

ಬೆಂಗಳೂರು: ಸ್ಫೋರ್ಟ್ಸ್ ಶಾಪ್‌ನಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆನೇಕಲ್ ನಿವಾಸಿ ಆನಂದ್ (೨೯) ಬಂಧಿತ. ಆರೋಪಿಯಿಂದ ೨,೩೬ ಲಕ್ಷ ರೂ. ಮೌಲ್ಯದ ಕಾರ್ ಆಕ್ಸಿಸಿರೀಸ್, ಸ್ಪೋರ್ಟ್ಸ್ ವಸ್ತುಗಳು, ೧,೫೩ ಲಕ್ಷ ರೂ. ನಗದು, ೧ ಕಾರು ವಶಕ್ಕೆ ಪಡೆಯಲಾಗಿದೆ.
ಆರೋಪಿ ಇತ್ತೀಚೆಗೆ ಕೋಣನಕುಂಟೆ ಠಾಣೆ ವ್ಯಾಪ್ತಿಯ ಆರ್‌ಬಿಐ ಲೇಔಟ್‌ನ ಬ್ರಿಗೇಡ್ ಮಿಲೇನಿಯಂ ಸಿಗ್ನಲ್ ಬಳಿ ಇರುವ ದಿ ಸ್ಫೋರ್ಟ್ಸ್ ಶಾಪ್ ಅಂಗಡಿಯಲ್ಲಿ ೮೦ ಸಾವಿರ ರೂ. ನಗದು ಹಾಗೂ ಸ್ಫೋರ್ಟ್ಸ್ ಬಟ್ಟೆಗಳು ಹಾಗೂ ವಸ್ತುಗಳನ್ನು ಕಳವು ಮಾಡಿದ್ದ. ಅಲ್ಲದೆ, ಬನ್ನೇರುಘಟ್ಟ ರಸ್ತೆ ಗೊಟ್ಟೆಗೆರೆಯಲ್ಲಿರುವ ಮತ್ತೊಂದು ಕಾರ್ ಆಕ್ಸಿಸರೀಸ್ ಮತ್ತು ಟೈಯರ್ ಪಾರ್ಕ್ ಅಂಗಡಿಯಲ್ಲೂ ಕಳ್ಳತನ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಈ ಹಿಂದೆ ಸೆಂಟ್ರಿಂಗ್ ಹಾಗೂ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಕಳೆದ ೩-೪ ವರ್ಷಗಳಿಂದ ಕಳ್ಳತನ ಕೃತ್ಯದಲ್ಲಿ ತೊಡಗಿದ್ದಾನೆ. ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯನ್ನು ಬಾಡಿ ವಾರೆಂಟ್ ಪಡೆದು ವಿಚಾರಣೆ ನಡೆಸಿದಾಗ ಸ್ಫೋರ್ಟ್ಸ್ ಅಂಗಡಿ ಹಾಗೂ ಕಾರ್ ಆಕ್ಸಿಸಿರೀಸ್ ಅಂಗಡಿಯಲ್ಲಿ ಕಳವು ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಅಲ್ಲದೆ, ಕಳವು ವಸ್ತುಗಳು ಹಾಗೂ ನಗದನ್ನು ಜಿಗಣಿ ಹೋಬಳಿಯ ಮಾಸ್ತೇನಹಳ್ಳಿಯಲ್ಲಿರುವ ತನ್ನ ಸಹೋದರಿ ಮನೆಯಲ್ಲಿ ಇರಿಸಿದ್ದ. ಇದೀಗ ಎಲ್ಲವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.