ಮೈಸೂರು ಪಾಲಿಕೆ ಆಯುಕ್ತರ ವಿರುದ್ಧ ಮೇಯರ್ ದೂರು

mcc meeting
Published on

ಮೈಸೂರು: ‘ಮೇಯರ್ ಅಧಿಕಾರ ಮೊಟಕು’ ವಿಚಾರ ಇದೀಗ ಸರ್ಕಾರದ ಅಂಗಳದವರೆಗೂ ತಲುಪಿದ್ದು, ನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ವಿರುದ್ಧ ಮೆಯರ್ ಶಿವಕುಮಾರ್ ಸರ್ಕಾರಕ್ಕೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸರ್ಕಾರದ ಮುಖ್ಯಕಾರ್ಯದರ್ಶಿ, ನಗರಾಭಿವೃದ್ಧಿ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಆಯುಕ್ತರಿಗೆ ಮೇಯರ್ ಪತ್ರ ಬರೆದು ಆಯುಕ್ತರು ನಿಯಮ ಬಾಹಿರವಾಗಿ ನಡೆದುಕೊಂಡಿರುವ ಕುರಿತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಒಂದುವೇಳೆ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯದೆ ಇದ್ದರೆ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.

ಮೇಯರ್ ಶಿವಕುಮಾರ್ ಆ.31 ರಂದು ಬೆಳಗ್ಗೆ 11ಕ್ಕೆ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ತಮ್ಮ ಅವಧಿಯ ಕಡೆಯ ಪಾಲಿಕೆ ಕೌನ್ಸಿಲ್ ಸಭೆ ಹಮ್ಮಿಕೊಂಡಿದ್ದರು. ಆದರೆ, ಅದೇ ದಿನ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಬೆಂಗಳೂರಿನಲ್ಲಿ ನಗರದ ಅಭಿವೃದ್ಧಿಗೆ ಕುರಿತು ಸಭೆ ಏರ್ಪಡಿಸಿದ್ದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳು ತೆರಳುವ ಅನಿವಾರ್ಯತೆ ಇತ್ತು. ಹೀಗಾಗಿ ಆಯುಕ್ತರ ಸೂಚನೆ ಮೇರೆಗೆ ಕೌನ್ಸಿಲ್ ಕಾರ್ಯದರ್ಶಿ ಸಭೆಯನ್ನು ಮೂದೂಡಿದ್ದರು.

ಕರ್ನಾಟಕ ಮುನ್ಸಿಪಲ್ ಕಾಪೋರೇಷನ್ ಕಾಯ್ದೆ ಪ್ರಕಾರ ಸಭೆಯನ್ನು ಕರೆಯುವ ಹಾಗೂ ಮುಂದೂಡುವ ಅಧಿಕಾರ ಇರುವುದು ಮೇಯರ್‌ಗೆ ಮಾತ್ರ. ಆದರೆ, ಮೇಯರ್ ಗಮನಕ್ಕೆ ತಾರದೆ ಅಯುಕ್ತರು ಸಭೆ ಮುಂದೂಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net