

ಬೆಂಗಳೂರು: ಮೊದಲೇ ಮದುವೆ ಆಗಿರುವ ವಿಚಾರ ಗೊತ್ತಾಗಿ ದೂರವಾದ ಪ್ರೇಯಸಿಯನ್ನು ಕೊಲೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ 71ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ರೂಪೇನ ಅಗ್ರಹಾರ ಎನ್‌ಜಿಆರ್ ಲೇಔಟ್ ನಿವಾಸಿ ಭಾರತಿ ಕೊಲೆಯಾದ ಯುವತಿ. ಈಕೆಯನ್ನು ಕೊಂದ ಎಲೆಕ್ಟ್ರಾನಿಕ್ ಸಿಟಿ-2ನೇ ಹಂತದ ಬಸವನಗರದ ಸೆಲ್ವ (30) ಎಂಬಾತನಿಗೆ ನ್ಯಾಯಾಧೀಶರಾದ ಬಾಲಚಂದ್ರ ಎನ್. ಭಟ್ ಶಿಕ್ಷೆ ವಿಧಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಆರ್. ಸತ್ಯವತಿ ವಾದ ಮಂಡಿಸಿದ್ದರು.
ಭಾರತಿ ಎಂಬಾಕೆ ಹಿಂದೆ ಎರಡು ವರ್ಷ ಹಿಂದೆ ಬಿದ್ದು ಪ್ರೀತಿಸುವ ನಾಟಕವಾಡಿ ಮದುವೆಗೆ ಒಪ್ಪಿಸಿದ್ದ. ಅಷ್ಟರಲ್ಲಿ ಸೆಲ್ವಗೆ ಈ ಮೊದಲೇ ಮದುವೆ ಆಗಿದ್ದು, ಇಬ್ಬರು ಮಕ್ಕಳಿರುವ ವಿಚಾರ ಭಾರತಿಗೆ ತಿಳಿದಿತ್ತು. ನಂತರ ಸೆಲ್ವನ ಜತೆ ಮದುವೆ ಆಗಲು ನಿರಾಕರಿಸಿ ಬೇರೊಬ್ಬ ಯುವಕನೊಂದಿಗೆ ಮದುವೆ ಆಗಲು ಒಪ್ಪಿದ್ದಳು.
ಇದನ್ನು ತಿಳಿದ ಸೆಲ್ವ, ಆಕೆಯ ಹಿಂದೆ ಬಿದ್ದು ಮದುವೆಗೆ ಒತ್ತಾಯ ಮಾಡುತ್ತಿದ್ದ. 2019ರ ಮೇ 10ರಂದು ಭಾರತಿಯನ್ನು ಪುಸಲಾಯಿಸಿ ಕಾರಿನಲ್ಲಿ ಕರೆದೊಯ್ದು ಆಕೆಯ ರೂಮ್‌ನಲ್ಲಿ ದುಪಟ್ಟದಿಂದ ಕತ್ತು ಬಿಗಿದು ಕೊಲೆ ಮಾಡಿದ್ದ.ಬೊಮ್ಮನಹಳ್ಳಿ ಪೊಲೀಸರು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.