದರು. ಪೌರಾಯುಕ್ತರು ಸುರಕ್ಷಿತವಾಗಿ ಕೊಠಡಿಗೆ ತೆರಳಲು ಅನುವು ಮಾಡಿಕೊಟ್ಟರು. ಸಾಮಾನ್ಯ ಸಭೆ ಪೊಲೀಸರ ಬಂದೋಬಸ್ತ್​ನಲ್ಲಿ ನಡೆದಿದ್ದು, ಅಭಿವೃದ್ಧಿ ಮರೆತು ಅನಗತ್ಯವಾಗಿ ಕಿತ್ತಾಡುತ್ತಿರುವ ಸದಸ್ಯರ ನಡವಳಿಕೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net