ಸಮಾಜ ಜಾಗೃತಗೊಳಿಸುವ ಕೆಲಸ ಮಾಧ್ಯಮ ಕ್ಷೇತ್ರದ್ದು

Shimogga kuwj Pratibha Puraskara
Published on

ಶಿವಮೊಗ್ಗ: ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಸವಾಲು ಎದುರಾದಾಗ ಮಾಧ್ಯಮ ದಿಟ್ಟವಾಗಿ ನಿಂತಿದೆ. ಲೇಖನಿ ಮೂಲಕ ರಾಷ್ಟ್ರದ ದಿಕ್ಕು ತೋರುವ ಕೆಲಸ ಮಾಡಿದ್ದು, ಪತ್ರಿಕೆಗಳು ಎಂದಿಗೂ ಹಳತಾಗಲು ಸಾಧ್ಯವೇ ಇಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಭಾಗಿತ್ವದಲ್ಲಿ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮ ರಂಗಕ್ಕೂ ಇಂದು ಸಾಕಷ್ಟು ಸವಾಲುಗಳಿವೆ. ಸಾಮಾಜಿಕ ಜಾಲತಾಣಗಳು ಇದ್ದರೂ ದಿನನಿತ್ಯ ಮುಂಜಾನೆ ಪತ್ರಿಕೆ ಓದುವುದರಿಂದ ಮಾತ್ರ ಸಮಾಧಾನ ಸಿಗಲಿದೆ. ಸಮಾಜವನ್ನು ಜಾಗೃತಗೊಳಿಸಲು ಲೇಖನಗಳು ಇಂದಿಗೂ ಬೇಕಾಗಿದೆ ಎಂದರು.

ಸವಾಲಿನ ಮಧ್ಯೆಯೂ ಮಾಧ್ಯಮ ಈಜಬೇಕಿದೆ ಎಂದರು. ವಿಚಾರ ಏನೇ ಇದ್ದರೂ ವಾಸ್ತವತೆಯನ್ನು ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ. ಸತ್ಯವನ್ನೂ ಆಳವಾಗಿ ನೋಡಿದಾಗ ಅಂಬೇಡ್ಕರ್ ಅವರನ್ನು ಮೂಖನಾಯಕನನ್ನಾಗಿ ಮಾಡಿದ್ದು ಯಾರು? ಎಂಬ ಬಗ್ಗೆ ಸಮಾಜದಲ್ಲಿ ಚರ್ಚೆ ಆಗಬೇಕಿದೆ. ಮಡಿವಂತಿಕೆ ವಿರುದ್ಧ ಹೋರಾಟ ಮಾಡಿದ್ದರ ಬಗ್ಗೆ ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಪತ್ರಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ

ಮಿಂಚು ಶ್ರೀನಿವಾಸ್ ಪ್ರಶಸ್ತಿ ಪುರಸ್ಕೃತ ‘ವಿಜಯವಾಣಿ’ ಶಿವಮೊಗ್ಗ ಸ್ಥಾನಿಕ ಸಂಪಾದಕ ಚಂದ್ರಶೇಖರ್ ಶೃಂಗೇರಿ ಸೇರಿ ಮಾಧ್ಯಮ ಅಕಾಡೆಮಿ ಹಾಗೂ ವಿವಿಧ ದತ್ತಿ ಪುರಸ್ಕಾರಗಳಿಗೆ ಭಾಜನರಾದ ಆರುಂಡಿ ಶ್ರೀನಿವಾಸಮೂರ್ತಿ, ರವಿ ಬಿದನೂರು, ಗಿರೀಶ್ ಉಮ್ರಾಯ್, ಕವಿತಾ ಪ್ರಶಾಂತ್, ಸೆನ್ಸಾರ್ ಮಂಡಳಿ ಸದಸ್ಯ ವೈದ್ಯನಾಥ್, ಚಲನಚಿತ್ರ ಅಕಾಡೆಮಿ ಸದಸ್ಯ ದೇಶಾದ್ರಿ ಹೊಸ್ಮನಿ ಅವರನ್ನು ಅಭಿನಂದಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಗರಿಷ್ಠ ಅಂಕಗಳಿಸಿದ ಶರಣ್ಯಾ ನಾಯಕ್, ನವ ನಾಯಕ್, ರಘು ಸಮರ್ಥ ನಾಡಿಗ್, ವೈ.ಎಸ್.ಅನಿಕೇತನ್, ವೈ.ಎಸ್.ಆಯುಷ್, ಕೆ.ಎನ್.ಶ್ರೇಯಾ, ಸಮರ್ಥ ಕಿರುವಾಸೆ ಅವರಿಗೆ ಪತ್ರಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಾಮಾಜಿಕ ಜಾಲತಾಣ ಬಂದ ನಂತರ ಮಾಧ್ಯಮ ಕ್ಷೇತ್ರದ ಚಿತ್ರಣ ಬದಲಾಗಿದೆ. ಓದುಗನೀಗ ಪತ್ರಕರ್ತನಾಗಬಹುದು. ಅದು ಸಾಮಾಜಿಕ ಜಾಲತಾಣದಿಂದ ಸಾಧ್ಯವಾಗಿದೆ. ಇದೇ ವೇಳೆ ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಇಲ್ಲದಿರುವುದು ದೌರ್ಭಾಗ್ಯವಾಗಿದೆ. ಊರಿನ ಸಮಸ್ಯೆಗಳ ಬಗ್ಗೆ ಅಭಿವ್ಯಕ್ತಗೊಳಿಸಲು ಪತ್ರಿಕೆಗಳೇ ಬೇಕಾಗಿಲ್ಲ. ಆಳವಾದ ಅಧ್ಯಯನ, ಚಿಂತನೆ ಇಂದು ಬೇಕಾಗಿಲ್ಲ.

- ದಿನೇಶ್ ಅಮೀನ್‌ಮಟ್ಟು, ಹಿರಿಯ ಪತ್ರಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net