ರಾಜ್ಯದ ಮೇಯರ್​ಗಳು ಅತಿ ದುರ್ಬಲ...! ದೇಶದ 9 ನಗರಗಳೊಂದಿಗೆ ತುಲನೆ ಮಾಡಿದಾಗ ಹೊರಬಿದ್ದ ಸತ್ಯ

CAG
Published on

ಬೆಂಗಳೂರು: ದೇಶದ ಬೇರೆ ಬೇರೆ ಪ್ರಮುಖ ನಗರಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದ ನಗರಗಳ ಮೇಯರ್​​ಗಳು ದುರ್ಬಲ ನೆಲೆಗಟ್ಟಿನಲ್ಲಿದ್ದಾರೆ ಎಂದು ರಾಷ್ಟ್ರದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ವ್ಯಾಖ್ಯಾನಿಸಿದ್ದಾರೆ.

ಆಡಳಿತ ನಿರ್ವಹಣೆ, ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ, ಅಧಿಕಾರ ಚಲಾಯಿಸುವ ಅವಕಾಶ ಸೇರಿ ವಿವಿಧ ಆಯಾಮಗಳಲ್ಲಿ ತುಲನೆ ಮಾಡಿರುವ ಸಿಎಜಿ, ಕರ್ನಾಟಕದ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್, ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರು ಅಲಂಕಾರ ಮೂರ್ತಿಗಳಷ್ಟೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಕರ್ನಾಟಕದಲ್ಲಿ ಮಹಾನಗರ ಪಾಲಿಕೆಗಳ ಮೇಯರ್- ಉಪಮೇಯರ್ ಗಳ ಅಧಿಕಾರ ಅವಧಿಯು ಚುನಾವಣೆಯ ದಿನಾಂಕದಿಂದ ಒಂದು ವರ್ಷವಾದರೆ ಬೇರೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೇಯರ್ ಅವಧಿಯು ಚುನಾವಣೆಯ ದಿನಾಂಕದಿಂದ 30 ತಿಂಗಳಾಗಿರುತ್ತದೆ. ಇದರಿಂದ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಲಾಗಿದೆ.

ಈ ಹುದ್ದೆಗಳನ್ನು ವಿವಿಧ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ ಮಹಿಳೆ ಮತ್ತು ಸಾಮಾನ್ಯ ವರ್ಗಗಳಿಗೆ ಮೀಸಲಾಗಿದೆ ಮತ್ತು ಅದನ್ನು ಸರತಿಯಲ್ಲಿ ಅನುಷ್ಠಾನ ಮಾಡಲಾಗಿದೆ. ಆದ್ದರಿಂದ ಒಂದು ವರ್ಷದ ಅವಧಿ ಪರಿಣಾಮಕಾರಿ ಸುಧಾರಣೆ ಕೈಗೊಳ್ಳಲು ತುಂಬಾ ಕಡಿಮೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಾಯಕತ್ವದ ಬದಲಾವಣೆಯಿಂದ ಆದ್ಯತೆಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ ಬಹಳಷ್ಟು ಸಲ ಮೇಯರ್‌ಗಳು ತಮ್ಮ ಘೋಷಿಸಿದ ಯೋಜನೆಗಳನ್ನು ನೋಡಲು ಸಿಗದಿರಬಹುದು ಎಂದು ಕುಟುಕಿದೆ. ಒಬ್ಬ ಮೇಯರ್ ತೆಗೆದುಕೊಂಡ ತೀರ್ಮಾನ ಅನುಷ್ಠಾನಕ್ಕೆ ಬರುವಷ್ಟರಲ್ಲೇ ಮತ್ತೊಬ್ಬ ಮೇಯರ್ ಆ ಸ್ಥಾನದಲ್ಲಿ ಆಸೀನರಾಗಿ ತಮ್ಮ ಕಲ್ಪನೆ ಯೋಜನೆ ತೆಗೆದುಕೊಳ್ಳುವುದು ರಾಜ್ಯದ ಜನರು ಸ್ಪಷ್ಟವಾಗಿ ಅರಿತಿದ್ದಾರೆ. ಅದನ್ನು ಸಿಎಜಿ ಸರ್ಕಾರಕ್ಕೆ ಎತ್ತಿ ತೋರಿಸಿದೆ. ಈ ರೀತಿ ಆಗುವುದರಿಂದ ಮೇಯರ್ ಅಥವಾ ಅಧ್ಯಕ್ಷರಾದವರ ಕಲ್ಪನೆ ಅನುಷ್ಠಾನಕ್ಕೆ ಬರುವುದೇ ಇಲ್ಲ. ಅರ್ಧಂಬರ್ಧವಾಗಲಿದೆ. ಅಂತಿಮವಾಗಿ ದೇಶದ ವಿವಿಧ ನಗರಗಳಲ್ಲಿನ ಮೇಯರ್‌ಗಳ ಅಧಿಕಾರಾವಧಿ ಮತ್ತು ಅಧಿಕಾರಕ್ಕೆ ಹೋಲಿಕೆ ಗಮನಿಸಿದಾಗ ಕರ್ನಾಟಕದ ನಗರಗಳ ಮೇಯರ್‌ಗಳು ದುರ್ಬಲ ನೆಲೆಗಟ್ಟಿನಲ್ಲಿದ್ದಾರೆ ಎಂದು ಸಿಎಜಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಯಾವ ನಗರಗಳ ಜತೆ ಹೋಲಿಕೆ?: ವಿವಿಧ ರಾಜ್ಯಗಳ ಪ್ರಮುಖ ನಗರಗಳಾದ ಭೂಪಾಲ್, ಭುವನೇಶ್ವರ, ಚೆನ್ನೈ, ಡೆಹರಾಡೂನ್, ಗುವಾಹಾಟಿ, ಹೈದರಾಬಾದ್, ಜೈಪುರ, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಲೂಧಿಯಾನ, ಪಾಟ್ನಾ, ರಾಯಪುರ, ರಾಂಚಿ, ತಿರುವನಂತಪುರ, ವಿಶಾಖಪಟ್ಟಣದಲ್ಲಿ ಇರುವ ಮೇಯರ್ ಪವರ್ ಅನ್ನು ಕರ್ನಾಟಕದ ಸ್ಥಳೀಯ ಸಂಸ್ಥೆಯ ಜತೆ ಹೋಲಿಕೆ ಮಾಡಲಾಗಿದೆ.

ಮೇಯರ್ ಪವರ್: ದೇಶದ ಕನಿಷ್ಠ 16 ನಗರಗಳು ಕೌನ್ಸಿಲ್ ಗಳ ಅವಧಿಗೆ ಸಮಾನವಾಗಿ ಐದು ವರ್ಷಗಳ ಮೇಯರ್ ಗಳ ಅಧಿಕಾರವಧಿ ಹೊಂದಿದೆ. 16 ನಗರಗಳ ಪೈಕಿ ಆರರಲ್ಲಿ ಮೇಯರ್ ಹುದ್ದೆಗೆ ನೇರ ಚುನಾವಣೆ ನಡೆಯುವುದು. ಕೋಲ್ಕತ್ತಾದಲ್ಲಿ ಮೇಯರ್ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿದ್ದಾರೆ ಎಲ್ಲ ಯೋಜನೆಗಳಿಗೆ ಮೇಯರ್ ಅನುಮೋದನೆ ನೀಡಬೇಕಾಗಿದೆ. ಬಿಲ್‌ಗಳಿಗೆ ಸಹಿ ಮಾಡುವ ಮತ್ತು ಅನುಮೋದನೆ ಮಾಡುವ ಅಧಿಕಾರವಿದೆ. ಸೇವಾ ಕಾರ್ಯಗಳನ್ನು ನಿರ್ವಹಿಸಲು ನಿರ್ದೇಶಿಸಬಹುದು. ಕೊಲ್ಕತ್ತಾ ಹೊರತುಪಡಿಸಿ ಕೊಚ್ಚಿ ಮತ್ತು ಜೈಪುರದ ಮೇಯರ್‌ಗಳು ಸಹ ಎಲ್ಲ ಯೋಜನೆಗಳಿಗೆ ಅನುಮೋದನೆ ನೀಡುತ್ತಾರೆ ಮತ್ತು ಬಿಲ್ ಗಳಿಗೆ ಸಹಿ ಮಾಡಿ, ಅನುಮೋದನೆ ನೀಡುವ ಅಧಿಕಾರ ಹೊಂದಿದ್ದಾರೆ. ಕೊಚ್ಚಿಯಲ್ಲಿ ಅಧಿಕಾರಿಗಳನ್ನು (ಗೆಜೆಟೆಡ್ ಹೊರತುಪಡಿಸಿ) ಅಮಾನತುಗೊಳಿಸುವ ಅಧಿಕಾರನ್ನು ಮೇಯರ್ ಹೊಂದಿದ್ದಾರೆ.

ಸಿಎಜಿ ಸಲಹೆಗಳಿವು
  • ಸುಧಾರಣೆ ಕ್ರಮ ಕೈಗೊಳ್ಳಲು ಕಾಲಾವಧಿ ಹೆಚ್ಚಾಗಬೇಕು. ದೀರ್ಘಾವಧಿ ಯೋಜನೆಗೆ ಬಾಧೆ
  • ನಾಯತಕತ್ವ ಬದಲಾವಣೆಯಿಂದ ಆದ್ಯತೆಗಳು ಹಳ್ಳಹಿಡಿಯಲಿವೆ, ದೀರ್ಘಾವಧಿ ಬೇಕು
  • ಮೇಯರ್ ತಾವು ಘೋಷಿಸಿದ ಯೋಜನೆಯ ಕೊನೆ ಹಂತ ನೋಡುವುದಕ್ಕಾದರೂ ಅವಧಿ ವಿಸ್ತರಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net